‘ಚದುರಂಗ’, ‘ಫಿಲ್ಟರ್ ಕಾಫಿ’ ಜೊತೆ ಬರ್ತಿದೆ ಮೈಸೂರಿನ ಉತ್ಸಾಹಿ ಯುವ ಪಡೆ ಆರ್ಟಿಸ್ಟಿಕ್ ಲ್ಯಾಡ್ಸ್ !

0
708

ಮೈಸೂರು, ಏಪ್ರಿಲ್ 21 (www.justkannada.in): ಸಂಬಂಧಗಳ ನಡುವೆ ಇರಲಿ ಒಂದು ಮಾಫಿ, ಬಾಂಧವ್ಯಗಳನ್ನು ಬೆಸೆಯಲು ಬೇಕು ‘ಫಿಲ್ಟರ್ ಕಾಫಿ’…!

– ಇದು ಮೈಸೂರಿನ ಉತ್ಸಾಹಿ ಯುವಕರ ತಂಡವೊಂದು ನಿರ್ಮಿಸುತ್ತಿರುವ ಕಿರುಚಿತ್ರದ ಒಂದಂಶದ ಸಾರ. ಈ ಹಿಂದೆ ‘ಥ್ಯಾಂಕ್ಯೂ ಬಾಸು’ ಎಂಬ ಕಿರು ಚಿತ್ರ ನಿರ್ಮಿಸಿ ಒಳ್ಳೆಯ ವಿಮರ್ಶೆ ಪಡೆದಿದ್ದ ಆರ್ಟಿಸ್ಟಿಕ್ ಲ್ಯಾಡ್ಸ್ (Artistic Lads) ತಂಡ ಈ ಬಾರಿ ಮತ್ತೊಂದು ವಿಭಿನ್ನ ವಿಷಯದ ಜೊತೆ ಹೊಸ ಕಾಸೆಪ್ಟ್’ನೊಂದಿಗೆ ಮತ್ತೆರಡು ಕಿರುಚಿತ್ರಗಳನ್ನು ನಿರ್ಮಿಸಿದೆ.

ಆಧುನಿಕ ಕಾಲದಲ್ಲಿ ಕಾಲದೊಂದಿಗೆ ಕೆಲಸದ ಒತ್ತಡಗಳ ನಡುವೆ ಸಂಬಂಧಗಳನ್ನು ಮೌಲ್ಯವನ್ನು ಮರೆತು ಓಡುತ್ತಿರುವ ಜನರಿಗೆ ಸಂಬಂಧಗಳ ಮೌಲ್ಯ ಅದರ ಮಹತ್ವವನ್ನು ತಿಳಿಸುವ ಉದ್ದೇಶವನ್ನು ‘ಫಿಲ್ಟರ್ ಕಾಫಿ’ ಹೊಂದಿದೆ.

ಸಂಬಂಧಗಳನ್ನೇ ಮರೆತು ಖುಷಿ, ನೆಮ್ಮದಿಯೊಂದಿಗೆ ಕಳೆಯಬೇಕಾದ ಸಮಯವನ್ನು ಹಣ ಗಳಿಕೆಗಾಗಿ ಮೀಸಲಿಡುತ್ತಾ ಕಾಲ ದೂಡುತ್ತಿರುವ ಜನರಿಗೆ ನೀತಿ ಪಾಠ ಹೇಳುವ ಹಾಗೆಯೇ ಹಣ ಗಳಿಕೆ ಒಂದು ಸವಾಲೇ ಅಲ್ಲ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಕಾಂಚಾಣ ಕಾಲಡಿ ಬೀಳುತ್ತದೆ ಎಂಬ ಸಂದೇಶವುಳ್ಳ ಕಿರುಚಿತ್ರ ‘ಚದುರಂಗ’. ಮೈಸೂರಿನ ಪ್ರಮೋದ್ ನಾಗ್ ಈ ಎರಡೂ ಕಿರುಚಿತ್ರಗಳ ನಿರ್ಮಾಣ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಬಂದಿದೆ.

ಕಿರುಚಿತ್ರಗಳ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿ, ಒಂದು ಸಣ್ಣ ಬದಲಾವಣೆಯ ಉದ್ದೇಶವನ್ನು ಯುವ ಪಡೆ ಹೊಂದಿದೆ. ಪ್ರೀತಿ ಸಂಬಂಧಗಳ ಸಂದೇಶ, ಬುದ್ಧಿವಂತಿಕೆ ಬಳಸಿ ಹಣ ಗಳಿಕೆ ಹೀಗೆ ಪ್ರೀತಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥೆವುಳ್ಳ ಎರಡೂ ಕಿರುಚಿತ್ರಗಳನ್ನು ಏ.29ರಂದು ಬಿಡುಗಡೆ ಮಾಡಲು ಆರ್ಟಿಸ್ಟಿಕ್ ಲ್ಯಾಡ್ಸ್ ಪಡೆ ತೀರ್ಮಾನಿಸಿದೆ. ಮೈಸೂರಿನ ಶಾರದಾ ವಿಲಾಸ ಸಭಾಂಗಣದಲ್ಲಿ ಈ ಎರಡೂ ಕಿರುಚಿತ್ರಗಳ ಬಿಡುಗಡೆಯಾಗಲಿವೆ.

ಈ ಉತ್ಸಾಹಿ ಯುವ ತಂಡದ ಕಿರುಚಿತ್ರಗಳ ಮಾಹಿತಿ ಪಡೆಯಲು ಫೇಸ್ ಬುಕ್ ನಲ್ಲಿ  Artistic Lads ಫೇಜ್ ಗೆ ಭೇಟಿ ನೀಡಬಹುದು.