ಅಮೆರಿಕೆಯ ಅಸೋಸಿಯೇಷನ್ ಫಾರ್ ಅಡ್ವಾನ್ಸಡ್ ಸೈನ್ಸಸ್ ನ ಸವಾಲು, ಡ್ಯಾನ್ಸ್ ಯುವರ್ ಪಿ.ಎಚ್.ಡಿ..!

0
2618
science-dance-your-Phd-USA

science-dance-your-Phd-USA

ಮೈಸೂರು, ಜೂ.07, 2017 : (www.justkannada.in news ) “ಡಾಕ್ಟರೇಟು ಮಾಡುವುದು ಅಂದರೆ ಸುಮ್ಮನಲ್ಲಪ್ಪಾ? ಗೈಡು ಹೇಳಿದ ಹಾಗೆಲ್ಲ ಕುಣಿಯಬೇಕು,” ಅಂತ ನನ್ನ ಒಬ್ಬ ಮಿತ್ರರು ಹೇಳುತ್ತಿದ್ದರು.

ಹೌದು. ತಮ್ಮ ಸಾಕುನಾಯಿಯನ್ನು ವಾಕಿಂಗ್ ಕರೆದೊಯ್ಯುವ, ಮಕ್ಕಳನ್ನು ಶಾಲೆಗೆ ಕರೆದೊಯ್ದು ತರುವ ಹಾಗೂ ತಮ್ಮ ಹೆಸರಲ್ಲಿಯೇ ಸಂಶೋಧನಾ ಪ್ರಬಂಧಗಳನ್ನು ಬರೆಯುವಂಥಹ ಕೆಲಸಗಳನ್ನು ಸಂಶೋಧನಾ ವಿದ್ಯಾರ್ಥಿಗಳಿಂದ ಮಾಡಿಸಿಕೊಳ್ಳುವ ಗೈಡುಗಳಿರುವುದನ್ನು ಕೇಳಿದ್ದೇವೆ.

ಆದರೆ ಈಗ ಡಾಕ್ಟರೇಟು ವಿದ್ಯಾರ್ಥಿಗಳು ಹೀಗೆ ಗೈಡುಗಳ ತಾಳಕ್ಕೆ ತಕ್ಕಂತೆ ಕುಣಿಯುವುದರ ಬದಲಿಗೆ ನಿಜವಾಗಿಯೂ ಕುಣಿದರೆ ಅಷ್ಟಿಷ್ಟು ಕಾಸು, ಬಹುಮಾನವೂ ಸಿಕ್ಕೀತು. ಹೌದು. ಪಿ ಎಚ್. ಡಿ ಗಳದ್ದೇ ಕುಣಿತ ಎನ್ನುವ ಸ್ಪರ್ಧೆಯನ್ನು ಅಮೆರಿಕೆಯ ಅಸೋಸಿಯೇಷನ್ ಫಾರ್ ಅಡ್ವಾನ್ಸಡ್ ಸೈನ್ಸಸ್ (ಎಎಎಎಸ್) ಸಂಘಟನೆ ನಡೆಸುತ್ತಿದೆ. ಫಿಸಿಕ್ಸ್, ರಸಾಯನ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜೀವಿವಿಜ್ಞಾನವೆಂಬ ನಾಲಕ್ಕು ವಿಭಾಗಗಳಿವೆ. ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನ 500 ಡಾಲರುಗಳು.

ಇದೇನಿದು ಕುಣಿತ ಎಂದಿರಾ? ಹೌದು ನೀವು ಪಿ ಎಚ್ ಡಿ ವಿದ್ಯಾರ್ಥಿಗಳಾಗಿದ್ದಲ್ಲಿ, ನಿಮ್ಮ ಸಂಶೋಧನೆಯ ವಿಷಯವನ್ನು ನೃತ್ಯ ಅಥವಾ ನೃತ್ಯ ರೂಪಕದ ರೀತಿಯಲ್ಲಿ ಪ್ರಸ್ತುತ ಪಡಿಸಿ ಎನ್ನುವ ಸವಾಲೇ ಈ ಸ್ಪರ್ಧೆ. ಡ್ಯಾನ್ಸ್ ಯುವರ್ ಪಿ.ಎಚ್.ಡಿ. ಎನ್ನುವ ಹೆಸರಿನಲ್ಲಿ ನಡೆಯುವ ಸ್ಪರ್ಧೆಗೆ ಈಗ ಹತ್ತನೆಯ ವರ್ಷ.

