ಮೈಸೂರು,ಜೂ,19,2017(www.justkannada.in) 3ನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯ ಅಂಗವಾಗಿ 60 ಸಾವಿರಕ್ಕೂ ಹೆಚ್ಚು ಮಂದಿಯಿಂದ ಯೋಗ ಮಾಡಿಸುವ ಮೂಲಕ ಗಿನ್ನಿಸ್ ದಾಖಲೆಗೆ ಸಜ್ಜಾಗಿರುವ ಮೈಸೂರು ಈಗ ವಿಶ್ವವಿಖ್ಯಾತ ಯೋಗನಗರಿಯಾಗಿ ಹೊರಹೊಮ್ಮುತ್ತಿದೆ.ಅದರ ಧ್ಯೋತಕ ಎಂಬಂತೆ ಈವತ್ತು ಜಗದ್ವಿಖ್ಯಾತ ಅರಮನೆಯ ಮುಂಭಾಗ ಲಾಂಗೆಸ್ಟ್ ಯೋಗ ಚೈನ್ ಪ್ರದರ್ಶನದ ಮೂಲಕ ಗಿನ್ನಿಸ್ ದಾಖಲೆಗಾಗಿ ಅಭೂತಪೂರ್ವ ಪ್ರಯತ್ನಕ್ಕೆ ಅರಮನೆ ನಗರಿ ಸಾಕ್ಷಿಯಾಯಿತು.Last attempt- Guinness record- Longest yoga chain show- Mysore.

ಮೈಸೂರು ಅರಮನೆಯ ಮುಂದೆ ಹೀಗೆ ಏಕಕಾಲಕ್ಕೆ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡಿ ಗಿನಿಸ್ ದಾಖಲೆಯ ಪುಸ್ತಕ ಸೇರುವ ಸರ್ವ ಪ್ರಯತ್ನ ಮಾಡಿದರು. ತಮಿಳುನಾಡಿನ ಪೆರಂಬಲೂರಿನಲ್ಲಿ 3500 ವಿದ್ಯಾರ್ಥಿಗಳು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಿದ್ದೇ ಇದುವರೆಗಿನ ಸಾಧನೆಯಾಗಿತ್ತು. ಆದರೆ ಇಂದು ವಿಶ್ವವಿಖ್ಯಾತ ಅರಮನೆಯ ಮುಂದೆ ಜಮಾಯಿಸಿದ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಚ್ಚುಕಟ್ಟಾದ ಯೋಗ ಪ್ರದರ್ಶನ ನೀಡಿ ಗಮನ ಸೆಳೆದರು.

ಗಿನಿಸ್ ದಾಖಲೆಯ ನಿಯಮಾನುಸಾರ ಸರಪಳಿಯಲ್ಲಿ ಒಂದು ಕಡೆಯೂ ಖಾಲಿ ಇಲ್ಲದಂತೆ, 50 ವಿದ್ಯಾರ್ಥಿಗಳಿಗೆ ಒಬ್ಬರಂತೆ ಅಬ್ಸರ್ವರ್ಗಳನ್ನ ನೇಮಿಸಿದ್ದೂ ಅಲ್ಲದೆ ಅಷ್ಟು ಮಂದಿ ಕಡ್ಡಾಯವಾಗಿ ಕೆಳಭಾಗದಲ್ಲಿ ಮ್ಯಾಟ್ ಬಳಸಿ ಗಿನಿಸ್ ದಾಖಲೆಗೆ ಪ್ರಯತ್ನ ಮಾಡಿದರು.
ಲಾಂಗೆಸ್ಟ್ ಯೋಗ ಚೈನ್ಗಾಗಿ ಅರಮನೆಯ ಮುಂಭಾಗ ಈಗಾಗಲೇ ಮೂರ್ನಾಲ್ಕು ಬಾರಿ ತಾಲೀಮನ್ನು ನಡೆಸಲಾಗಿತ್ತು.

ಇಂದು  ಅಂತಿಮ ಪ್ರಯತ್ನವಾಗಿದ್ದರಿಂದ ಯೋಗ ಗುರುಗಳು ವಿಶೇಷ ಆಸಕ್ತಿ ವಹಿಸಿದ್ದರು. ವಿದ್ಯಾರ್ಥಿಗಳು ಏಕಕಾಲಕ್ಕೆ ವೀರಭದ್ರಾಸನ 1, ತ್ರಿಕೋನಾಸನ, ವೀರಭದ್ರಾಸನ 2, ಪ್ರೇರಿತ ಪಡೋತ್ತಾಸನ ಪ್ರದರ್ಶಿಸಿ ರೋಮಾಂಚನಗೊಳಿಸಿದರು. ಈ ಯೋಗ ಪ್ರದರ್ಶನ ವೀಕ್ಷಿಸಲು ಯೋಗದ ಮೂಲಕವೇ ಗಿನಿಸ್ ದಾಖಲೆ ಮಾಡಿರುವ ಮೈಸೂರಿನ ಬಾಲೆ ಖುಷಿ ಕೂಡ ಆಗಮಿಸಿ ಖುಷಿಪಟ್ಟರು.

ಇನ್ನು ಅತೀ ಉದ್ದದ ಯೋಗ ಸರಪಳಿ ನಿರ್ಮಿಸಲು ಶಾಲಾ ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಗೆಲ್ಲಾ ಅರಮನೆ ಆವರಣದಲ್ಲಿ ಜಮಾಯಿಸಿದ್ದರು. ಆದರೆ ಅಂತಿಮ ಪ್ರಯತ್ನವಾದ್ದರಿಂದ ಸಿದ್ಧತೆ ವಿಳಂಬವಾದ ಕಾರಣ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಸುಸ್ತಾಗಿ ಅಸ್ವಸ್ಥರಾದರು. ಅವರಿಗೆ ತಕ್ಷಣವೇ ಸ್ಥಳದಲ್ಲೇ ಇದ್ದ ವೈದ್ಯರು ಉಪಚರಿಸಿದರು.

ಒಟ್ಟಾರೆ ಸಾಂಸ್ಕೃತಿಕ ನಗರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಯೋಗ ಪ್ರದರ್ಶನದ ಮೂಲಕವೇ ಎರಡು ಗಿನಿಸ್ ದಾಖಲೆಗೆ ಪ್ರಯತ್ನ ಆರಂಭವಾಗಿದ್ದು, ಮೊದಲ ಪ್ರಯತ್ನ ಈವತ್ತು ಪೂರ್ಣಗೊಂಡಿದೆ. ಎರಡನೇ ಗಿನಿಸ್ ದಾಖಲೆ ಯತ್ನ ಜೂನ್ 21ರಂದು ರೇಸ್ಕೋರ್ಸ್ ಮೈದಾನದಲ್ಲಿ ನಡೆಯಲಿದೆ. ಅಂದು 60ಕ್ಕೂ ಸಾವಿರಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ.

key words:Last attempt- Guinness record- Longest yoga chain show- Mysore.