ಬೆಂಗಳೂರು:ಏ-21: ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಡಾ.ಕಸ್ತೂರಿರಂಗನ್‌ ವರದಿ ಜಾರಿ ಕುರಿತಂತೆ ರಾಜ್ಯ ಸರ್ಕಾರ ಬುಧವಾರ ಕೈಗೊಂಡಿರುವ ನಿರ್ಧಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಈ ವಿಚಾರ “ಚುನಾವಣಾ ಅಸ್ತ್ರ’ವಾಗುವ ಲಕ್ಷಣಗಳು ಕಾಣುತ್ತಿವೆ.

ಕಸ್ತೂರಿರಂಗನ್‌ ವರಂಗನ್‌ ವರದಿ ಜಾರಿಗೊಳಿಸಬಾರದು. ಆದ್ದರಿಂದ ಈ ಕುರಿತಂತೆ ಹೊರಡಿಸಿರುವ ಕರಡು ಅಧಿಸೂಚನೆ ವಾಪಸ್‌ ಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಈ ವರದಿ ಜಾರಿಗೊಳಿಸುವುದಾಗಿ 2012ರಲ್ಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಹೀಗಿರುವಾಗ ರಾಜ್ಯ ಸರ್ಕಾರದ ಆಕ್ಷೇಪಣೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡರೆ ಹಸಿರು ನ್ಯಾಯಾಧಿಕರಣ ಅದನ್ನು ಒಪ್ಪದೆ ಕಸ್ತೂರಿ ರಂಗನ್‌ ವರದಿಯನ್ನು ಯಥಾವತ್‌ ಜಾರಿಗೆ ತರುವಂತೆ ಆದೇಶಿಸುವ ಆತಂಕ ಎದುರಾಗಿದೆ.

ಕಸ್ತೂರಿರಂಗನ್‌ ವರದಿ ಜಾರಿ ಕುರಿತ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಏ. 27 ಅಂತಿಮ ದಿನವಾಗಿದ್ದು, ಅದೇ ದಿನ ಹಸಿರು ನ್ಯಾಯಾಧಿಕರಣದ ಮುಂದೆಯೂ ಈ ಕುರಿತ ಅರ್ಜಿ ವಿಚಾರಣೆಗೆ ಬರುವುದರಿಂದ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರ ಮತ್ತು ನ್ಯಾಯಾಧಿಕರಣದ ವಿಚಾರಣೆ ಸಾಕಷ್ಟು ಕುತೂಹಲ ಕೆರಳಿಸಿದೆ.

ವ್ಯತಿರಿಕ್ತ ತೀರ್ಮಾನ: ಕಸ್ತೂರಿರಂಗನ್‌ ವರದಿ ಕುರಿತಂತೆ ಈ ಹಿಂದೆ ಕೇಂದ್ರ ಸರ್ಕಾರ ಮೂರು ಬಾರಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತಾದರೂ ಅದು ತಾನು ಸೂಚಿಸಿರುವ ಮಾರ್ಗಸೂಚಿಯನ್ವಯ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿತ್ತು.

ಈ ಮಧ್ಯೆ ಮೂರನೇ ಬಾರಿ ಹೊರಡಿಸಿದ್ದ ಕರಡು ಅಧಿಸೂಚನೆಗೆ ಕೇರಳ ಸರ್ಕಾರ ಸೂಕ್ತ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸಿತ್ತು. ಹೀಗಾಗಿ ನಾಲ್ಕನ ಬಾರಿ ಮತ್ತೆ ಕರಡು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ ಕೇರಳ ಮಾದರಿಯಲ್ಲಿ ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡು ಹಾಗೂ ಅದಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಸಾಂಸ್ಕೃತಿಕ ಅರಣ್ಯ ಮತ್ತು ನೈಸರ್ಗಿಕ ಅರಣ್ಯದ ಕುರಿತು ಸಮೀಕ್ಷೆ ನಡೆಸಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ ರಾಜ್ಯ ಸರ್ಕಾರ ಗ್ರಾಮಸಭೆಗಳನ್ನು ನಡೆಸಿ ವರದಿ ತರಿಸಿಕೊಂಡಿತಾದರೂ ಸಾಂಸ್ಕೃತಿಕ ಅರಣ್ಯ ಮತ್ತು ನೈಸರ್ಗಿಕ ಅರಣ್ಯದ ಕುರಿತು ಸ್ಥಳೀಯವಾಗಿ ಸಮೀಕ್ಷೆ ನಡೆಸಲಿಲ್ಲ. ಅಲ್ಲದೆ, ಗ್ರಾಮಸಭೆಗಳಲ್ಲೇ ವರದಿ ತಿರಸ್ಕರಿಸುವ ನಿರ್ಣಯ ಕೈಗೊಂಡು ಅದನ್ನೇ ಯಥಾವತ್‌ ಕೇಂದ್ರಕ್ಕೆ ಆಕ್ಷೇಪಣೆ ರೂಪದಲ್ಲಿ ಕಳುಹಿಸಲು ತೀರ್ಮಾನಿಸಿದೆ. ಇದು ಕೇಂದ್ರದ ಸೂಚನೆಗೆ ವ್ಯತಿರಿಕ್ತವಾಗಿರುವುದರಿಂದಲೇ ಪ್ರಕರಣ ರಾಜಕೀಯ ಅಸ್ತ್ರವಾಗಿ ಮಾರ್ಪಡುವ ಲಕ್ಷಣ ಗೋಚರಿಸಿದೆ.