ಸ್ಪರ್ಧೆಯಲ್ಲಿ ಹದಿನೆಂಟು ವರ್ಷ ವಯಸ್ಸಾಗಿರುವ, ಪಿ ಎಚ್ ಡಿ ವಿದ್ಯಾರ್ಥಿಯಾಗಿರುವ ಯಾವ ಸಂಶೋಧಕರೂ ಭಾಗವಹಿಸಬಹುದು. ತಮ್ಮ ಸಂಶೋಧನಾ ವಿಷಯದ ಕುರಿತು ಒಂದು ನೃತ್ಯವನ್ನೋ, ನೃತ್ಯ ರೂಪಕವನ್ನೋ ತಯಾರಿಸಿ, ವೀಡಿಯೋ ಮಾಡಿ ಯೂಟ್ಯೂಬಿನಲ್ಲಿ ಹಾಕಬೇಕು. ಅನಂತರ ಆ ಮಾಹಿತಿಯನ್ನು ಎಎಎಎಸ್ ಸಂಘದ ವೆಬ್ ಸೈಟಿನಲ್ಲಿ ಸ್ಪರ್ಧೆಗಾಗಿ ಇರುವ ಪುಟದಲ್ಲಿ ನಮೂದಿಸಬೇಕು (http://www.sciencemag.org/projects/dance-your-phd).

ಸೆಪ್ಟೆಂಬರ್ 23 ರಿಂದ 29 ರವರೆಗೆ ಈ ಸ್ಪರ್ಧೆ ನಡೆಯಲಿದೆ. ಮೊದಲ ಹಂತದಲ್ಲಿ ಯೂ-ಟ್ಯೂಬಿನಲ್ಲಿರುವ ವೀಡಿಯೋಗಳಲ್ಲಿನ ವಿಜ್ಞಾನ ಹಾಗೂ ಕಲೆಯ ಗುಣಮಟ್ಟವನ್ನು ಆಧರಿಸಿ ಪ್ರತಿ ವಿಷಯಕ್ಕೂ ಐದೈದು ವೀಡಿಯೋಗಳನ್ನು ಆಯಲಾಗುತ್ತದೆ. ಯಾವ ವೀಡಿಯೋ ಯಾವ ವಿಷಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನೂ ತೀರ್ಪುಗಾರರೇ ನಿರ್ಧರಿಸುತ್ತಾರೆ. ಅನಂತರ ಆ ಐದು ಫೈನಲಿಸ್ಟ್ ಗಳಿಂದ ಒಂದು ವೀಡಿಯೋವನ್ನು ಆಯ್ದು ಆಯಾ ವಿಷಯದಲ್ಲಿ ಪ್ರಥಮ ಬಹುಮಾನ ನೀಡಲಾಗುವುದು. ನಾಲ್ಕೂ ವಿಷಯಗಳಲ್ಲಿ ಪ್ರಥಮ ಬಹುಮಾನ ಪಡೆದ ವೀಡಿಯೋಗಳಲ್ಲಿ ಒಂದಕ್ಕೆ ಸಾವಿರ ಡಾಲರು ಮೊಬಲಗಿನ ಸರ್ವೋತ್ತಮ ಬಹುಮಾನವೂ ಇದೆ.

ಭಾರತೀಯ ಮೂಲದ ಸಂಶೋಧಕ ಆದಿತ್ಯ ವೆಂಪಟ್ಟಿಯ ಸಂಶೋಧನೆ ಅರಾಕಿಡೋನೊಯಿಕ್ ಆಮ್ಲದ ಕ್ರಿಯಾ ಗತಿಗಳ ಬಗ್ಗೆ ನಿರ್ಮಿಸಿದ ನೃತ್ಯರೂಪಕಕ್ಕೆ ಕಳೆದ ವರ್ಷ ಬಹುಮಾನ ದೊರೆತಿತ್ತು. ಇದೋ ಆ ವೀಡಿಯೋ ಇಲ್ಲಿದೆ.

https://www.youtube.com/watch…

ವೆಂಪಟ್ಟಿ ಸಂಶೋಧನೆ ನಡೆಸುತ್ತಿರುವುದು ಅಮೆರಿಕೆಯಲ್ಲಿಯೇ. ಭಾರತದ ಮುಕ್ತಾ ಗುಂಡಿ ನಿರ್ಮಿಸಿದ “ವಯಸ್ಕ ಭಾರತೀಯರಲ್ಲಿ ಮುಟ್ಟು ಮತ್ತು ಆರೋಗ್ಯ” ಕುರಿತ ನೃತ್ಯ ಬಹುಮಾನ ಪಡೆಯದಿದ್ದರೂ ಕೊನೆಯ ಹಂತವನ್ನು ತಲುಪಿತ್ತು. ಆ ವೀಡಿಯೋ ಇಲ್ಲಿದೆ.

https://www.youtube.com/watch…

 ಕೃಪೆ :

Kollegala Sharma

 

key words : science-dance-your-Phd-USA

Announcing the 10th annual Dance Your Ph.D. Contest!