ರಾಜ್​ಕೋಟ್, ಏಪ್ರಿಲ್ 18 (www.justkannada.in): ಸತತ ಸೋಲಿನಿಂದ ಕಂಗೆಟ್ಟಿರುವ ಆರ್ ಸಿಬಿಗೆ ಗೆಲುವು ಅನಿವಾರ್ಯವಾಗಿದ್ದು, ಇಂದು ನಡೆಯುವ ಆತಿಥೇಯ ಗುಜರಾತ್ ಲಯನ್ಸ್ ತಂಡದ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲೂ ಆರ್​ಸಿಬಿ ತಂಡ ಇದೇ ಪರಿಸ್ಥಿತಿ ಎದುರಿಸಿತ್ತು. ಆರಂಭದಲ್ಲೆರಡು ಪಂದ್ಯ ಗೆದ್ದ ಬಳಿಕ ದಿಢೀರ್ ಸೋಲಿನ ವೈಫಲ್ಯ ಅನುಭವಿಸಿತ್ತು. ಆದರೆ ಎಂಟನೇ ಪಂದ್ಯದ ನಂತರ ಫಿನಿಕ್ಸ್​ನಂತೆ ಎದ್ದು ಫೈನಲ್​ವರೆಗೂ ಪ್ರವೇಶಿಸಿತ್ತು. ಈ ಸವಾಲು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸಾರಥ್ಯದ ಆರ್​ಸಿಬಿಗೆ ಮತ್ತೊಮ್ಮೆ ಎದುರಾಗಿದೆ.

ಆಡಿರುವ ಐದು ಪಂದ್ಯಗಳಲ್ಲಿ ಒಂದು ಗೆಲುವು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಸೋತಿರುವ ಆರ್​ಸಿಬಿ ತಂಡದ ಪ್ಲೇ ಆಫ್ ಹಾದಿ ಕಠಿಣಗೊಂಡಿದೆ. ಹೀಗಾಗಿ ಮುಂದಿನ ಹಾದಿ ಬಲಪಡಿಸುವ ವಿಶ್ವಾಸದಲ್ಲಿರುವ ಆರ್​ಸಿಬಿ ಮಂಗಳವಾರ ಆತಿಥೇಯ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದ್ದು, ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಕಳೆದ ಆವೃತ್ತಿಯ ಆರ್​ಸಿಬಿಯ ಆರಂಭ ಗಮನಿಸಿದರೆ ಈ ಬಾರಿ ಪ್ಲೇ ಆಫ್ ಹಾದಿ ಹೇಳುವಷ್ಟು ಶೋಚನೀಯವಾಗಿಲ್ಲ.

ಅಂದು ಮೊದಲ 7 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಹೊರತುಪಡಿಸಿ ಉಳಿದೆಲ್ಲಾ ಪಂದ್ಯ ಸೋತರೂ ಬಳಿಕ ಪ್ಲೇ ಆಫ್​ಗೆ ಲಗ್ಗೆ ಇಟ್ಟಿತ್ತು. ಇದೀಗ ಸ್ಟಾರ್ ಬ್ಯಾಟ್ಸ್​ಮನ್​ಗಳನ್ನೊಳಗೊಂಡಿರುವ ಆರ್​ಸಿಬಿ ತಂಡಕ್ಕೆ ಅದಕ್ಕಿಂತ ಹೆಚ್ಚಿನ ಲೀಗ್ ಪಂದ್ಯಗಳು ಹಾಗೂ ಅವಕಾಶವಿರುವುದರಿಂದ ಲಯಕ್ಕೆ ಮರಳುವುದು ಕಷ್ಟವೇನಲ್ಲ. ಆದರೆ ತಂಡದಲ್ಲಿ ಕನಿಷ್ಠ ಒಬ್ಬ ಬ್ಯಾಟ್ಸ್ ಮನ್ ಅಥವಾ ಬೌಲರ್ ‘ಮ್ಯಾಚ್ ವಿನ್ನಿಂಗ್’ ನಿರ್ವಹಣೆ ತೋರಲೆಬೇಕಿದೆ.