ಸುಖ ನಿದ್ರೆಗೆ ಇಲ್ಲಿವೆ ಸರಳ ಸೂತ್ರಗಳು!

0
721

ಆಧುನಿಕ ಪ್ರಪಂಚದಲ್ಲಿ ನಿದ್ರಾಹೀನತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಪಟ್ಟಣ ಪ್ರದೇಶದಲ್ಲಿನ ವೈದ್ಯರುಗಳಲ್ಲಿ ಬರುವ ರೋಗಿಗಳಲ್ಲಿ ಶೇಕಡಾ 15ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿರುವವರಾಗಿರುತ್ತಾರೆ. ಇದಕ್ಕೆ, ಇತ್ತೀಚೆಗೆ ಗಣನೀಯವಾಗಿ ಹೆಚ್ಚುತ್ತಿರುವ ಒತ್ತಡ, ದೈಹಿಕ ಶ್ರಮ ರಹಿತ ಜೀವನ ಪದ್ಧತಿಗಳೇ ಕಾರಣ ಎನ್ನುತ್ತಾರೆ ತಜ್ಞರು.

ದೈಹಿಕ ಶ್ರಮವಹಿಸಿ ಕೆಲಸ ಮಾಡುವ ರೈತ ರಾತ್ರಿ 9 ರಿಂದ ಮುಂಜಾನೆಯವರೆಗೆ ಸುಖವಾದ ನಿದ್ರೆ ಮಾಡುತ್ತಾನೆ. ಆತನ ಆರೋಗ್ಯ ಸಹ ಚೆನ್ನಾಗಿರುತ್ತದೆ. ಅದೇ ಮಾನಸಿಕ ಒತ್ತಡದಿಂದ ಕೆಲಸ ಮಾಡುವ ರಾಜಕಾರಣಿ, ವ್ಯಾಪಾರಿ, ವಕೀಲ, ಕಂಪ್ಯೂಟರ್ ಇಂಜಿನಿಯರ್ ಮುಂತಾದವರು ರಾತ್ರಿ ನಿದ್ರೆ ಬಾರದೇ ನಿದ್ರೆಯ ಮಾತ್ರೆಗಳಿಗೆ ಶರಣಾಗುತ್ತಾರೆ. ಹಾಗೂ ಅನೇಕ ದೈಹಿಕ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಸುಖನಿದ್ರೆಗೊಸ್ಕರ ಕೆಲವು ಸರಳ ವಿಧಾನಗಳು ಇಲ್ಲಿವೆ.

* ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯ ಕಾಲ ದೈಹಿಕ ವ್ಯಾಯಾಮ ಮಾಡಿ. ಒಂದು ಗಂಟೆಯ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ.
ಕಚೇರಿಯ ವಿಷಯಗಳನ್ನು ಮನೆಯಲ್ಲಿ ಚಿಂತಿಸಬೇಡಿ.

* ನಿನ್ನೆಯ ಬಗೆಗೆ ಅಥವಾ ನಾಳೆಯ ಬಗೆಗೆ ಯಾವಾಗಲೂ ಚಿಂತೆ ಮಾಡುತ್ತಾ ಕುಳಿತುಕೊಳ್ಳಬೇಡಿ. ಪ್ರಸಕ್ತ ಸನ್ನಿವೇಶವನ್ನು ಎದುರಿಸಿ.
ಸಂತೃಪ್ತಿಯಿಂದಿರಿ. ನಮಗೆ ಜೀವನದಲ್ಲಿ ದೊರೆತ ಸೌಲಭ್ಯಗಳಲ್ಲೇ ಸಂತೃಪ್ತಿ ಹೊಂದುವುದನ್ನು ಅಭ್ಯಾಸ ಮಾಡಬೇಕು.

* ದಿನಕ್ಕೆ ಎರಡು ಬಾರಿ ಪ್ರಾರ್ಥಿಸಿ. ಮಾನಸಿಕ ಕ್ಷೋಭೆಗಳಿಂದ ಮುಕ್ತವಾಗಿರಲು ಭಕ್ತಿಯಿಂದ ದಿನಕ್ಕೆರಡು ಬಾರಿ ಪ್ರಾರ್ಥಿಸಿ ಪ್ರತಿನಿತ್ಯದ ದೇವರ ಪೂಜೆಯನ್ನು ಕಾಟಾಚಾರಕ್ಕೊಸ್ಕರ ಮಾಡದೇ ಸಮರ್ಪಣಾಭಾವದಿಂದ ಮಾಡಿ. ಧಾರ್ವಿುಕ ಕೆಲಸಕಾರ್ಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ.

