ವಿಜ್ಞಾನ-ವಿಸ್ಮಯಗಳನ್ನು ಹೊತ್ತು ತರುವ ‘ಜಾಣ ಸುದ್ದಿ’ ಧ್ವನಿ ಪತ್ರಿಕೆ: ಜ್ಞಾನ ಪ್ರಸಾರಕ್ಕೆ ವಿಜ್ಞಾನ ಲೇಖಕರ ವಿಭಿನ್ನ ಪ್ರಯತ್ನ

0
2629

ಮೈಸೂರು, ಅಕ್ಟೋಬರ್ 04 (www.justkannada.in): ಇದು ಸೋಷಿಯಲ್ ಮಿಡೀಯಾ ಜಮಾನ! ವಾಟ್ಸ್ ಆ್ಯಪ್, ಫೇಸ್ ಬುಕ್, ಟ್ವಿಟ್ಟರ್ ಬಳಕೆ ಮಾಡದವರು ಸಿಗುವುದೇ ಅಪರೂಪ. ಅಮೂಲ್ಯ ಸಮಯ ಇದರಲ್ಲೇ ಕಳೆದು ಹೋಗುತ್ತದೆ. ಇದರ ಬದಲು ಸಾಮಾಜಿಕ ಜಾಲತಾಣಗಳಂತಹ ತಂತ್ರಜ್ಞಾನವನ್ನು ಜ್ಞಾನ ಪ್ರಸಾರಕ್ಕೆ ಬಳಸಿಕೊಂಡರೆ ಹೇಗೆ..?

– ಇದಕ್ಕೆ ಉತ್ತರ ಕಂಡುಕೊಂಡಿದ್ದಾರೆ ಮೈಸೂರಿನ ಸಿಎಫ್’ಟಿಆರ್’ಐ ವಿಜ್ಞಾನಿಯೊಬ್ಬರು…

ಹೌದು. ಸಿಎಫ್’ಟಿಆರ್’ಐ ವಿಜ್ಞಾನಿಯಾಗಿರುವ ಎಎಸ್ ಕೆ’ವಿಎಸ್ ಶರ್ಮಾ (ಕೊಳ್ಳೇಗಾಲ ಶರ್ಮಾ) ಅವರು ವಾಟ್ಸ್ ಆ್ಯಪ್ ಬಳಸಿಕೊಂಡು ‘ಜಾಣ ಸುದ್ದಿ’ ಎಂಬ ಧ್ವನಿ ಪತ್ರಿಕೆಯನ್ನು ಪ್ರಾರಂಭಿಸಿದ್ದಾರೆ. ವಿಜ್ಞಾನ, ವಿಚಾರ, ವಿಸ್ಮಯಗಳ ಕುರಿತ ಸುದ್ದಿ, ಮಾಹಿತಿಯನ್ನು ಪ್ರತಿ ವಾರ ಈ ಸುದ್ದಿ ಪತ್ರಿಕೆ ಹೊತ್ತು ತರುತ್ತದೆ. 10 ನಿಮಿಷದ ಧ್ವನಿ ಮುದ್ರಿಕೆಯನ್ನು ಪ್ರತಿ ವಾರ ವಾಟ್ಸ್ ಆ್ಯಪ್ ಗ್ರೂಪ್’ನಲ್ಲಿ ಹಾಕಲಾಗುತ್ತದೆ.

ಧ್ವನಿ ಪತ್ರಿಕೆಯ ಮೊದಲ ಸಂಚಿಕೆ ಸೆಪ್ಟೆಂಬರ್ 23ರಿಂದ ಆರಂಭವಾಗಿದ್ದು, ವಾರಕ್ಕೊಂದು 10 ಹತ್ತು ನಿಮಿಷದ ಧ್ವನಿ ಮುದ್ರಿಕೆಯನ್ನು ಶರ್ಮಾ ಅವರು ಈ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಹಾಕುತ್ತಾರೆ. ಗ್ರೂಪ್ ನ ಸದಸ್ಯರು ಇದನ್ನು ಕೇಳಿ ಮಾಹಿತಿ ಪಡೆಯಬಹುದು. ಜತೆಗೆ ಬೇರೆಯವರೊಂದಿಗೆ ಇದನ್ನು ಹಂಚಿಕೊಳ್ಳಬಹುದು.

