ಬೆಂಗಳೂರು:ನ-15:(www.justkannada.in) ಬೆಂಗಳೂರಿನ ಕಗ್ಗಲೀಪುರದ ಸಾಯಿ ಎಕ್ಸ್‌ಫೋರ್ಟ್ ಗಾರ್ಮೆಂಟ್ಸ್ ಕಾರ್ಖಾನೆ ಸ್ಥಳಾಂತರ ಮಾಡದಂತೆ ಆಗ್ರಹಿಸಿ ಮಹಿಳಾ ಕಾರ್ಮಿಕರು ಕಾರ್ಖಾನೆಯ ಮುಂದೆ ಅಹೋರಾತ್ರಿ ಧರಣಿ ನಡೆಸಿದ ಘಟನೆ ನಡೆದಿದೆ.

ಕಾರ್ಖಾನೆಯನ್ನು ಬೊಮ್ಮನಹಳ್ಳಿಗೆ ಸ್ಥಳಾಂತರ ಮಾಡುವುದಾಗಿ ಆಡಳಿತ ಮಂಡಳಿ ಇತ್ತೀಚೆಗೆ ತಿಳಿಸಿತ್ತು. ಇದರಿಂದ ಓಡಾಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಕಾರ್ಖಾನೆ ಸ್ಥಳಾಂತರ ಮಾಡಬಾರದು ಎಂದು ಪ್ರತಿಭಟನಾನಿರತ ಕಾರ್ಮಿಕರು ಆಗ್ರಹಿಸಿದ್ದಾರೆ.

ರಾಮನಗರದ ಸುತ್ತಮುತ್ತಲ ಗ್ರಾಮಗಳಿಂದ ಇಲ್ಲಿಗೆ ಕೆಲಸಕ್ಕೆ ಬರುತ್ತಿದ್ದೇವೆ. ಆರು ವರ್ಷಗಳಿಂದ ಇದೇ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೇವೆ. ಕಾರ್ಖಾನೆ ಸ್ಥಗಿತಗೊಳಿಸುವುದಾಗಿ ಆಡಳಿತ ಮಂಡಳಿ ಈ ಹಿಂದೆ ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಮಾಡಿದ್ದೆವು. ಒಂದು ವೇಳೆ ಕಾರ್ಖಾನೆ ಮುಚ್ಚುವುದಾದರೆ ಕಾರ್ಮಿಕರಿಗೆ ಬೇರೆ ಕಡೆ ಕೆಲಸ ಕೊಡಿಸುವಂತೆ ಹಾಗೂ ಪರಿಹಾರ ನೀಡುವಂತೆ ಒತ್ತಾಯಿಸಿದ್ದೆವು. ಇದಕ್ಕೆ ಒಪ್ಪದ ಆಡಳಿತ ಮಂಡಳಿ ಕಾರ್ಖಾನೆ ಸ್ಥಳಾಂತರದ ನಾಟಕವಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಹಿಂದೆಯಿಂದಲೂ ವಾಹನ ಸೌಲಭ್ಯ ಕಲ್ಪಿಸಿದ್ದ ಆಡಳಿತ ಮಂಡಳಿ ವಾಹನ ಸೌಲಭ್ಯ ನೀಡುವುದನ್ನೂ ಸ್ಥಗಿತಗೊಳಿಸುತ್ತೇವೆ ಎನ್ನುತ್ತಿದೆ. ವಾಹನ ಸೌಲಭ್ಯವಿಲ್ಲದಿದ್ದರೆ ಕೆಲಸಕ್ಕೆ ಬರಲು ಕಷ್ಟವಾಗುತ್ತಿದೆ. ಕಾರ್ಖಾನೆ ಬೊಮ್ಮನಹಳ್ಳಿಗೆ ಸ್ಥಳಾಂತರವಾದರೆ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂಬುದು ಪ್ರತಿಭಟನಾಕಾರರ ಆಕ್ರೋಶ.
Sai Export Garments factory,shifting,protest ,Labor
Opposition to the displacement of the factory shifting Sai Export Garments factory
Ahoratri protest by Labor