ನವದೆಹಲಿ, ಮಾರ್ಚ್ 16 (www.justkannada.in): ಮಕ್ಕಳಿಗೆ ಹೆಚ್ಚು ಹೊತ್ತು ಸ್ಮಾರ್ಟ್ ಫೋನ್ ನೀಡಬೇಡಿ. ಹಾಗೆಯೇ ಹೆಚ್ಚು ಸಮಯ ಟಿವಿ ನೋಡಲೂ ಅವಕಾಶ ಕೊಡಬೇಡಿ! ಕೊಟ್ಟರೆ ಅವರು ಸಕ್ಕರೆ ಕಾಯಿಲೆಗೆ ತುತ್ತಾಗುವುದು ಗ್ಯಾರಂಟಿ!

ಹೌದು. ಪುಟ್ಟ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುವ ಹವ್ಯಾಸ ಬೆಳೆಸಿಕೊಂಡರೆ ಅಂತಹ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಏರ್ಪಡುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಕೇವಲ ಸಕ್ಕರೆ ಕಾಯಿಲೆ ಮಾತ್ರವಷ್ಟೇ ಅಲ್ಲ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುತ್ತಿದ್ದರೆ ಅವರ ಕಣ್ಣಿಗೂ ಗಂಭೀರ ಹಾನಿಯಾಗಲಿದ್ದು, ಮಕ್ಕಳ ಮೆದುಳಿನ ನರಮಂಡಲಕ್ಕೂ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಸ್ಮಾರ್ಟ್ ಫೋನ್ ಗಳಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದ್ದು, ಸ್ಮಾರ್ಟ್ ಫೋನ್ ಗಳು ಜನರ ಜೀವನದಲ್ಲಿ ಬೆರೆತು ಹೋಗಿದೆ. ಇದಕ್ಕೆ ಪೂರಕ ಎಂಬಂತೆ ರಿಯಾಲಿಟಿ ಷೋಗಳ ಅಬ್ಬರ ಮತ್ತು ಫ್ರೀ ಆ್ಯಪ್ ಗಳ ಆಡಂಬರ ಕೂಡ ಮಕ್ಕಳಲ್ಲಿ ಇಂತಹ ಅಪಾಯಕಾರಿ ಬೆಳವಣಿಗೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Key words: Smart phone -watching TV – children -diabetes