ಹುಷಾರ್ ಮಾರುಕಟ್ಟೆಗೆ ಬಂದಿದೆ ಕಲಬೆರಕೆ ಶುಗರ್

0
504

ತುಮಕೂರು:ಮಾ-21: ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಬಳಿಕ ರಾಜ್ಯದ ಮಾರುಕಟ್ಟೆಗೀಗ ಪ್ಲಾಸ್ಟಿಕ್ ಸಕ್ಕರೆ ದಾಂಗುಡಿ ಇಟ್ಟಿದೆ. ಹೊಟ್ಟೆಯಲ್ಲಿ ಕರಗದೆ ಕ್ಯಾನ್ಸರ್​ನಂಥ ಮಾರಕ ಕಾಯಿಲೆಗೆ ಕಾರಣವಾಗಬಲ್ಲ ಪ್ಲಾಸ್ಟಿಕ್ ಹರಳುಗಳನ್ನು ಸಕ್ಕರೆಯಲ್ಲಿ ಬೆರೆಸಿ ಮಾರಾಟ ಮಾಡುತ್ತಿರುವ ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

2 ದಿನಗಳ ಹಿಂದೆ ಮಂಡಿಪೇಟೆಯ ಕೆ.ಎ.ಟ್ರೇಡರ್ಸ್​ನಲ್ಲಿ ಸಿದ್ದೇಶ್ ಎಂಬುವವರು ಖರೀದಿಸಿದ 50 ಕೆಜಿ ಸಕ್ಕರೆ ಚೀಲದಲ್ಲಿ ಸುಮಾರು 5-8 ಕೆಜಿಯಷ್ಟು ಪ್ಲಾಸ್ಟಿಕ್ ಹರಳುಗಳು ಕಂಡುಬಂದಿವೆ. ಈ ವಿಚಾರವಾಗಿ ಅಂಗಡಿ ಮಾಲೀಕರನ್ನು ಪ್ರಶ್ನಿಸಿದಾಗ ಅವರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಮೂಲ: ಸಕ್ಕರೆ ಚೀಲದ ಮೇಲೆ ಬೆಳಗಾವಿ ಶಿವಶಕ್ತಿ ಶುಗರ್ಸ್ ಕಂಪನಿ ಹೆಸರಿದ್ದು, ಕೆ.ಎ.ಟ್ರೇಡರ್ಸ್ ಮಾಲೀಕ ಖಲೀಲ್ ಅಹ್ಮದ್ ಅವರು ಬೆಂಗಳೂರಿನ ಸಗಟು ವ್ಯಾಪಾರಿ ಸಲೀಂ ಎಂಬುವವರಿಂದ 100 ಪ್ಯಾಕೆಟ್ ಖರೀದಿಸಿದ್ದರು. ಖಲೀಲ್ ಅಹ್ಮದ್ ಬಳಿಯಿಂದ ಸಿದ್ದೇಶ್ ಖರೀದಿಸಿದ 50 ಕೆಜಿ ಸಕ್ಕರೆ ಪ್ಯಾಕೆಟ್​ನಲ್ಲಿ ಪ್ಲಾಸ್ಟಿಕ್ ಹರಳು ಪತ್ತೆಯಾಗಿದೆ. ಸಕ್ಕರೆ ಪ್ಯಾಕ್ ಆದ ಸ್ಥಳದಲ್ಲೇ ಪ್ಲಾಸ್ಟಿಕ್ ಮಿಶ್ರಣ ಮಾಡಲಾಗಿದೆಯೇ ಅಥವಾ ಬೆಂಗಳೂರಿಗೆ ಸಾಗಣೆ ಮಾಡಿದ ಬಳಿಕ ಆಗಿದೆಯೇ ಎಂಬ ಬಗ್ಗೆ ಇನ್ನೂ ಖಚಿತಪಟ್ಟಿಲ್ಲ. ಈ ಬಗ್ಗೆ ಆಹಾರ ಸುರಕ್ಷತಾ ಇಲಾಖೆಗಾಗಲಿ, ಪೊಲೀಸ್ ಇಲಾಖೆಗಾಗಲಿ ಯಾರೂ ದೂರು ನೀಡಿಲ್ಲ.

