ಬೆಂಗಳೂರು:ಜೂ-19:(www.justkannada.in)ಟೆಂಡರ್ ಬಿಡ್ ಮುಂದೂಡಿಕೆಯಿಂದಾಗಿ ಬೆಂಗಳೂರು-ಮೈಸೂರು ಹತ್ತು ಪಥದ ‘ಎಕ್ಸ್‌ಪ್ರೆಸ್‌ ಹೈವೆ’ ಕಾಮಗಾರಿ ಆರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಕೆಂಗೇರಿ ನೈಸ್‌ ರಸ್ತೆ ಜಂಕ್ಷನ್‌ನಿಂದ ಮೈಸೂರಿನ ಹೊರ ವಲಯದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್‌ ವರೆಗಿನ 118 ಕಿ.ಮೀ ಉದ್ದದ ಮಾರ್ಗವನ್ನು ಕೇವಲ 90 ನಿಮಿಷದಲ್ಲಿ ಕ್ರಮಿಸುವ ಮಹತ್ವದ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ಕೈಗೆತ್ತಿಕೊಂಡಿದೆ. ಈ ಯೋಜನೆಗಾಗಿ 2,200 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಹಲವು ತಿಂಗಳುಗಳೇ ಕಳೆದಿವೆ. ಅಂದಾಜು 3,600 ಕೋಟಿ ಮೊತ್ತದ ಯೋಜನೆಗೆ ಟೆಂಡರ್‌ ಕೂಡ ಕರೆಯಲಾಗಿದೆ.

ಆದರೆ ಟೆಂಡರ್‌ ಬಿಡ್‌ ತೆರೆದು ಗುತ್ತಿಗೆದಾರರನ್ನು ನಿಗದಿ ಮಾಡುವ ಪ್ರಕ್ರಿಯೆ ಬಾಕಿ ಇದೆ. ಕಾರಣಗೆ ಕರೆದಿದ್ದ ಟೆಂಡರ್‌ ಬಿಡ್‌ ತೆರೆಯುವ ದಿನಾಂಕ ಮೂರನೇ ಬಾರಿ ಮುಂದೂಡಿಕೆಯಾಗಿದೆ.

ಈ ಹಿಂದೆ ಏ.5ಕ್ಕೆ ನಿಗದಿಯಾಗಿದ್ದ ದಿನಾಂಕ ಮೇ 5ಕ್ಕೆ ಮುಂದೂಡಲಾಗಿತ್ತು. ಆ ದಿನಾಂಕವನ್ನೂ  ಮುಂದೂಡಿ ಇದೇ ತಿಂಗಳ 5ಕ್ಕೆ ನಿಗದಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಮುಂದೂಡಿ, ಜುಲೈ 20ಕ್ಕೆ ನಿಗದಿ ಮಾಡಲಾಗಿದೆ. ಯೋಜನಾ ಆಯೋಗದ ಅನುಮತಿ ದೊರೆಯದಿದ್ದ ಕಾರಣಕ್ಕೆ ಮುಂದೂಡಲಾಗಿತ್ತು. ಮುಂದೂಡಿದ ಬಳಿಕ ಅನುಮತಿ ದೊರೆತಿದೆ ಎನ್ನುತ್ತಾರೆ ಎನ್‌ಎಚ್ಐಐ ಅಧಿಕಾರಿಗಳು.

ವಿದೇಶಿ ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬಂದಿದ್ದು, ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ದಿನಾಂಕ ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Mysuru-Bengaluru Expressway,10-lane Highway,Tender Bid,postponed,project delay