ಸರ್ಕಾರ ಹೇಳುವುದೇನು?:
ಇದೊಂದು ಸೂಕ್ಷ್ಮ ವಿಚಾರ. ಪರಿಸರದ ಜತೆಗೆ ಮಾನವನ ಬದುಕನ್ನೂ ನೋಡಬೇಕಾಗುತ್ತದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳ (ಒಟ್ಟು 10 ಜಿಲ್ಲೆಗಳು) 33 ತಾಲೂಕುಗಳ 1,276 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಕಸ್ತೂರಿರಂಗನ್‌ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಶೇ. 20 ಅರಣ್ಯ ಪ್ರದೇಶವಿರುವ ಗ್ರಾಮಗಳನ್ನೂ ಈ ವರದಿಯ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಇದರಿಂದ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ಪಟ್ಟಣಗಳು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಮೇಲಾಗಿ ವರದಿ ತಿರಸ್ಕರಿಸಬೇಕು ಎಂಬುದು ಆ ಭಾಗದ ಜನರ ಅಭಿಪ್ರಾಯವೂ ಆಗಿದೆ. ಎಲ್ಲವನ್ನೂ ಕ್ರೋಢೀಕರಿಸಿ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಬಿಜೆಪಿ ವಿರೋಧ:
ರಾಜ್ಯ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2012ರಲ್ಲಿ ಹಸಿರು ನ್ಯಾಯಾಧಿಕರಣದ ಮುಂದೆ ಕಸ್ತೂರಿರಂಗನ್‌ ವರದಿ ಜಾರಿಗೊಳಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದೆ. ಹೀಗಿದ್ದರೂ ಜನರ ಹಿತದೃಷ್ಟಿಯಿಂದ ಎನ್‌ಡಿಎ ಸರ್ಕಾರ ಬಂದ ಮೇಲೆ ನ್ಯಾಯಾಧಿಕರಣದ ಮುಂದೆ ಸಮಯ ಕೇಳಿ ರಾಜ್ಯಗಳಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಅಂತಿಮವಾಗಿ ಕರಡು ಅಧಿಸೂಚನೆ ಹೊರಡಿಸುವಾಗ ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸಿ ಎಂಬ ಸೂಚನೆಯನ್ನೂ ನೀಡಿತ್ತು. ಅಲ್ಲದೆ, ನೀವು ಈ ಹಿಂದೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಕೋರಿದ್ದಂತೆ ವರದಿ ಜಾರಿಗೊಳಿಸದೇ ಇರಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ನಾವು ಕೂಡ ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದೆವು. ಹೀಗಿದ್ದರೂ ರಾಜ್ಯ ಸರ್ಕಾರ ಮತ್ತೆ ಅದೇ ರೀತಿಯ ತೀರ್ಮಾನಕ್ಕೆ ಬಂದಿರುವುದರ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ ಎಂದು ಆರೋಪಿಸುತ್ತಿದೆ.