ಸದ್ಯ ಈ ಗ್ರೂಪ್ ನಲ್ಲಿ ವಿಜ್ಞಾನ ಆಸಕ್ತರು, ಶಿಕ್ಷಕರು ಸೇರಿದಂತೆ 150 ಸದಸ್ಯರಿದ್ದಾರೆ. ಜತೆಗೆ ಈ ಧ್ವನಿ ಮುದ್ರಿಕೆಗಳನ್ನು ವೆಬ್ ಸೈಟ್ ಡೆವಲಪ್ ಮೆಂಟ್ ಸ್ಕೂಲ್ ಆರ್ಜ್ www.developschools.org ವೆಬ್ ಸೈಟ್ ನಲ್ಲೂ ಪ್ರಕಟಿಸಲಾಗುತ್ತಿದೆ.

ನಿತ್ಯ ವಾಟ್ಸ್ ಆ್ಯಪ್ ನಲ್ಲಿ ಅನಗತ್ಯ, ಬೇಡದ ವಿಡೀಯೋ, ಫೋಟೋಗಳು ಬರುತ್ತವೆ. ಇದಕ್ಕೆ ಸಮಯ ವ್ಯರ್ಥ ಮಾಡುವ ಬದಲು ಮಾಹಿತಿ ನೀಡುವ ವಿಷಯಗಳನ್ನು ಹಂಚಿದರೆ ಹೇಗೆ? ಎಂಬ ವಿಷಯ ಹೊಳೆಯಿತು. ವಿಜ್ಞಾನ, ವಿಸ್ಮಯಗಳನ್ನು ತಿಳಿಸುವ ವಿಷಯಗಳನ್ನು ಯಾವುದೇ ಖರ್ಚಿಲ್ಲದೇ ನೂರಾರು ಜನರಿಗೆ ತಲುಪಿಸಲು ತಂತ್ರಜ್ಞಾನ ಅವಕಾಶ ಕಲ್ಪಿಸಿದೆ. ಓದಲೂ ಬಾರದವರೂ ಕೂಡ ಈ ಧ್ವನಿ ಮುದ್ರಿಕೆ ಮೂಲಕ ವಿಷಯಗಳನ್ನು ಕೇಳಿ ತಿಳಿದುಕೊಳ್ಳಬಹುದಲ್ಲವೇ ಎಂಬ ಯೋಚನೆಯೊಂದಿಗೆ ‘ಜಾಣ ಸುದ್ದಿ’ ಧ್ವನಿ ಪತ್ರಿಕೆಯನ್ನು ಪ್ರಾರಂಭಿಸಿದ್ದಾಗಿ ಶರ್ಮಾ ಅವರು ‘ಜಸ್ಟ್ ಕನ್ನಡ’ಕ್ಕೆ ತಿಳಿಸಿದರು.

ನೀವು ಕೂಡ ‘ಜಾಣ ಸುದ್ದಿ’ ಧ್ವನಿ ಪತ್ರಿಕೆಯ ಆನ್ ಲೈನ್ ಪ್ರತಿಗಳನ್ನು ಪಡೆಯಬೇಕೆಂದರೆ ಎಎಸ್’ವಿಎಸ್ ಶರ್ಮಾ ಅವರನ್ನು 9886640328 ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಬಹುದು.

ಇಲ್ಲಿದೆ ಕೇಳಿ ‘ಜಾಣ ಸುದ್ದಿ’ಯ ಒಂದು ಸಂಚಿಕೆ…