ಬೆಂಗಳೂರು:ಮಾ-20: ಪಶ್ಚಿಮ ಘಟ್ಟದ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮಪ್ರದೇಶ ಎಂಬುದಾಗಿ ಪರಿಗಣಿಸುವ ಕಸ್ತೂರಿರಂಗನ್‌ ವರದಿ ಕುರಿತು ಇದುವರೆಗೆ ಮೂರು ಬಾರಿ ಆಕ್ಷೇಪ ಸಲ್ಲಿಸಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿಫ‌ಲವಾಗಿರುವ ರಾಜ್ಯ ಸರಕಾರ, ಈಗ ಕೇರಳ ಮಾದರಿಯಲ್ಲಿ ಆಕ್ಷೇಪ ಸಲ್ಲಿಸಲು ಚಿಂತಿಸಿದೆ. ಕಸ್ತೂರಿರಂಗನ್‌ ವರದಿ ಜಾರಿ ಕುರಿ ತಂತೆ ಫೆ. 27ರಂದು ನಾಲ್ಕನೇ ಬಾರಿ ಕರಡು ಅಧಿಸೂಚನೆ ಪ್ರಕಟಿಸಿರುವ ಕೇಂದ್ರ ಸರಕಾರ, ಆಕ್ಷೇಪ ಸಲ್ಲಿಸಲು ರಾಜ್ಯಕ್ಕೆ ಮತ್ತೂಂದು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕ ರೀತಿಯಲ್ಲಿ ಆಕ್ಷೇಪ ಸಲ್ಲಿಸಿ ತಮ್ಮ ರಾಜ್ಯವನ್ನು ವರದಿಯಿಂದ ಕೈಬಿಡುವಂತೆ ನೋಡಿಕೊಂಡಿದ್ದ ಕೇರಳ ಸರ ಕಾರದ ಮಾದರಿ ಅನುಸರಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದು, ಅದಕ್ಕಾಗಿ ಕೇರಳದಿಂದ ಮಾಹಿತಿ ಪಡೆಯಲೂ ಯೋಚಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಕಸ್ತೂರಿರಂಗನ್‌ ವರದಿಯಲ್ಲಿ ಪ್ರಸ್ತಾವಿಸಲಾಗಿದ್ದ 20,688 ಚದರ ಕಿ.ಮೀ. ಪೈಕಿ ಜನವಸತಿ ಇರುವ 1,571 ಚದರ ಕಿ.ಮೀ. ಪ್ರದೇಶವನ್ನು ಅಧಿಸೂಚನೆಯಿಂದ ಕೈಬಿಡಬೇಕು ಎಂಬ ಕರ್ನಾಟಕದ ಕೋರಿಕೆಯನ್ನು ಕೇಂದ್ರ ಸರಕಾರ ಪರಿಗಣಿಸದ ಕಾರಣ ಈ ಬಾರಿ ಕೇರಳ ಮಾದರಿಯಲ್ಲಿ ಆಕ್ಷೇಪ ಸಲ್ಲಿಸಲು ರಾಜ್ಯ ಸರಕಾರ ಮುಂದಾಗಿದೆ. ಇನ್ನು ಒಂದು ವಾರದೊಳಗೆ ಅದಕ್ಕೆ ಬೇಕಾದ ಸಿದ್ಧತೆ ಆರಂಭಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.

ಕಸ್ತೂರಿರಂಗನ್‌ ವರದಿ ಜಾರಿ ಕುರಿತಂತೆ 2015ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಕರಡು ಅಧಿಸೂಚನೆಗೆ ಕೇರಳ ಮತ್ತು ಕರ್ನಾಟಕ ರಾಜ್ಯಗಳು ಆಕ್ಷೇಪ ಸಲ್ಲಿಸಿದ್ದವು. ಈ ಪೈಕಿ ಕೇರಳ ಸಲ್ಲಿಸಿದ್ದ ಆಕ್ಷೇಪ ಪರಿಗಣಿಸಿದ್ದ ಕೇಂದ್ರ ಸರಕಾರ, ರಾಜ್ಯ ಸರಕಾರ ಸಲ್ಲಿಸಿದ್ದ ಆಕ್ಷೇಪ ಮತ್ತು ಅಧಿಸೂಚನೆಯಲ್ಲಿ ಕೆಲವು ಬದಲಾವಣೆ ಮಾಡುವ ಮನವಿಯನ್ನು ಪರಿಗಣಿಸದೆ ಈ ಹಿಂದಿನ ಅಧಿಸೂಚನೆಯಲ್ಲಿ ಪ್ರಸ್ತಾವಿಸಿದ್ದ ಷರತ್ತುಗಳನ್ನೇ ಯಥಾಸ್ಥಿತಿ ಮುಂದುವರಿಸಿ ಹೊಸ ಕರಡು ಅಧಿಸೂಚನೆ ಪ್ರಕಟಿಸಿತ್ತು.

