ಬೆಂಗಳೂರು, ನವೆಂಬರ್ 14 (www.justkannada.in): ಕೇರಳದ ಪವಿತ್ರ ಯಾತ್ರಾ ತಾಣ ಶಬರಿಮಲೆಗೆ ನೇರವಾಗಿ ಸಂಪರ್ಕ ಒದಗಿಸುವ ಬಸ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಒದಗಿಸುತ್ತಿದೆ.

ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ರಾಜಹಂಸ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಈವರೆಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ರಾಜಹಂಸ ಸೇವೆ ಲಭ್ಯವಿತ್ತು. ಇಲ್ಲಿ ತನಕ ವೇಗದೂತ ಬಸ್‌ಗಳಲ್ಲಿ ಭಕ್ತರು ತೆರಳುತ್ತಿದ್ದರು. ಈಗ ರಾಜಹಂಸ ಬಸ್‌ನಲ್ಲಿಯೂ ಪ್ರಯಾಣಿಸಬಹುದಾಗಿದೆ.

ಬೆಂಗಳೂರಿನಿಂದ ಪಂಪಾಗೆ ಶಬರಿಮಲೈ ಮಾರ್ಗದಲ್ಲಿ ನೂತನ ರಾಜಹಂಸ ಬಸ್ ಸಂಚರಿಸಲಿದೆ. ಪ್ರತಿದಿನ ಮಧ್ಯಾಹ್ನ 1.30 ಕ್ಕೆ ಬೆಂಗಳೂರಿನಿಂದ ಹೊರಡಲಿರುವ ಬಸ್ ಮರುದಿನ ಬೆಳಗ್ಗೆ 8.45ಕ್ಕೆ ಪಂಪಾ ತಲುಪಲಿದೆ. ಅದೇ ರೀತಿ ಪಂಪಾದಿಂದ ಸಂಜೆ 5 ಗಂಟೆಗೆ ಹೊರಡಲಿರುವ ಬಸ್ ಮರುದಿನ ರಾತ್ರಿ 12 ಕ್ಕೆ ಬೆಂಗಳೂರು ತಲುಪಲಿದೆ.

ರಾಜಹಂಸ ಬಸ್ ಟಿಕೆಟ್ ದರ 835 ರೂ.ಗಳಾಗಿದೆ. ಈ ಸೇವೆ ಡಿಸೆಂಬರ್1 ರಿಂದ ಆರಂಭಗೊಳ್ಳುತ್ತಿದ್ದು, ಇಂದಿನಿಂದಲೇ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರುಗಳು ಮಾಹಿತಿ ನೀಡಿದ್ದಾರೆ.