ನವದೆಹಲಿ, ಫೆಬ್ರವರಿ 12 (www.justkannada.in): ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಅಗ್ಗದ ದರದ ಸ್ಯಾನಿಟರಿ ಪ್ಯಾಡ್ ಗಳ ತಯಾರಕನೋರ್ವನ ಸುತ್ತ ಜರಗುವ ಕಥಾ ಹಂದರವನ್ನು ಹೊಂದಿರುವ ಪ್ಯಾಡ್ ಮ್ಯಾನ್ ಚಿತ್ರ ಮಹಿಳೆಯರ ಮೂಲಭೂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತದೆ. ಇಂತಹ ಚಿತ್ರವನ್ನು ನಿಷೇಧಿಸಿರುವುದು ಪಾಕಿಸ್ತಾನಿ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವತಃ ಪಾಕಿಸ್ತಾನ ಸರ್ಕಾರದ ವಿರುದ್ಧ ಪಾಕ್ ಮಹಿಳೆಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಐ ಸಪೋರ್ಟ್ ಪ್ಯಾಡ್ ಮ್ಯಾನ್ (#ISupportPadman) ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಪಾಕ್ ಸರ್ಕಾರಕ್ಕೆ ಛೀಮಾರಿ ಹಾಕಲಾಗುತ್ತಿದೆ. ಪಾಕಿಸ್ತಾನದ ಮಹಿಳಾ ರಾಜಕಾರಣಿಗಳು, ನಟಿಯರು ಹಾಗೂ ಪತ್ರಕರ್ತರು ಈ ಬಗ್ಗೆ ತಮ್ಮ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶ ಟೈಪಿಸಿ ಶೇರ್ ಮಾಡುತ್ತಿದ್ದಾರೆ.