ಹಿಂಗಾರು ಹಂಗಾಮಿನಲ್ಲೂ ರಾಜ್ಯದ 160 ತಾಲ್ಲೂಕುಗಳಲ್ಲಿ ಮಳೆ ಕೊರತೆ: ಜ.20ರೊಳಗೆ ಜಂಟಿ ಸರ್ವೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ

0
5

Rain deficitಬೆಂಗಳೂರು: ಜ-12: (www.justkannada.in)ರಾಜ್ಯದ 160 ತಾಲ್ಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಸಾಮಾನ್ಯ ವರ್ಷದಲ್ಲಿ ಸರಾಸರಿ 33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಜ್ಯದಲ್ಲಿ ಭಿತ್ತನೆ ಕಾರ್ಯ ನಡೆಯುತ್ತಿತ್ತು. ಆದರೆ ಈ ಬಾರಿ 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹಿಂಗಾರು ಬೆಳೆ ನಷ್ಠ ಕುರಿತಂತೆ ಜಂಟಿ ಸರ್ವೆ ಕಾರ್ಯ ನಡೆಸಿ ಜನವರಿ 20ರ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ರಾಜ್ಯದ 139 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಮುಂಗಾರು ಹಂಗಾಮಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ 4702 ಕೋಟಿ ರೂ. ಪರಿಹಾರದ ಹಣ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ 1782 ಕೋಟಿ ರೂ. ಹಣ ನೀಡುವುದಾಗಿ ಹೇಳಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಣೆ ಮಾಡಿರುವ ಪರಿಹಾರದ ಹಣ ತುಂಬಾ ಕಡಿಮೆಯಾಗಿದ್ದು, ಕಳೆದ ಸಾರಿ ಮಹಾರಾಷ್ಟ್ರ ಸರ್ಕಾರಕ್ಕೆ ಹಣ ನೀಡಿದಂತೆ ರಾಜ್ಯಕ್ಕೂ ಕನಿಷ್ಠ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು, ಬರಪರಿಹಾರದ ಹಣ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ಅವರಿಗೆ ನಮ್ಮ ಮುಖ್ಯಮಂತ್ರಿ ಅವರು ಈಗಾಗಲೇ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಬರ ನಿರ್ವಹಣೆ ಮತ್ತು ಮೇಲುಸ್ತುವಾರಿಗಾಗಿ ನಾಲ್ಕು ಸಚಿವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿದ್ದು ಈಗಾಗಲೇ ಸಮಿತಿಗಳು ರಾಜ್ಯ ಪ್ರವಾಸ ಮಾಡಿ ಬರ ಅಧ್ಯಯನ ನಡೆಸಿವೆ, ರಾಜ್ಯದಲ್ಲಿ 46 ವರ್ಷಗಳ ನಂತರ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

Krishna Byre Gowda,Karnataka suffers,crop loss,deficit rains