ಮೈಸೂರು, ನ.14, 2017 : (www.justkannada.in news ) ಅರಮನೆ ನಗರಿ ಮೈಸೂರಿನಲ್ಲಿ ನ.24ರಿಂದ ನಡೆಯಲಿರುವ 83ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ರಾಷ್ಟ್ರ,ನಾಡಧ್ವಜಾರೋಹಣ ಆಹ್ವಾನಪತ್ರಿಕೆಯಲ್ಲಿ ಪ್ರಥಮ ಪ್ರಜೆ ಮೇಯರ್ ಅವರನ್ನೇ ಕೈಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಒಂದಲ್ಲಾ ಒಂದು ಗೊಂದಲಕ್ಕೆ ಸಿಲುಕಿರುವ ಸಮ್ಮೇಳನದಲ್ಲಿ ಖುದ್ದು ಮೇಯರ್ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ನಗರದ ಕಲಾಮಂದಿರದ ಮನೆಯಂಗಳದಲ್ಲಿ ಮಂಗಳವಾರ ಮೆರವಣಿಗೆ ಉಪ ಸಮಿತಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಜಿ.ಚನ್ನಪ್ಪ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಸೇರಿದಂತೆ ಸಮಿತಿಯ ಸದಸ್ಯರು ಸಿದ್ಧತಾ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.

ಸಮ್ಮೇಳನದ ಮೊದಲ ದಿನದಂದು ರಾಷ್ಟ್ರಧ್ವಜ,ನಾಡ ಧ್ವಜಾರೋಹಣ ನೆರವೇರಿಸಲಾಗುತ್ತದೆ. ರಾಷ್ಟ್ರಧ್ವಜಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ನಾಡಧ್ವಜಕ್ಕೆ ಕಸಾಪ ಅಧ್ಯಕ್ಷರನ್ನು ಹಾಕಿಕೊಂಡಿದ್ದರೂ,ಮೇಯರ್ ಅವರನ್ನು ಕೈಬಿಡಲಾಗಿದೆ. ನಗರದ ಪ್ರಥಮ ಪ್ರಜೆ ಈ ಪ್ರಮುಖ ಕಾರ್ಯದಲ್ಲಿ ಇರಬೇಕಾಗಿತ್ತಾದರೂ ಅವರ ಹೆಸರನ್ನು ಕೈಬಿಟ್ಟು ಅವಮಾನಿಸಲಾಗಿದೆ. ಹಾಗೆಯೇ, ಮೆರವಣಿಗೆ ಉಪ ಸಮಿತಿ ಅಧ್ಯಕ್ಷರಾಗಿ ಎಂ.ಜೆ.ರವಿಕುಮಾರ್ ಇದ್ದರೂ ಅಲ್ಲಿಯೂ ಹೆಸರನ್ನು ಮುದ್ರಿಸದೆ ಇರುವುದು ಅಚ್ಚರಿ ಮೂಡಿಸಿದೆ.

ಇದನ್ನು ಗಮನಿಸಿದ ಮೇಯರ್ ಎಂ.ಜೆ.ರವಿಕುಮಾರ್ ಉಪ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಬೆವರಿಳಿಸಿದರು. ನಾನೊಬ್ಬ ಪ್ರಥಮ ಪ್ರಜೆ, ಮುಖ್ಯಮಂತ್ರಿ,ಪ್ರಧಾನಮಂತ್ರಿ,ರಾಷ್ಟ್ರಪತಿಗಳ ಆಗಮನದ ವೇಳೆ ಶಿಷ್ಟಾಚಾರದಂತೆ ಸ್ವಾಗತಿಸುವ ಸಂಪ್ರದಾಯವಿದೆ. ಹೀಗಿದ್ದರೂ, ಈ ಎರಡರಲ್ಲೂ ಹೆಸರು ಕೈಬಿಟ್ಟಿದ್ದೀರಾ ಎಂದು ಕಿಡಿಕಾರಿದರು.

ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಸಮಜಾಯಿಸಿ ನೀಡಲು ಮುಂದಾದಾಗ,ಏರು ದನಿಯಲ್ಲಿ ಪ್ರಶ್ನಿಸಿದಾಗ ಬಾಯಿ ಮುಚ್ಚಿದ್ದಾರೆ. ನಂತರ, ಆಹ್ವಾನಪತ್ರಿಕೆಯನ್ನು ಮರು ಮುದ್ರಿಸುವ ಬಗ್ಗೆ ಹೇಳಿ ಕೋಪ ಶಮನ ಮಾಡಿದರು ಎನ್ನಲಾಗಿದೆ.
key words : mysore-mayor-ravikumar-sahithya-sammellana-kannada