ಮೈಸೂರು, ಜೂನ್ 17(www.justkannada.in): ಮೈಸೂರು ರೇಸ್ ಕೋರ್ಸ್ ಆವರಣದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆಯನ್ನು ಪೂರ್ವಭಾವಿಯಾಗಿ ಜೂನ್ 18 ರಂದು ಆಯೋಜಿಸಿದ್ದು, ಆಗಮಿಸುವ ಯೋಗಭ್ಯಾಸಿತರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ. ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀತಾಲಕ್ಷ್ಮಿ ಅವರು ತಿಳಿಸಿದ್ದಾರೆ.

ಅಂದು ಮುಂಜಾನೆ, 5 ಗಂಟೆಗೆ ಬಸ್ ಸಂಚಾರ ಆರಂಭವಾಗುತ್ತದೆ. ನಗರ ಬಸ್ ನಿಲ್ದಾಣದ ಚಾಮುಂಡಿಬೆಟ್ಟ ಪ್ಲಾಟ್‍ಫಾರಂ, ಕುವೆಂಪು ನಗರದ ಆರ್.ಎಂ.ಪಿ. ಕ್ವಾಟ್ರಸ್ ಸ್ಟಾಪ್, ಕಾವೇರಿ ಶಾಲೆ ಬಸ್ ನಿಲ್ದಾಣ, ಆಂದೋಲನ ವೃತ್ತ ನಿಲ್ದಾಣ, ಅಕ್ಷಯ ಭಂಡಾರ ನಿಲ್ದಾಣ, ವಿಜಯ ನಗರ 3ನೇ ಹಂತದ ಬಸವರಾಜ ವೃತ್ತ, 2ನೇ ಹಂತದ ಬಿ.ಎಂ. ಆಸ್ಪತ್ರೆ ಬಸ್ ನಿಲ್ದಾಣ, ರಾಘವೇಂದ್ರ ನಗರದ ಪುಟ್ಟಮ್ಮ ಮಲ್ಲಪ್ಪ ಚೌಲ್ಟ್ರಿ ನಿಲ್ದಾಣ, ಗಾಯತ್ರಿಪುರಂ ಪೆಟ್ರೋಲ್ ಬಂಕ್ ನಿಲ್ದಾಣ, ಶಕ್ತಿ ನಗರದ ಆರ್.ಟಿ.ಒ. ವೃತ್ತದ ನಿಲ್ದಾಣ, ಬೋಗಾದಿ ಹರ್ಷ ಬಾರ್ ನಿಲ್ದಾಣ, ಮಾತೃ ಮಂಡಳಿ ನಿಲ್ದಾಣ, ಜಯಲಕ್ಷ್ಮಿಪುರಂ ಕೆನರಾ ಬ್ಯಾಂಕ್ ನಿಲ್ದಾಣ, ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಬಸ್ ಸಂಚಾರ ಮಾಡಲಿದೆ.

ಕೆ.ಎಸ್.ಆರ್.ಟಿ.ಸಿ. ನಿಗದಿಪಡಿಸಿರುವ ದರ ಪಾವತಿಸಿ ಬಸ್ ಸೌಲಭ್ಯ ಪಡೆಯಬಹುದಾಗಿದೆ. ಈ ಬಸ್‍ಗಳು ರೇಸ್‍ಕೋರ್ಸ್ ಬಳಿ ಬಂದು ಇಳಿಸಲಿದ್ದು, ಇಲ್ಲಿಂದ ವಿವಿಧ ಗೇಟ್‍ಗಳಿಗೆ ತೆರಳಿಲು ಸಕ್ರ್ಯೂಟ್ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್‍ನಲ್ಲಿ ಪ್ರಯಾಣಿಸುವವರೇ ಟಿಕೇಟ್ ಖರೀದಿಸಬೇಕಾಗುತ್ತದೆ. ಸಕ್ರ್ಯೂಟ್ ಬಸ್ ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.