ಪ್ರಯೋಗಾಲಯಕ್ಕೆ ಮಾದರಿ

ಪ್ಲಾಸ್ಟಿಕ್ ಸಕ್ಕರೆ ತಿಂದರೆ ಜೀವಕ್ಕೆ ಹಾನಿಯಾಗದಿದ್ದರೂ ಆರೋಗ್ಯದ ಮೇಲೆ ನಿಧಾನವಾಗಿ ದುಷ್ಪರಿಣಾಮವಾಗುತ್ತದೆ. ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲವಾದರೂ ಮಂಗಳವಾರ ಕೆ.ಎ.ಟ್ರೇಡರ್ಸ್​ಗೆ ಭೇಟಿ ನೀಡಿ, ಸ್ಯಾಂಪಲ್ ಸಂಗ್ರಹಿಸಿ ಸಾರ್ವಜನಿಕ ಆರೋಗ್ಯ ಸಂಸ್ಥೆ (ಪಿಎಚ್​ಐ) ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಆಹಾರ ಸುರಕ್ಷತಾ ಅಧಿಕಾರಿ ನಾಗರಾಜು ತಿಳಿಸಿದ್ದಾರೆ.

ಪತ್ತೆ ಹೇಗೆ?

ಒಂದು ಹಿಡಿ ಸಕ್ಕರೆಯನ್ನು ಕೈಯಲ್ಲಿ ಹಿಡಿದುಕೊಂಡರೆ ಯೂರಿಯಾ (ರಸಗೊಬ್ಬರ) ರೀತಿಯಲ್ಲಿರುವ ಪ್ಲಾಸ್ಟಿಕ್ ಕಾಳುಗಳು ಕಾಣುತ್ತವೆ. ಅದು ಸಕ್ಕರೆಯಂತೆ ಪುಡಿಯಾಗುವುದಿಲ್ಲ, ನೀರಿನಲ್ಲಿ ಕರಗುವುದೂ ಇಲ್ಲ. ಕಚ್ಚಿದರೆ ರಬ್ಬರ್ ಜಗಿದಂತೆ ಆಗುತ್ತದೆ.

ಚೀನಾ ಮೂಲವೇ?

ಚೀನಾದ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಬಳಿಕ ಭಾರತದ ಮಾರುಕಟ್ಟೆಗೆ ಬಂದಿರುವ ಪ್ಲಾಸ್ಟಿಕ್ ಸಕ್ಕರೆಯ ರಹಸ್ಯ ಬೆನ್ನತ್ತಿ ದೇಶದ ಹಲವೆಡೆ ತನಿಖೆ ನಡೆಯುತ್ತಿದೆ. ಇವು ಚೀನಾ ಉತ್ಪನ್ನವೆಂಬುದು ಬಹುತೇಕ ಖಚಿತವಾಗಿದ್ದರೂ ಅಧಿಕೃತವಾಗಿ ಆಧಾರ ಸಿಕ್ಕಿಲ್ಲ.

ಪ್ಲಾಸ್ಟಿಕ್​ನಲ್ಲಿ ಅತಿಯಾದ ಪ್ರಮಾಣದಲ್ಲಿ ಹೈಡ್ರೋಕಾರ್ಬನ್​ಗಳಿರುವುದರಿಂದ ಜನರು ಪ್ಲಾಸ್ಟಿಕ್ ಅಂಶವುಳ್ಳ ಸಕ್ಕರೆ ಬಳಸಿದರೆ ಕ್ಯಾನ್ಸರ್​ನಂತಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದರೆ ಪ್ಲಾಸ್ಟಿಕ್ ಸಕ್ಕರೆ ಕುರಿತಂತೆ ಈವರೆಗೆ ಯಾವುದೇ ದೂರು ಬಂದಿಲ್ಲ.

ಡಾ.ಶ್ರೀನಿವಾಸ ಗೌಡ, ಆಹಾರ ಸುರಕ್ಷತಾ ಇಲಾಖೆ ಉಪ ನಿರ್ದೇಶಕ
ಕೃಪೆ: ವಿಜಯವಾಣಿ
Plastic sugar,Plastic crystal,Mix-up,Tumakuru