ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಅನುದಾನದ ನೆರವಿನೊಂದಿಗೆ ಕುಕ್ಕರಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯದ ನಿರ್ಧಾರಕ್ಕೆ ಪರ ಹಾಗೂ ವಿರೋಧ ವ್ಯಕ್ತವಾಗಿದೆ.
ಅಚ್ಚರಿ ಅಂದ್ರೆ, ಈ ವಿಷಯದಲ್ಲಿ ರಾಜ್ಯದ ಎರಡು ಪ್ರಮುಖ ಪತ್ರಿಕೆಗಳಾದ `ವಿಜಯ ಕರ್ನಾಟಕ’ ಹಾಗೂ `ಪ್ರಜಾವಾಣಿ ‘ ಭಿನ್ನ ನಿಲುವು ತಾಳಿರುವುದು. ಜತೆಗೆ ನಮ್ಮ ನಿಲುವಿಗೆ ಪೂರಕವಾದ ತಜ್ಞರ ಅಭಿಪ್ರಾಯಕ್ಕೆ ಮಹತ್ವ ನೀಡುತ್ತಿರುವುದು.
` ನಮ್ಮೂರ ಕೆರೆ ಉಳಿಸಿ…’ ಶೀರ್ಷಿಕೆ ಅಡಿಯಲ್ಲಿ ಮೊದಲಿಗೆ ಸರಣಿ ವರದಿಗಳನ್ನು ಪ್ರಕಟಿಸಿದ ಮೈಸೂರು ಆವೃತ್ತಿಯ `ವಿಜಯ ಕರ್ನಾಟಕ’ ಪತ್ರಿಕೆ ಪ್ರಕಾರ, ಕುಕ್ಕರಹಳ್ಳಿ ಕೆರೆಯಲ್ಲಿ ಶೇ.60ರಷ್ಟು ಪ್ರಮಾಣದಲ್ಲಿ ಹೂಳಿದ್ದು, ಅದನ್ನು ತೆಗೆದುಹಾಕಲು ಇದು ಸಕಾಲ ಎಂದು ಪ್ರತಿಪಾದಿಸಿತ್ತು.
ಕೆರೆ ಜಯರಾಮಯ್ಯ ಎಂದೇ ಪ್ರಸಿದ್ಧಿಯಾದ ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಜಯರಾಮಯ್ಯ ಮತ್ತಿತರರು ಕೆರೆ ಹೂಳೆತ್ತಿಸಬೇಕು ಎಂಬ ನಿಲುವನ್ನು ಬೆಂಬಲಿಸಿದ್ದರು. ಹೂಳೆತ್ತುವ ಕಾಮಗಾರಿ ಸೇರಿದಂತೆ ಕೆರೆ ಅಂಗಳದಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು, ಕೆರೆಗೆ ಮರುಜೀವ ನೀಡುವ ಕ್ರಮ ಎಂಬುದಾಗಿ `ವಿಜಯ ಕರ್ನಾಟಕ’ ಪ್ರತಿಪಾದಿಸಿತ್ತು.

ಆದರೆ, ಕಳೆದ ಮೂರು ದಿನಗಳಿಂದ ಮೈಸೂರು ಆವೃತ್ತಿಯ ` ಪ್ರಜಾವಾಣಿ’ ಪತ್ರಿಕೆ ಕೂಡ ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಸರಣಿ ವರದಿ ಪ್ರಾರಂಭಿಸಿದೆ. ಕೆರೆ ಹೂಳೆತ್ತಬಾರದು, ಹೂಳೆತ್ತಿದರೆ, ಕೆರೆ ನಾಶವಾಗುತ್ತೆ ಎಂಬರ್ಥದ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಜತಗೆ ಇದಕ್ಕೆ ದನಿಗೂಡಿಸುವ ಪರಿಸರವಾದಿಗಳ ಅಭಿಪ್ರಾಯ್ಕೂ ಪ್ರಜಾವಾಣಿ ಪತ್ರಿಕೆ ಮನ್ನಣೆ ನೀಡುತ್ತಿದೆ.

ಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡಿ ರುವ ಕಾಮಗಾರಿಗಳು ಕೆರೆಯ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟು ಮಾಡಲಿವೆ ಎಂಬ ಪರಿಸರವಾದಿಗಳ ಆತಂಕಕ್ಕೆ ದನಿಯಾಗಿದೆ.
‘ಭೀಕರ ಬರಗಾಲದ ಹೊಡೆತಕ್ಕೆ ಸಿಲುಕಿ ಬಹುತೇಕ ಕೆರೆಗಳು ಬತ್ತಿ ಹೋಗುತ್ತಿವೆ. ಕುಕ್ಕರಹಳ್ಳಿ ಕೆರೆಗೂ ಇದೇ ಪರಿಸ್ಥಿತಿ ಬಂದಿದೆ. ವಲಸೆ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಇಂಥ ಸಂದರ್ಭ ದಲ್ಲಿ ಕೆರೆಗೆ ನೀರನ್ನು ತುಂಬಿಸುವ ಮಾರ್ಗ ಹುಡುಕುವುದನ್ನು ಬಿಟ್ಟು ಕಾಮಗಾರಿಗೆ ಮುಂದಾಗಿರು ವುದು ವಿಪರ್ಯಾಸ. ಇದೊಂದು ಅವೈಜ್ಞಾನಿಕ ನಡೆ’ ಎಂಬ ಪರಿಸರವಾದಿಗಳ ನಿಲುವಿಗೆ ಪ್ರಜಾವಾಣಿ ಮಹತ್ವ ನೀಡಿದೆ.

ಈ ನಡುವೆ 1.60 ಕೋಟಿ ರೂ. ವೆಚ್ಚದಲ್ಲಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಯ ವಿವಿಧ ಕಾಮಗಾರಿಗಳಿಗೆ ವಾರದ ಹಿಂದೆ ಚಾಲನೆ ನೀಡಲಾಗಿತ್ತು. ಸದ್ಯ 65 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಅದನ್ನೂ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

key words : mysore-lake-restoration-kukkarahalli-lake-environmentalist-desilt-support-media