ಮತ್ತೆ ಕಾಲಾವಕಾಶ ಕೇಳಲಿದೆಯೇ ಕೇಂದ್ರ?
ಕಸ್ತೂರಿರಂಗನ್‌ ವರದಿ ವ್ಯಾಪ್ತಿಗೆ ಕರ್ನಾಟಕ ಮಾತ್ರವಲ್ಲದೆ ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು, ಗೋವಾ ಮತ್ತು ಕೇರಳ ರಾಜ್ಯಗಳು ಬರುತ್ತವೆ. ಈ ವರ್ಷಾಂತ್ಯಕ್ಕೆ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ. ವರದಿ ಜಾರಿಯಿಂದ ಗುಜರಾತ್‌ನಲ್ಲಿ ಸಮಸ್ಯೆ ಇಲ್ಲವಾದರೂ ರಾಜಕೀಯವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಕರ್ನಾಟಕದಲ್ಲಂತೂ ಜನರಿಗೆ ಹೆಚ್ಚಿನ ಸಮಸ್ಯೆಯಾಗಲಿದ್ದು, ಅನ್ಯ ಪಕ್ಷಗಳು ಇದರ ರಾಜಕೀಯ ಲಾಭ ಪಡೆದುಕೊಳ್ಳುವುದು ನಿಶ್ಚಿತ. ಇನ್ನೊಂದೆಡೆ ಕರ್ನಾಟಕ ಮತ್ತು ಕೇರಳ ಹೊರತುಪಡಿಸಿ ಅನ್ಯ ರಾಜ್ಯಗಳು ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ನ್ಯಾಯಾಧಿಕರಣದ ಮುಂದೆ ವರದಿ ಜಾರಿಗೆ ಇನ್ನಷ್ಟು ಕಾಲಾವಕಾಶ ಕೇಳುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಗ್ರಾಮಸಭೆ ನಡೆಸಿ ಅಲ್ಲಿನ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅದರಂತೆ ಗ್ರಾಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿದಾಗ ಬಹುತೇಕ ಎಲ್ಲರೂ ವರದಿ ತಿರಸ್ಕರಿಸುವಂತೆ ಅಭಿಪ್ರಾಯ ನೀಡಿದ್ದಾರೆ. ಒಂದೊಮ್ಮೆ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಎಲ್ಲವನ್ನೂ ಪರಿಗಣಿಸಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಏನೇ ನಿರ್ಧಾರ ಕೈಗೊಂಡರೂ ಅದನ್ನು ಜಾರಿಗೊಳಿಸುವಾಗ ರಾಜ್ಯದ ಒಪ್ಪಿಗೆ ಪಡೆಯಲೇ ಬೇಕಾಗುತ್ತದೆ.
– ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಕಸ್ತೂರಿರಂಗನ್‌ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಅವಕಾಶವೇ ಇಲ್ಲ. ಗ್ರಾಮಸಭೆಗಳಲ್ಲಿ ವರದಿ ತಿರಸ್ಕರಿಸಬೇಕು ಎಂದು ಹೇಳಿದ ಮಾತ್ರಕ್ಕೆ ಅದನ್ನು ಯಥಾವತ್‌ ಪರಿಗಣಿಸುವುದು ಸೂಕ್ತವಲ್ಲ. ಆಕ್ಷೇಪಣೆ ಸಲ್ಲಿಸಲು ಕೆಲವೊಂದು ಕಾರ್ಯವಿಧಾನಗಳಿವೆ. ಅದಾವುದನ್ನೂ ಪರಿಗಣಿಸದೆ ವರದಿ ತಿರಸ್ಕರಿಸಬೇಕು. ಎಲ್ಲಾ ಹಳ್ಳಿಗಳನ್ನು ಕೈಬಿಡಬೇಕು ಎಂದು ಹೇಳುವುದು ನ್ಯಾಯಯುತವಲ್ಲ. ಕೇರಳ ಸಲ್ಲಿಸಿದ್ದ ಆಕ್ಷೇಪಣೆಯನ್ನು ಆಡಳಿತದಲ್ಲಿರುವವರು ಸರಿಯಾಗಿ ನೋಡಿದ್ದರೆ ಈ ರೀತಿಯ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ.
– ಕೆ.ಜಿ.ಬೋಪಯ್ಯ, ಬಿಜೆಪಿ ಶಾಸಕ
ಕೃಪೆ:ಉದಯವಾಣಿ
kasturirangan report,an-election-weapon