ಬೆಂಗಳೂರು:ಮಾ-20:(www.justkannada.in)2018ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆ ಅದ್ಧೂರಿ ಸ್ವಾಗತಕ್ಕೆ ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ.

ಇಂದು ನವದೆಹಲಿಗೆ ತೆರಳಲಿರುವ ಎಸ್.ಎಂ.ಕೃಷ್ಣ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಭೇಟಿ ವೇಳೆ ಬಿಜೆಪಿ ಸೇರ್ಪಡೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆಂದು ಹೇಳಲಾಗುತ್ತಿದೆ. ಇನ್ನೆರಡು ದಿನದೊಳಗೆ ಕೃಷ್ಣ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ಸ್ಥಾನ ಗಳಿಸಿಕೊಡುವುದಾಗಿ ಬಿಜೆಪಿ ನಾಯಕರಿಗೆ ಎಸ್‍ಎಂ ಕೃಷ್ಣ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜತೆ ಬರುವ ಏ.9ಕ್ಕೆ ನಡೆಯುವ ಎರಡು ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರಕ್ಕೂ ಎಸ್‍ಎಂಕೆ ಮುಂದಾಗುವ ಮಾತು ಕೊಟ್ಟಿದ್ದಾರೆ.

ಪಕ್ಷಕ್ಕೆ ಸೇರ್ಪಡೆಯಾದ ನಂತರ ಬೆಂಗಳೂರಿಗೆ ವಾಪಸ್ ಬರುವ ಅವರನ್ನು ವಿಮಾನ ನಿಲ್ದಾಣದಿಂದಲೇ ಮೆರವಣಿಗೆ ಮೂಲಕ ಬಿಜೆಪಿ ರಾಜ್ಯ ಕಚೇರಿಗೆ ಕರೆ ತರಲು ನಿರ್ಧರಿಸಲಾಗಿದೆ. ಕನಿಷ್ಠ 4 ಸಾವಿರ ಜನರನ್ನು ಸೇರಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಇದೀಗ ಕೃಷ್ಣ ಸ್ವಾಗತಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.
S M. Krishna,BJP,2018 assembly election