ಕಸ್ತೂರಿರಂಗನ್‌ ವರದಿ ಆಧರಿಸಿ ರಾಜ್ಯದ ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳ (ಒಟ್ಟು 10 ಜಿಲ್ಲೆಗಳು) ವ್ಯಾಪ್ತಿ ಒಟ್ಟು 20,668 ಚದರ ಕಿ.ಮೀ. ವಿಸ್ತೀರ್ಣವನ್ನು ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮಪ್ರದೇಶ ಎಂಬುದಾಗಿ 2015ರ ಕರಡು ಅಧಿಸೂಚನೆಯಲ್ಲಿ ಘೋಷಣೆ ಮಾಡಲಾಗಿತ್ತು. ಈ ಪೈಕಿ ಕೆಲವು ಜನವಸತಿ ಪ್ರದೇಶಗಳೂ ಇದ್ದವು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರಕಾರ, 20,688 ಚದರ ಕಿ.ಮೀ. ಪೈಕಿ ಜನವಸತಿ ಇರುವ 1,571 ಚದರ ಕಿ.ಮೀ. ಪ್ರದೇಶವನ್ನು ಅಧಿಸೂಚನೆಯಿಂದ ಕೈಬಿಡಬೇಕು ಎಂದು ಕೋರಿತ್ತು. ಆದರೆ ಇದನ್ನು ಕೇಂದ್ರ ಸರಕಾರ ಪರಿಗಣಿಸಿರಲಿಲ್ಲ.

ರಾಜ್ಯ ಸರಕಾರ ಎಡವಿದ್ದೆಲ್ಲಿ?
ಈ ಹಿಂದೆ ಆಕ್ಷೇಪಣೆ ಸಲ್ಲಿಸುವ ಮುನ್ನ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ರಾಜ್ಯ ಸರಕಾರ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿದ್ದು ಮತ್ತು ಜನರನ್ನು ಸಮಾಧಾನಪಡಿಸುವ ಉದ್ದೇಶದಿಂದ ಮಂತ್ರಿಗಳ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಮಾಡಿದ್ದೇ ಕೇಂದ್ರ ಸರಕಾರ ರಾಜ್ಯದ ಆಕ್ಷೇಪಣೆ ಪರಿಗಣಿಸದಿರಲು ಕಾರಣ ಎನ್ನಲಾಗಿದೆ.

ಆಕ್ಷೇಪಣೆ ಸಿದ್ಧಪಡಿಸುವಾಗ ರಾಜ್ಯ ಸರಕಾರ ಉಪಗ್ರಹ ಆಧಾರಿತ ಸಮೀಕ್ಷೆ ಆಧರಿಸಿ ಲ್ಯಾಂಡ್‌ ಸ್ಕೇಪಿಂಗ್‌ಗಳನ್ನು ಗುರುತಿಸಿತ್ತು. ಹೀಗಾಗಿ ಜನ ಆ ಭಾಗದಲ್ಲಿ ಬೆಳೆಸಿದ್ದ ರಬ್ಬರ್‌, ತೆಂಗು, ಅಡಿಕೆ, ಕಾಫಿ ಸಹಿತ ಇತರ ತೋಟಗಳು ಸಂಪೂರ್ಣ ಹಸಿರುಮಯವಾಗಿ ಕಾಣಿಸುತ್ತಿತ್ತು. ಮತ್ತೂಂದೆಡೆ ಪಶ್ಚಿಮಘಟ್ಟ ವ್ಯಾಪ್ತಿಗೆ ಬರುವ ಜಿಲ್ಲೆಗಳಿಗೆ ಸಂಪುಟ ಉಪಸಮಿತಿಗಳನ್ನು ಕಳುಹಿಸಿ ಮಂತ್ರಿಗಳ ನೇತೃತ್ವದಲ್ಲಿ ಸಾರ್ವಜನಿಕ ಸಭೆಗಳನ್ನು ಮಾಡಿ ಅಭಿಪ್ರಾಯ ಸಂಗ್ರಹಣೆ ಮಾಡಿತ್ತು. ಬಳಿಕ ಉಪಗ್ರಹ ಆಧಾರಿತ ನಕ್ಷೆ ಮತ್ತು ಮಂತ್ರಿಗಳು ಸಿದ್ಧಪಡಿಸಿದ ವರದಿ ಆಧರಿಸಿ ಯಾವ್ಯಾವ ಪ್ರದೇಶಗಳನ್ನು ಅಧಿಸೂಚನೆಯಿಂದ ಕೈಬಿಡಬೇಕು ಎಂಬ ಕುರಿತು ಪಟ್ಟಿ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿತ್ತು. ಆದರೆ, ಮಂತ್ರಿಗಳು ಸಿದ್ಧಪಡಿಸಿದ ವರದಿಗೆ ಅಧಿಕೃತ ಮಾನ್ಯತೆ ಇಲ್ಲ. ಇನ್ನೊಂದೆಡೆ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಅದನ್ನು ಮರೆತೇ ಬಿಟ್ಟಿತ್ತು.

