ಬೆಂಗಳೂರು:ಏ-21: ಜನರಿಗೆ ಕೈಗೆಟಕುವ ದರದಲ್ಲಿ ‘ಎಲ್‌ಇಡಿ ಬಲ್ಬ್‌’ ಮಾರಾಟ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ‘ಉನ್ನತ ಜ್ಯೋತಿ (ಉಜಾಲ)’ ಯೋಜನೆಯಲ್ಲಿ ₹12.33 ಕೋಟಿ ಹಗರಣ ನಡೆದಿರುವ ಆರೋಪ ಕೇಳಿಬಂದಿದೆ.

ಗ್ರಾಹಕರಿಗೆ ಬಲ್ಬ್‌ ಮಾರಾಟ ಮಾಡಲು ಇಂಧನ ಸಚಿವಾಲಯದ ‘ಎನರ್ಜಿ ಎಫಿಶಿಯನ್ಸಿ ಸರ್ವೀಸ್‌  ಕಂಪೆನಿ’ಯೊಂದಿಗೆ (ಇಇಎಸ್‌ಎಲ್‌) ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಕಂಪೆನಿಗಳ ಕೆಲ ಅಧಿಕಾರಿಗಳು, ಮಾರಾಟದಿಂದ ಬಂದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ಬರಬೇಕಿದ್ದ ₹12.33 ಕೋಟಿ ಪರರ ಪಾಲಾಗಿದೆ.
ಈ ಸಂಬಂಧ ಸ್ವತಃ ಬಲ್ಬ್‌ ಮಾರಾಟದ ಬಿಡ್‌ ಪಡೆದಿದ್ದ ‘ಸ್ಟ್ರಾಟೆಜಿಕ್‌ ಔಟ್‌ಸೋರ್ಸಿಂಗ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ’ಯ (ಎಸ್‌ಓಎಸ್‌) ಹಿರಿಯ ವ್ಯವಸ್ಥಾಪಕ ಪಿ.ಶಿವಕುಮಾರ್‌, ಬೆಂಗಳೂರಿನ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಏಪ್ರಿಲ್‌ 16ರಂದು ದೂರು ದಾಖಲಿಸಿದ್ದಾರೆ.

ಅದರನ್ವಯ ದೆಹಲಿಯ ಗ್ಲೋಬಲ್‌ ಐ.ಟಿ ಸರ್ವೀಸ್‌ ಕಂಪೆನಿಯ ಸಂಸ್ಥಾಪಕ ರಾಮಚಂದ್ರ ರಾಮ್‌, ಅವರ ಮಗ ಎಸ್‌ಓಎಸ್‌ ಕಂಪೆನಿಯ ಕಾರ್ಯಕ್ರಮ ಸಮನ್ವಯಾಧಿಕಾರಿ ದೀಪೇಂದ್ರಕುಮಾರ್‌, ಸಹಾಯಕ ಪ್ರಧಾನ ವ್ಯವಸ್ಥಾಪಕ (ವಹಿವಾಟು ವೃದ್ಧಿ)  ಸಂಜೀವ್‌ಕುಮಾರ್‌ ಸಿಂಗ್‌, ಗ್ಲೋಬಲ್‌ ಕಂಪೆನಿ ಉದ್ಯೋಗಿ ನಿಖಿಲೇಶ್‌ ಕುಮಾರ್‌   ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಏನಿದು ಹಗರಣ?: ಬಲ್ಬ್‌ ತಯಾರಿಕಾ ಕಂಪೆನಿಗಳಿಂದ ಸರ್ಕಾರವು ಖರೀದಿ ಮಾಡಿದ್ದ ಬಲ್ಬ್‌ಗಳನ್ನು ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಆಂಧ, ಕರ್ನಾಟಕ, ಛತ್ತೀಸ್‌ಗಡ, ಗೋವಾ, ಮಧ್ಯಪ್ರದೇಶ, ಗುಜರಾತ್‌ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ  ಸಂಬಂಧ ಇಇಎಸ್‌ಎಲ್‌, ಎಸ್‌ಓಎಸ್‌ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿತ್ತು.
ಬಿಡ್‌ ಪಡೆದಿದ್ದ ಎಸ್‌ಓಎಸ್‌ ಕಂಪೆನಿಯು ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಮಧ್ಯಪ್ರದೇಶ ರಾಜ್ಯಗಳ ಉಪಗುತ್ತಿಗೆಯನ್ನು 2015ರ ಜುಲೈನಲ್ಲಿ ದೆಹಲಿಯ ಗ್ಲೋಬಲ್‌ ಐ.ಟಿ. ಸರ್ವೀಸ್‌ ಸಂಸ್ಥಾಪಕ ರಾಮಚಂದ್ರ ರಾಮ್‌ ಎಂಬುವರಿಗೆ ನೀಡಿತ್ತು.

ಆ ಕಂಪೆನಿಯ ಉದ್ಯೋಗಿ ನಿಖಿಲೇಶ್‌ ಕುಮಾರ್‌ ಹೆಸರಿನಲ್ಲಿ 2015ರ ಆ. 3ರಂದು ಹಿಮಾಚಲ ಪ್ರದೇಶ, 2016ರ ಫೆ.1ರಂದು ಛತ್ತೀಸ್‌ಗಡ ಹಾಗೂ 2016ರ ಫೆ. 2ರಂದು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಕಾರ್ಯಾದೇಶ ಕೊಡಲಾಗಿತ್ತು.

