ಕೇಪ್​ಕೆನವರಾಲ್, ಜೂನ್ 02 (www.justkannada.in): ಬಾಹ್ಯಾಕಾಶದಲ್ಲಿನ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆ ನಿರತರಾಗಿರುವ ಗಗನಯಾತ್ರಿಗಳಿಗೆ ಅಧ್ಯಯನಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ರವಾನಿಸಲು ನಾಸಾ ಸ್ಪೇಸ್​ಎಕ್ಸ್ ಡ್ರ್ಯಾಗನನ್ನು ಉಡಾವಣೆ ಮಾಡಿದೆ.

ಸ್ಪೇಸ್​ಎಕ್ಸ್ ಡ್ರ್ಯಾಗನ್​ಗೆ ಇದು ಎರಡನೇ ಪ್ರಯಾಣವಾಗಿದ್ದು, ಈ ಹಿಂದೆ 2014ರಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಾಗ್ರಿಗಳನ್ನು ಹೊತ್ತೊಯ್ದು ಭೂಮಿಗೆ ಮರಳಿತ್ತು. ಫ್ಲಾರಿಡಾದಲ್ಲಿನ ನಾಸಾ ಕೆನಡಿ ಸ್ಪೇಸ್ ಸೆಂಟರ್​ನ ಲಾಂಚ್ ಕಾಂಪ್ಲೆಕ್ಸ್ 39ಎ ನಿಂದ ಸ್ಪೇಸ್​ಎಕ್ಸ್ ಡ್ರ್ಯಾಗನನ್ನು ಉಡಾಯಿಸಲಾಗಿದೆ.

ಈ ಕ್ಯಾಪ್ಸೂಲ್ ವೈಜ್ಞಾನಿಕ ಅಧ್ಯಯನಕ್ಕೆ ಅಗತ್ಯವಾದ ಇಲಿ, ನೊಣಗಳ ಸಹಿತ ಸುಮಾರು 2750 ಕೆ.ಜಿ. ತೂಕದ ವಿವಿಧ ಸಾಮಗ್ರಿಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಲಿದೆ. ಸ್ಪೇಸ್​ಎಕ್ಸ್ 230 ಅಡಿ ಎತ್ತರದ ಫಾಲ್ಕನ್ 9 ರಾಕೆಟ್, 20 ಅಡಿ ಎತ್ತರ ಮತ್ತು 12 ಅಡಿ ವ್ಯಾಸ ಹೊಂದಿರುವ ಡ್ರ್ಯಾಗನ್ ಕ್ಯಾಪ್ಸೂಲ್ ಅನ್ನು ಬಾಹ್ಯಾಕಾಶಕ್ಕೆ ಸಾಗಿಸುತ್ತದೆ.

ಸ್ಪೇಸ್​ಎಕ್ಸ್ ಬಾಹ್ಯಾಕಾಶ ಕೇಂದ್ರಕ್ಕೆ ಇದು 11ನೇ ಸರಕು ಸಾಗಣೆಯಾಗಿದ್ದು, ಈ ಬಾರಿ ಡ್ರ್ಯಾಗನ್ ಹೊತ್ತೊಯ್ಯುವ ಸಾಮಗ್ರಿಗಳು ಸುಮಾರು 250ಕ್ಕೂ ವಿವಿಧ ಅಧ್ಯಯನಗಳಿಗೆ ಪ್ರಯೋಜನಕಾರಿಯಾಗಿರಲಿವೆ.

ಒಳಗೇನಿದೆ?

ಸ್ಪೇಸ್​ಎಕ್ಸ್ ಡ್ರ್ಯಾಗನ್ ಅನ್ನು ನಾಸಾ ಅಭಿವೃದ್ಧಿಪಡಿಸಿದ್ದು, ಇದು ಪುನರ್ಬಳಕೆಯ ಡ್ರ್ಯಾಗನ್ ಕ್ಯಾಪ್ಸೂಲ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲಿಗೆ ಕಾಗೋ ಸೇವೆಗೆ ವಿಮಾನಗಳನ್ನು ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಕ್ಯಾಪ್ಸೂಲ್ ವಿನ್ಯಾಸದ ಡ್ರ್ಯಾಗನ್ ಬಳಸುತ್ತಿದ್ದು, ಅದು ಏಳು ಗಗನಯಾತ್ರಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.