ಬೆಂಗಳೂರು:ಏ-20:(www.justkannada.in)ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ತಡೆಗಟ್ಟಲು ಕ್ರಮಕೈಗೊಲ್ಳುವಂತೆ ಸೂಚಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಕೆರೆಯ ಸುತ್ತಲೂ ತಲೆ ಎತ್ತಿ, ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕಾರ್ಖಾನೆಗಳನ್ನು ಮುಚ್ಚುವಂತೆ ಮಹತ್ವದ ಆದೇಶ ನೀಡಿದೆ.

ಬೆಳ್ಳಂದೂರು ಕೆರೆಯ ಸಂರಕ್ಷಣೆ ಕುರಿತು ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಪೀಠವು, ಕೂಡಲೇ ಪುನಶ್ಚೇತನ ಕಾರ್ಯ ಆರಂಭಿಸಿ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಸರ್ಕಾರವು ಭವಿಷ್ಯದಲ್ಲಿ ಕೆರೆಯ ಪುನಶ್ಚೇತನ, ಪುನರುಜ್ಜೀವನ ಹಾಗೂ ಮಾಲಿನ್ಯ ತಡೆಯಲು ಕೈಗೊಳ್ಳುವ ಎಲ್ಲ ಕ್ರಮಗಳ ಕುರಿತೂ ಎರಡು ವಾರದೊಳಗೆ ಯೋಜನಾ ವರದಿಯನ್ನು ಸಲ್ಲಿಸುವಂತೆ ನ್ಯಾಯಮಂಡಳಿ ತಿಳಿಸಿತು.

ಸಂಸ್ಕರಿಸಿದ ಅಥವಾ ಸಂಸ್ಕರಿಸದ ತಾಜ್ಯವನ್ನು ಕೆರೆಗೆ ಬಿಡುವಂತಿಲ್ಲ. ಗೃಹ ಬಳಕೆಯ ನೀರನ್ನೂ ಕೆರೆಗೆ ಬಿಡದೇ ಕೆರೆಯ ಸುತ್ತ 75 ಮೀಟರ್ ಗಿಂತ ಹೊಎಅಗೆ ಸಾಗೀಸಬೇಕು. ಕೆರೆ ಮತ್ತು ಕೆರೆಯ ಬಫರ್ ಝೋನ್ ನಲ್ಲಿ ತ್ಯಾಜ್ಯ ಸುರಿದು ಮಲಿನಗೊಳಿಸುವ ಪ್ರತಿ ಪ್ರಕರಣದಲ್ಲೂ ಪರಿಸರ ಪರಿಹಾರದ ರೂಪದಲ್ಲಿ 5 ಲಕ್ಷ ರೂ ದಂಡ ವಿಧಿಸಬೇಕು ಎಂದು ಆದೇಶಿಸಿದೆ.

ಬೆಳ್ಳಂದೂರು ಕೆರೆಯ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೀಠ, ವಿಚಾರಣೆ ವೇಳೆ ತನ್ನ ಆದೇಶಕ್ಕೆ ಕಾನೂನಾತ್ಮಕ ಅಧಿಕಾರವೇ ಇಲ್ಲ ಎಂಬ ಅರ್ಥದಲ್ಲಿ ಬಿಬಿಎಂಪಿ ಅಧಿಕಾರಿಗಳು ಹೊರಡಿಸಿದ್ದ ಆಂತರಿಕ ಸುತ್ತೋಲೆಯ ಕುರಿತು ಚರ್ಚಿಸಿತು. ಅಲ್ಲದೇ ಸುತ್ತೋಲೆ ಹೊರಡಿಸಿದವರಾರು ಎಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಇದರಲ್ಲಿ ದುರುದ್ದೇಶವೇನೂ ಇಲ್ಲ. ಕಾನೂನು ಇಲಾಖೆಯ ಅಭಿಪ್ರಾಯದ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಇಂಥ ಸುತ್ತೋಲೆ ಹೊರಡಿಸಿದ ಅಧಿಕಾರಿಯನ್ನು ತಕ್ಷಣದಿಂದಲೇ ಸರ್ಕಾರ ಸೇವೆಯಿಂದ ವಜಾ ಮಾಡಬೇಕು. ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ನಾವೇ ಕ್ರಮ ಕೈಗೊಳ್ಳುತ್ತೇವೆ ಎಂದು ಕಿಡಿಕಾರಿದ ನ್ಯಾಯಮೂರ್ತಿಗಳು, ಅಧಿಕಾರಿಗಳಿಗೆ ದುರುದ್ದೇಶವಿಲ್ಲದಿದ್ದರೂ ಎನ್‌ಜಿಟಿಯ ಅಸ್ತಿತ್ವಕ್ಕೇ ಹಾನಿ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಆ ಸುತ್ತೋಲೆಯನ್ನು ನಾವು ಹಿಂದಕ್ಕೆ ಪಡೆಯುತ್ತೇವೆ. ಮುಂದೆ ಇಂಥ ಪ್ರಮಾದ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿ ಕ್ಷಮೆ ಯಾಚಿಸಿದರು. ಇದೇ ವೇಳೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಅಲ್ಲಿನ ಒಣಹುಲ್ಲು, ರಾಸಾಯನಿಕ ಪ್ರಕ್ರಿಯೆಯೇ ಕಾರಣ ಎಂದು ಸಂಸ್ಥೆಗಳು ವಿಭಿನ್ನ ವರದಿ ನೀಡಿವೆ. ಬೆಂಕಿಯು ಕೆರೆಯಲ್ಲಿನ ಪಾಚಿಯ ಮೇಲೇ ಕಾಣಿಸಿಕೊಂಡಿದೆ. ಇದಕ್ಕೆ ಏನು ಹೇಳುತ್ತೀರಿ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರನ್ನು ಪೀಠ ಪ್ರಶ್ನಿಸಿತು. ಬೆಂಗಳೂರಿನಲ್ಲಿ ಮೊದಲು ನೂರಾರು ಕೆರೆಗಳು ಇದ್ದವು. ಈಗ ಎಷ್ಟು ಕೆರೆಗಳು ಉಳಿದಿವೆ. ಕೆರೆಗಳ ಅಸ್ತಿತ್ವ ಇದ್ದಿದ್ದರೆ ಬೆಂಗಳೂರು ಹವಾನಿಯಂತ್ರಿತ ವ್ಯವಸ್ಥೆಯನ್ನು ನೈಸರ್ಗಿಕವಾಗಿಯೇ ಹೊಂದಿರುವ ನಗರ ಆಗಿರುತ್ತಿತ್ತು. ಆದರೆ, ನಿಮಗ್ಯಾರಿಗೂ ಪರಿಸರದ ಬಗ್ಗೆ ಕಾಳಜಿ ಇಲ್ಲ. ಇದರಿಂದ ಜನತೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ನಗರಾಭಿವೃದ್ಧಿ ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲು ಆದೇಶಿಸಿದ ಪೀಠ, ಈ ಸಮಿತಿಯು ಕೆರೆಯ ಪುನಶ್ಚೇತನ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳುವಂತೆ ತಿಳಿಸಿದೆ.

