ವಿದ್ಯುತ್‌ ಕಾರು ಉತ್ಪಾದನೆಯತ್ತ ಜೆಎಸ್‌ಡಬ್ಲ್ಯೂ ಚಿತ್ತ

0
339

ಬಳ್ಳಾರಿ: ಭವಿಷ್ಯದ ಸಂಚಾರ ಸಾಧನ ಎಂದೇ ಬಿಂಬಿತವಾಗಿರುವ ವಿದ್ಯುತ್‌ ವಾಹನಗಳ ಉತ್ಪಾದನಾ ಕ್ಷೇತ್ರಕ್ಕೆ ದೇಶದ ಅತೀ ದೊಡ್ಡ ಉಕ್ಕು ಹಾಗೂ ಆಟೋಗ್ರೇಡ್‌ ಸ್ಟೀಲ್‌ ಉತ್ಪಾದಕ ಸಂಸ್ಥೆ ಜೆಎಸ್‌ಡಬ್ಲ್ಯೂ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಜೆಎಸ್‌ಡಬ್ಲೂÂ ಸಂಸ್ಥೆ ಈ ಹೊಸ ಬೆಳವಣಿಗೆ ಆಟೋಮೊಬೈಲ್‌ ಉದ್ಯಮದಲ್ಲಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಡಾ.ಸಜ್ಜನ್‌ ಜಿಂದಾಲ್‌ ಒಡೆತನದ ಜೆಎಸ್‌ಡಬ್ಲ್ಯೂ ಸಮೂಹ ಸಂಸ್ಥೆಗಳಲ್ಲಿ ಒಂದಾದ ಜೆಎಸ್‌ಡಬ್ಲೂÂ ಎನರ್ಜಿ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ದಸಡಾ ಬಳಿಯ ವನೋದ್‌ ಎಂಬಲ್ಲಿ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ ಕಾರುಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸಲು ಗುಜರಾತ್‌ ಸರ್ಕಾರದೊಂದಿಗೆ ಸೆಪ್ಟೆಂಬರ್‌ ತಿಂಗಳಾಂತ್ಯದಲ್ಲಿ ಒಡಂಬಡಿಕೆ ಮಾಡಿಕೊಂಡಿದೆ.
ಈ ಘಟಕದಲ್ಲಿ ವಾರ್ಷಿಕ 2 ಲಕ್ಷ ಕಾರುಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ 5 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥಯವನ್ನೂ ಘಟಕ ಒಳಗೊಂಡಿದೆ. ಸುಮಾರು 2 ಸಾವಿರ ನೇರ ಹಾಗೂ ಪರೋಕ್ಷವಾಗಿ 4 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಈ ಉದ್ಯಮವನ್ನು ಹಂತ ಹಂತವಾಗಿ ವಿಸ್ತರಿಸಲು ಜೆಎಸ್‌ಡಬ್ಲ್ಯೂ ಎನರ್ಜಿ ಸಂಸ್ಥೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಚೀನಾ ಜೀಲಿ ಕಂಪನಿಯೊಂದಿಗೆ ಒಪ್ಪಂದ: ವಿದ್ಯುತ್‌ ಕಾರು ಉತ್ಪಾದಿಸಲು ಜೆಎಸ್‌ಡಬ್ಲ್ಯೂ ಸಂಸ್ಥೆ ಚೀನಾದ ವಿದ್ಯುತ್‌ ವಾಹನಗಳ ಉತ್ಪಾದಕ ಕಂಪೆನಿಯಾದ ಝೆಜಿಯಾಂಗ್‌ ಜೀಲಿ ಯೊಂದಿಗೆ 50:50 ಅನುಪಾತದಲ್ಲಿ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಡಿಸೆಂಬರ್‌ ವೇಳೆಗೆ ಈ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಲಾಗುವುದು ಎಂದು ಜೆಎಸ್‌ಡಬ್ಲ್ಯೂ ಸಂಸ್ಥೆಯ ಉನ್ನತ ಮೂಲಗಳು ಖಚಿತ ಪಡಿಸಿವೆ. ಚೀನಾ ದೇಶದ ಹ್ಯಾಂಗೌl ನಗರದಲ್ಲಿ ಮುಖ್ಯ ಕಚೇರಿ ಹೊಂದಿರುವ ಝೆಜಿಯಾಂಗ್‌ ಜೀಲಿ ಹೋಲ್ಡಿಂಗ್‌ ಸಂಸ್ಥೆ ವಿಶ್ವದ ಪ್ರಮುಖ ವಿದ್ಯುತ್‌ ವಾಹನ ಉತ್ಪಾದಕ ಕಂಪನಿಯಾಗಿದ್ದು, ವಿಶ್ವಾದ್ಯಂತ ತನ್ನ ಉತ್ಪಾದನೆಗಳನ್ನು ಮಾರಾಟ ಮಾಡುತ್ತಿರುವ ಹಾಗೂ ಗ್ರಾಹಕರ, ವಾಹನಗಳ ಉತ್ಪಾದಕರ ವಿಶ್ವಾಸ ಗಳಿಸಿದೆ.