ಮಾತುಕತೆ ವಿಚಾರದಲ್ಲಿ ಮೈಮರೆತ ಸರಕಾರ
ಕಸ್ತೂರಿರಂಗನ್‌ ವರದಿಗೆ ಆಕ್ಷೇಪಣೆ ಸಲ್ಲಿಸುವ ವಿಚಾರದಲ್ಲಿ ಕೇರಳ ಮಾದರಿ ಅನುಸರಿಸಲು ರಾಜ್ಯ ಸರಕಾರ ಯೋಚಿಸುತ್ತಿದ್ದರೂ ಮಾತುಕತೆ ಮೂಲಕ ಕೇಂದ್ರ ಸರಕಾರದ ಮನವೊಲಿಸುವ ವಿಚಾರದಲ್ಲಿ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹಿಂದಿನ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಕೇರಳದ ಮುಖ್ಯಮಂತ್ರಿಗಳು ಹಲವು ಬಾರಿ ಪ್ರಧಾನಿ ಹಾಗೂ ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಯಶಸ್ವಿಯಾದ ಉದಾಹರಣೆ ಕಣ್ಣ ಮುಂದೆ ಇದ್ದರೂ ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನವನ್ನೇ ನಡೆಸಿಲ್ಲ.

ಕೇರಳ ಸರಕಾರ ಯಾವ ರೀತಿ ಆಕ್ಷೇಪ ಸಲ್ಲಿಸಿತ್ತು?
ಮೂರನೇ ಬಾರಿ ಕರಡು ಅಧಿಸೂಚನೆ ಪ್ರಕಟಿಸಿದ ಬಳಿಕ ಎಚ್ಚರಿಕೆಯ ಹೆಜ್ಜೆ ಇಟ್ಟ ಕೇರಳ ಸರಕಾರ ಮೊದಲು ಪಶ್ಚಿಮಘಟ್ಟ ಪ್ರದೇಶದ ಸಮೀಕ್ಷೆಯನ್ನು ಸ್ಥಳೀಯವಾಗಿ ಕೈಗೊಂಡಿತ್ತು. ಆ ಸಂದರ್ಭ ನೈಸರ್ಗಿಕ (ನ್ಯಾಚುರಲ್‌) ಲ್ಯಾಂಡ್‌ ಸ್ಕೇಪಿಂಗ್‌ ಮತ್ತು ಸಾಂಸ್ಕೃತಿಕ (ಕಲ್ಚರಲ್‌) ಲ್ಯಾಂಡ್‌ ಸ್ಕೇಪಿಂಗ್‌ ಎಂದು ಎರಡು ಭಾಗಗಳಾಗಿ ವಿಂಗಡಿಸಿ ಜನವಸತಿ ಪ್ರದೇಶಗಳ ಹಸಿರು ವಲಯವನ್ನು ಸಾಂಸ್ಕೃತಿಕ ಲ್ಯಾಂಡ್‌ ಸ್ಕೇಪಿಂಗ್‌ ಎಂದು ಪರಿಗಣಿಸಿ ಅದನ್ನು ಆಕ್ಷೇಪದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿತ್ತು. ಅದೇ ರೀತಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಅಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿ ಪ್ರತ್ಯೇಕ ವರದಿ ಸಿದ್ಧಪಡಿಸಿತ್ತು. ಗ್ರಾಮಸಭೆ ವರದಿಗಳಿಗೆ ಅಧಿಕೃತ ಮಾನ್ಯತೆ ಇದ್ದುದರಿಂದ ಅದು ಆಕ್ಷೇಪಣಾ ವರದಿಗೆ ಹೆಚ್ಚು ಶಕ್ತಿ ತಂದುಕೊಟ್ಟಿತ್ತು. ಈ ಎರಡೂ ಅಂಶಗಳನ್ನು ದಾಖಲಿಸಿ ಆಕ್ಷೇಪ ಸಲ್ಲಿಸಿದ ಬಳಿಕ ಅಲ್ಲಿನ ಮುಖ್ಯಮಂತ್ರಿ ಸಾಕಷ್ಟು ಬಾರಿ ಪ್ರಧಾನಿ ಮೋದಿ ಮತ್ತು ಹಿಂದಿನ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರನ್ನು ಭೇಟಿಯಾಗಿ ಕಸ್ತೂರಿ ರಂಗನ್‌ ವರದಿಯಿಂದ ಕೇರಳ ರಾಜ್ಯವನ್ನು ಕೈಬಿಡುವಂತೆ ಕೋರಿಕೆ ಸಲ್ಲಿಸಿತ್ತು. ಕಸ್ತೂರಿರಂಗನ್‌ ವರದಿ ಜಾರಿ ಕುರಿತು ಕೇರಳ ಸರಕಾರ ಸಲ್ಲಿಸಿದ್ದ ಆಕ್ಷೇಪ ಪರಿಗಣಿಸಿದ್ದ ಕೇಂದ್ರ ಸರಕಾರ ನಾಲ್ಕನೇ ಕರಡು ಅಧಿಸೂಚನೆಯಲ್ಲಿ ಆ ರಾಜ್ಯವನ್ನು ವರದಿಯಿಂದ ಕೈಬಿಟ್ಟಿತ್ತು.

ಕೃಪೆ:ಉದಯವಾಣಿ
kasturi-rangan-report,Western Ghats