* ರಾತ್ರಿ ಊಟವನ್ನು ಸರಿಯಾದ, ನಿರ್ದಿಷ್ಟ ವೇಳೆಗೆ ಮಾಡುವುದನ್ನು ಅಭ್ಯಾಸ ಮಾಡಿ. ಊಟ ಮತ್ತು ನಿದ್ರೆಯ ನಡುವೆ 2-3 ಗಂಟೆಗಳ ಅವಧಿ ಇರಬೇಕು. ರಾತ್ರಿ ಭಾರಿ ಭೋಜನ ಒಳ್ಳೆಯದಲ್ಲ. ಲಘು ಆಹಾರ ಸಾಕು. ಹಣ್ಣು, ಹಸಿ ತರಕಾರಿ ಹೆಚ್ಚೆಚ್ಚು ಸೇವಿಸಿ.

* ಮಲಗುವ ಮುಂಚೆ ಭಯಾನಕ ಟಿ.ವಿ. ಧಾರವಾಹಿ, ಸಿನಿಮಾಗಳನ್ನು ನೋಡಬೇಡಿ. ಹಾಗೂ ಭಯಾನಕ ಕಥಾಪುಸ್ತಕಗಳನ್ನು ಓದಬೇಡಿ. ದೇವರ ನಾಮವನ್ನು ಸ್ಮರಿಸಿ ನಿದ್ರಿಸಿ. ತಲೆಗೆ, ಪಾದಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿ ಮಲಗಿ.

* ಚಹಾ ಕಾಫಿಗಳಲ್ಲಿ ಅನೇಕ ಉತ್ತೇಜಕ ಪದಾರ್ಥಗಳಿರುತ್ತದೆ. ಇವುಗಳನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸೇವಿಸಿ. ಮದ್ಯಪಾನವನ್ನು ಪೂರ್ತಿಯಾಗಿ ತ್ಯಜಿಸಿ.

* ಯಾವುದೂ ಅತಿಯಾಗಿದ್ದರೆ ಒಳ್ಳೆಯದಲ್ಲ ಅತಿಯಾದ ಊಟ, ಅತಿಯಾದ ಕೆಲಸ, ಅತಿಯಾದ ಲೈಂಗಿಕಾಸಕ್ತಿ ಹತೋಟಿಯಲ್ಲಿಟ್ಟುಕೊಳ್ಳಿ.
ಹಗಲು ಹೊತ್ತಿನಲ್ಲಿ ನಿದ್ರೆ ಮಾಡಬೇಡಿ. ಚಿಕ್ಕಮಕ್ಕಳು, ವಯಸ್ಸಾದವರು ಹಾಗೂ ರೋಗಿಗಳನ್ನು ಬಿಟ್ಟು ಉಳಿದವರು ಹಗಲಿನಲ್ಲಿ ನಿದ್ರೆ ಮಾಡಬೇಕಾಗಿಲ್ಲ.

* ಕೊಠಡಿಯ ಕಿಟಕಿಗಳನ್ನು ತೆರೆದು ಮಲಗಿ, ಪ್ರಕೃತಿದತ್ತವಾದ ಪರಿಶುದ್ಧ ಗಾಳಿ ಸೇವಿಸಿ. ಶುದ್ಧವಾದ ಬೆಡ್​ಶೀಟುಗಳನ್ನು ಬಳಸಿ.
ಪ್ರತಿನಿತ್ಯ ಶವಾಸನದ ಅಭ್ಯಾಸ ಮಾಡಿ. ಅಂಗಾತ ಮಲಗಿ ಇಡೀ ದೇಹಕ್ಕೆ ಪ್ರಜ್ಞಾಪೂರ್ವಕವಾಗಿ ವಿಶ್ರಾಂತಿ ಕೊಡಿ. ಕೊನೆಯಲ್ಲಿ ಓಂಕಾರವನ್ನು 3 ಬಾರಿ ದೀರ್ಘವಾಗಿ ಉಚ್ಛರಿಸಿ ಓಂಕಾರದ ಅಲೆಗಳನ್ನು, ತರಂಗಗಳನ್ನು ಗಮನಿಸುತ್ತಾ ದೇಹಕ್ಕೆ ವಿಶ್ರಾಂತಿ ನೀಡಿ.

* ತುಂಬಾ ಮೆತ್ತಗಿನ ಹಾಸಿಗೆ ಒಳ್ಳೆಯದಲ್ಲ. ಹತ್ತಿಯ 2 ಇಂಚಿನ ಹಾಸಿಗೆ ಉತ್ತಮ. ರಾತ್ರಿ ಮಲಗುವ ಪೂರ್ವದಲ್ಲಿ 20 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಕೈ ಹಾಗೂ ಕಾಲುಗಳನ್ನು ನೆನೆಸಿಡಿ.