ಇನ್ನು ಜೆಎಸ್‌ಡಬ್ಲ್ಯೂ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ಕಾರುಗಳು ಅತ್ಯಾಧುನಿಕ ಇಂಜಿನ್‌ ಹೊಂದಿದ್ದು, 1 ಯೂನಿಟ್‌ ವಿದ್ಯುತ್‌ಗೆ 7 ಕಿ.ಮೀ. ಕ್ರಮಿಸಬಹುದಾಗಿದೆ. ಕಡಿಮೆ ನಿರ್ವಹಣೆ-ದುರಸ್ತಿ ಬೇಡದ ಹಾಗೂ ಪರಿಸರ ಸ್ನೇಹಿ ವಾಹನವಾಗಿದೆವಾಗಿದೆ.

ಈ ಘಟಕದಲ್ಲಿ 12-15 ಲಕ್ಷ ರೂ. ಮೌಲ್ಯದ ಪ್ರೀಮಿಯಂ ಸ್ತರದ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆ ಇದೆ. ಕಾರಿಗೆ ಅಗತ್ಯವಿರುವ ಬ್ಯಾಟರಿ, ಚಾರ್ಜ್‌ ಮಾಡುವ ಸಾಧನ ಅಲ್ಲದೇ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂಶೋಧನಾ ಕೇಂದ್ರವೂ ಈ ಹೊಸ ಘಟಕದಲ್ಲಿರಲಿದೆ ಎಂದು ತಿಳಿದು ಬಂದಿದೆ.

ಜೆಎಸ್‌ಡಬ್ಲ್ಯೂ ಆಟೋಗ್ರೇಡ್‌ ಸ್ಟೀಲ್‌
ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜೆಎಸ್‌ಡಬ್ಲ್ಯೂ ವಿಜಯನಗರ ವರ್ಕ್ಸ್ನಲ್ಲಿ ಪ್ರಸ್ತುತ ಜೆಎಸ್‌ಡಬ್ಲೂÂ ಸಂಸ್ಥೆ ಕಾರು ಉತ್ಪಾದನೆಗೆ ಅಗತ್ಯವಿರುವ ಆಟೋ ಗ್ರೇಡ್‌ ಉಕ್ಕು ಉತ್ಪಾದಿಸುತ್ತಿದೆ. ದೇಶದಲ್ಲಿ ಇಂತಹ ಉಕ್ಕನ್ನು ಉತ್ಪಾದಿಸುವ ಏಕ ಮಾತ್ರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೆಎಸ್‌ಡಬ್ಲ್ಯೂ ಪ್ರಸ್ತುತ ವಾರ್ಷಿಕ 3 ಮಿಲಿಯನ್‌ ಟನ್‌ ಆಟೋ ಗ್ರೇಡ್‌ ಉಕ್ಕು ಉತ್ಪಾದಿಸುತ್ತಿದ್ದು ದೇಶದ ಎಲ್ಲಾ ಪ್ರಮುಖ ವಾಹನ ಉತ್ಪಾದಕ ಸಂಸ್ಥೆಗಳಿಗೆ ಈ ಉಕ್ಕನ್ನು ಪೂರೈಸುತ್ತಿದೆ. ಅಲ್ಲದೇ, ದೇಶದ ಅಮೂಲ್ಯ ವಿದೇಶಿ ವಿನಿಯಮವನ್ನು ಉಳಿಸುತ್ತಿದೆ.

ಕೃಪೆ:ಉದಯವಾಣಿ
jsw-mood-for-electric-car-production