ಬಲ್ಬ್‌ ಮಾರಾಟದಿಂದ ಬಂದ ಹಣವನ್ನು ಎಸ್‌ಓಎಸ್‌ ಕಂಪೆನಿಯ ಪರವಾಗಿ ಇಇಎಸ್ಎಲ್‌ ಖಾತೆಗೆ ಜಮಾ ಮಾಡುವಂತೆ ರಾಮಚಂದ್ರ ಅವರಿಗೆ  ಸೂಚಿಸಲಾಗಿತ್ತು ಎಂದು ಶಿವಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ತಪಾಸಣೆ ವೇಳೆ ಬಯಲಾದ ಅಕ್ರಮ: ಎಸ್‌ಓಎಸ್‌ ಕಂಪೆನಿಯ ಲೆಕ್ಕ ಪರಿಶೋಧಕರು, 2016ರ ಸೆಪ್ಟೆಂಬರ್‌ನಲ್ಲಿ ಲೆಕ್ಕ ಪರಿಶೀಲನೆ ಮಾಡಿದ್ದರು. ಆಗ ಗ್ಲೋಬಲ್‌ ಐ.ಟಿ. ಸರ್ವೀಸ್‌ ಕಂಪೆನಿಯವರು ಮಾರಾಟ ಮಾಡಿದ ಬಲ್ಬ್‌ ಹಾಗೂ ಇಇಎಸ್‌ಎಲ್‌ ಖಾತೆಗೆ ಜಮಾ ಮಾಡಿರುವ ಹಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು.

ಇದೇ ವೇಳೆ ರಾಮಚಂದ್ರ ರಾಮ್‌ ಅವರು ದೀಪೇಂದ್ರಕುಮಾರ್‌ ಅವರ ತಂದೆ ಎಂಬುದು ಪತ್ತೆಯಾಯಿತು. ದೀಪೇಂದ್ರ ಕುಮಾರ್‌, 2016ರ ಜುಲೈನಲ್ಲೇ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದನ್ನು ಸಂಜೀವ್‌ ಕುಮಾರ್‌ ಅವರೇ ಅಂಗೀಕರಿಸಿದ್ದರು. ಹೆಚ್ಚಿನ ತಪಾಸಣೆ ನಡೆಸಿದಾಗ ಇವರಿಬ್ಬರು ಒಳಸಂಚು ಮಾಡಿ ಕಾರ್ಯಾದೇಶ ಕೊಟ್ಟಿರುವುದು ಗೊತ್ತಾಯಿತು ಎಂದು ಶಿವಕುಮಾರ್‌ ಹೇಳಿದ್ದಾರೆ.

‘ಈ ಸಂಬಂಧ ಸಂಜೀವ್‌ ಕುಮಾರ್‌ ಯಾವುದೇ ವಿವರಣೆ ಕೊಟ್ಟಿಲ್ಲ. ಅವರು ಇ–ಮೇಲ್‌ ಮೂಲಕವೇ ರಾಜೀನಾಮೆ ಪತ್ರ ಕಳುಹಿಸಿದ್ದು, ಅದನ್ನು ಅಂಗೀಕರಿಸಿಲ್ಲ’ ಎಂದು ಅವರು ಹೇಳಿದ್ದಾರೆ.

‘ಗ್ಲೋಬಲ್‌ ಐ.ಟಿ. ಸರ್ವೀಸ್ ಕಂಪೆನಿಯು ₹ 12.33 ಕೋಟಿ ಹಣವನ್ನು ಇಇಎಸ್‌ಎಲ್‌ ಖಾತೆಗೆ ಜಮೆ ಮಾಡಿಲ್ಲ. ನಾಲ್ವರೂ ಒಳಸಂಚು ಮಾಡಿ ಈ ಕೃತ್ಯ ಎಸಗಿದ್ದಾರೆ. ಹಣವನ್ನೆಲ್ಲ  ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

₹ 1.8 ಕೋಟಿ ಮಾತ್ರ ಪಾವತಿ
‘ಇಇಎಸ್‌ಎಲ್‌ ಕಂಪೆನಿಯ ಖಾತೆಗೆ ₹ 10.81 ಕೋಟಿ ಪಾವತಿ ಮಾಡುವುದು ಬಾಕಿ ಇದೆ ಎಂದು ದೀಪೇಂದ್ರ ಕುಮಾರ್‌ 2016ರ ನವೆಂಬರ್‌ 10ರಂದು ಲಿಖಿತವಾಗಿ ಬರೆದುಕೊಟ್ಟಿದ್ದರು’. ಬಳಿಕ ₹ 1.8 ಕೋಟಿ ಹಣವನ್ನು ಅಗ್ಲೆನ್‌ ಬಿಸ್ನೆಸ್‌ ಸಲೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಖಾತೆಯಿಂದ ಪಾವತಿ ಮಾಡಿದ್ದು, ಉಳಿದ ಹಣವನ್ನು ಇದುವರೆಗೂ ಪಾವತಿಸಿಲ್ಲ. ಜತೆಗೆ ಅಗ್ಲೆನ್‌ ಕಂಪೆನಿಗೆ ದೀಪೇಂದ್ರ ಕುಮಾರ್‌ ಮತ್ತು ಸಂಜೀವ್‌ ಕುಮಾರ್‌ ಇಬ್ಬರೂ ನಿರ್ದೇಶಕರು ಎಂಬುದು ಗೊತ್ತಾಗಿದ್ದು, ಇದು ಸಹ ಅಕ್ರಮ’ ಎಂದು ಶಿವಕುಮಾರ್‌ ದೂರಿದ್ದಾರೆ.
ಕೃಪೆ:ಪ್ರಜಾವಾಣಿ
‘LED Bulb’,Central Government,unnata jyoti,project, 12.33 crore scam