ಬೆಂಗಳೂರು, ಮಾರ್ಚ್ 17 (www.justkannada.in): ಇಂಗ್ಲಿಷ್‌ನ ಪದಗಳ ಸ್ಪೆಲ್ಲಿಂಗ್ ಹಾಗೂ ಉಚ್ಚಾರಣೆ ಬಗ್ಗೆ ಸಂದೇಹ ಬಂದಾಗ ಗೂಗಲ್‌ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಕನ್ನಡದ ಪದವೊಂದರ ಬಗ್ಗೆ ಸಂದೇಹ ಬಂದಾಗ ಮೊದಲು ನೆನಪಾಗುವುದು ಕನ್ನಡ ನಿಘಂಟು!

ಆನ್‌ಲೈನ್‌ ಕನ್ನಡ ನಿಘಂಟು. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ನಲ್ಲಿರುವ ನಿಘಂಟು ವಿಭಾಗ ಕನ್ನಡ ಪದಗಳ ನಿಮ್ಮ ಸಂದೇಹಕ್ಕೆ ತಕ್ಷಣದಲ್ಲಿ ಪರಿಹಾರ ನೀಡುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ ಅನ್ನು ಇತ್ತೀಚೆಗೆ ಮರುವಿನ್ಯಾಸಗೊಳಿಸಲಾಗಿದೆ. ಅನೇಕ ಉಪಯುಕ್ತ ಮಾಹಿತಿ ಕೊಂಡಿಗಳ ಜತೆಗೆ ಇಲ್ಲಿರುವ ಆನ್‌ಲೈನ್‌ ನಿಘಂಟು ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ಆನ್‌ಲೈನ್‌ ನಿಘಂಟಿನಲ್ಲಿ ನಿಮಗೆ ಅನುಮಾನ ಬಂದ ಕನ್ನಡ ಪದಗಳನ್ನು ಯುನಿಕೋಡ್‌ನಲ್ಲಿ ಟೈಪಿಸಿ ‘ಹುಡುಕು’ ಕ್ಲಿಕ್ಕಿಸಿದರೆ ಆಯಿತು. ಆ ಪದದ ಬೇರೆ ಬೇರೆ ಸಂದರ್ಭಗಳ ಪ್ರಯೋಗಗಳ ಬಗ್ಗೆ ನಿಮಗೆ ಮಾಹಿತಿ ಸಿಗಲಿದೆ. ಉದಾಹರಣೆಗೆ ನಿಮಗೆ ‘ಪೊಸಯಿಸು’ ಎಂಬ ಪದಕ್ಕೆ ಅರ್ಥ ಗೊತ್ತಿಲ್ಲವಾದರೆ ಈ ಆನ್‌ಲೈನ್‌ ನಿಘಂಟಿನ ಸರ್ಚ್‌ ಟೂಲ್‌ಗೆ ಈ ಪದವನ್ನು ಟೈಪ್‌ ಮಾಡಿ, ‘ಹುಡುಕು’ ಎಂಬಲ್ಲಿ ಕ್ಲಿಕ್‌ ಮಾಡಿ. ಈ ಪದಕ್ಕೆ ಇರುವ ಎಲ್ಲಾ ಅರ್ಥಗಳೂ ಆನ್‌ಲೈನ್‌ ನಿಘಂಟಿನ ಪರದೆಯ ಮೇಲೆ ಮೂಡುತ್ತವೆ.

ಈ ಪದದ ಬಳಿಕ ಬೇರೆ ಪದ ಹುಡುಕಬೇಕೆಂದರೆ ‘ಹುಡುಕು’ ಆಯ್ಕೆಯ ಪಕ್ಕದಲ್ಲಿರುವ ‘ಅಳಿಸಿ’ ಎಂಬಲ್ಲಿ ಕ್ಲಿಕ್ಕಿಸಿ, ಬೇರೆ ಪದವನ್ನು ಮತ್ತೆ ಸರ್ಚ್‌ ಟೂಲ್‌ಗೆ ಹಾಕಿ. ಕ್ಲಿಷ್ಟವಾದ ಕನ್ನಡ ಪದಗಳ ಅರ್ಥ ಹಾಗೂ ಹಳಗನ್ನಡ ಪದಗಳ ಬಗ್ಗೆ ಸಂದೇಹಗಳಿದ್ದರೆ ನೀವಿದ್ದಲ್ಲೇ ಕ್ಷಣಮಾತ್ರದಲ್ಲಿ ಅನುಮಾನ ಪರಿಹರಿಸಿಕೊಳ್ಳಬಹುದು. ಅಂದಹಾಗೆ ನೀವು ಹುಡುಕಲು ನೀಡುವ ಪದ ಯುನಿಕೋಡ್‌ನಲ್ಲೇ ಟೈಪಿಸಿರಬೇಕು.

ಆನ್‌ಲೈನ್‌ ಕನ್ನಡ ನಿಘಂಟಿನ ಕೊಂಡಿ: bit.ly/2mRlAK3