ಮಾಲಿನ್ಯಕ್ಕೆ ಕಾರಣವಾಗಿರುವ, ಕೆರೆಯ ಸುತ್ತಲಿನ ಅಂದಾಜು 585 ಕಾರ್ಖಾನೆಗಳನ್ನು ತಕ್ಷಣದಿಂದ ಮುಚ್ಚುವಂತೆ ಸೂಚಿಸಿದ ಪೀಠ, ಆಯಾ ಕಾರ್ಖಾನೆಗಳು ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯವನ್ನು ಸರ್ಕಾರ ಸ್ಥಾಪಿಸಲಿರುವ ಸಂಸ್ಕರಣಾ ಘಟಕಕ್ಕೆ ಸ್ವತಃ ಸಾಗಿಸುವಂತೆ ಪ್ರತಿ ಕಾರ್ಖಾನೆಗೆ ಸಮಿತಿಯ ಜಂಟಿ ತಪಾಸಣಾ ತಂಡ ಭೇಟಿ ನೀಡಿ ಆದೇಶಿಸಬೇಕು. ಈ ಆದೇಶ ಪಾಲಿಸುವ ಕಾರ್ಖಾನೆಗಳಿಗೆ ಮಾತ್ರ ಮತ್ತೆ ಕಾರ್ಯಾರಂಭ ಮಾಡಲು ಅವಕಾಶ ಕಲ್ಪಿಸಬೇಕು. ಕೆರೆ ಸುತ್ತ ತಲೆ ಎತ್ತಿರುವ ಅಪಾರ್ಟ್‌ಮೆಂಟ್‌ಗಳೂ ತ್ಯಾಜ್ಯವನ್ನು ಸ್ವಯಂ ಆಗಿ ಸಾಗಿಸುವಂತಾಗಬೇಕು. ಕೆರೆಯ ಆಸುಪಾಸಿನಲ್ಲಿ ಹೊಸದಾಗಿ ಯಾವುದೇ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಕೂಡದು ಎಂದು ನ್ಯಾಯಮೂರ್ತಿ ಸೂಚಿಸಿದ್ದಾರೆ.

ಸಮಿತಿಯ ಸದಸ್ಯರಿಗೆ ಎಲ್ಲ ಅಧಿಕಾರಿಗಳೂ ಸಹಕಾರ ನೀಡಬೇಕು. ಪೊಲೀಸರೂ ಜಂಟಿ ತಪಾಸಣಾ ತಂಡದೊಂದಿಗೆ ತೆರಳಿ ಸೂಕ್ತ ಭದ್ರತೆ ಒದಗಿಸಬೇಕು. ತಕ್ಷಣವೇ ಕೆರೆಯಲ್ಲಿ ಸೇರಿಕೊಂಡಿರುವ ಹೂಳನ್ನು ಎತ್ತಲು ಮುಂದಾಗಬೇಕು.

ಕೆರೆಗೆ ಕಲುಷಿತ ನೀರು, ಘನ ತ್ಯಾಜ್ಯ ಸೇರ್ಪಡೆ ಆಗುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗುವ ಮೂಲಕ ಪರಿಸರದ ಪ್ರಮುಖ ಭಾಗವಾಗಿರುವ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದೆ.

ರಾಜ್ಯ ಸರ್ಕಾರ ಕೆರೆಯ ಪುನಶ್ಚೇತನ, ಪುನರುಜ್ಜೀವನ ಹಾಗೂ ಮಾಲಿನ್ಯ ತಡೆಯಲು ಕೈಗೊಳ್ಳುವ ಎಲ್ಲ ಕ್ರಮಗಳ ಕುರಿತೂ ಎರಡು ವಾರದೊಳಗೆ ಯೋಜನಾ ವರದಿಯನ್ನು ಸಲ್ಲಿಸುವಂತೆ ನ್ಯಾಯಮಂಡಳಿ ತಿಳಿಸಿದೆ.
NGT,Bellandur lake,Fire,state government,BBMP
All industries around lake to be shut down immediately; Rs 5L fine dumping, orders NGT

The National Green Tribunal (NGT) came down heavily on the state government authorities and gave a series of directions that have to be carried out within a month’s time with regard to the Bellandur lake.