ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ನ ಭಾರಿ ಅಕ್ರಮಗಳ ತನಿಖೆ ಸಿಬಿಐನಿಂದ ಮಾತ್ರ ಸಾಧ್ಯ: ಸೂಕ್ತ ತೀರ್ಮಾನ ಕೈಗೊಳ್ಳಿ- ಸಹಕಾರ ಇಲಾಖೆಯಿಂದ ಸಿಎಂ ಸಿದ್ದರಾಮಯ್ಯಗೆ ಶಿಫಾರಸ್ಸು….

0
368
Investigations -Shimoga DCC Bank's- irregularities –CBI-appropriate- decision-CM Siddaramaiah

ಬೆಂಗಳೂರು,ಆ,12,2017(www.justkannada.in):  ರಾಜ್ಯ ಸಹಕಾರ ರಂಗದ ವೈಭವದಲ್ಲಿ ದಿವಾಳಿಯಾಗಿ ಕರಾಳ ಅಧ್ಯಾಯದ ಪುಟ ತೆರೆದಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ಭಾರೀ ಅಕ್ರಮಗಳ ತನಿಖೆ ಕೇಂದ್ರೀಯ ತನಿಖಾದಳ ಸಿಬಿಐ ನಿಂದ ಮಾತ್ರ ಸಾಧ್ಯವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಹಕಾರ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸ್ಸು ಮಾಡಿದೆ. Investigations -Shimoga DCC Bank's- irregularities –CBI-appropriate- decision-CM Siddaramaiah

ಸಹಕಾರ ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗಿದ್ದು, ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ತಾವೇ ನಿರ್ಧರಿಸುವಂತೆ ಕೋರಿದೆ.

ಸಹಕಾರ ಇಲಾಖೆಯ ನಿಬಂಧಕರು ಕಳೆದ ತಿಂಗಳ 15 ರಂದು ಸಲ್ಲಿಸಿರುವ ವರದಿ ಆಧಾರದ ಮೇಲೆ ಸಹಕಾರ ಇಲಾಖೆಯ ಕಾರ್ಯದರ್ಶಿ ಅವರು ಸಿಬಿಐ ತನಿಖೆಗೆ ಮುಖ್ಯಮಂತ್ರಿ ಅವರಿಗೆ ಶಿಫಾರಸ್ಸು ಮಾಡಿದ್ದಾರೆ. ಡಿಸಿಸಿ ಬ್ಯಾಂಕ್‌ ನ ಮಾನ್ಯತೆಯನ್ನು ಯಾಕೆ ರದ್ದುಗೊಳಿಸಬಾರದು ಎಂದು ನಬಾರ್ಡ್ ಆರ್.ಬಿ.ಐಗೆ ಪತ್ರ ಬರೆದ ಬೆನ್ನಲ್ಲೇ ಇಡೀ ಹಗರಣವನ್ನು ಸಿಬಿಐಗೆ ವಹಿಸುವಂತೆ ಸ್ವತಃ ಸಹಕಾರ ಇಲಾಖೆಯೇ ನಿರ್ಧಾರಕ್ಕೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ.

ನಿಬಂಧಕರ ವರದಿಯನ್ವಯ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ೧೯೪೯ರ ಸೆಕ್ಷನ್ ೧೧[೧]ನ್ನು ಡಿಸಿಸಿ ಬ್ಯಾಂಕ್ ಪಾಲಿಸಿಲ್ಲ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಅವಧಿಯಲ್ಲಿ ಬ್ಯಾಂಕಿನಲ್ಲಿ ಶೇ ೭ ರಷ್ಟು ಮೀಸಲು ನಗದು [ಸಿ.ಆರ್.ಎ.ಆರ್] ವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಬ್ಯಾಂಕ್ ವಿಫಲವಾಗಿದೆ. ಜತೆಗೆ ಅನುತ್ಪಾದಕ ಆಸ್ತಿ ಪ್ರಮಾಣ ಅತಿ ಹೆಚ್ಚು ಅಂದರೆ ಶೇ ೧೨.೮ ರಷ್ಟಿದೆ. ಬ್ಯಾಂಕಿನ ಇತರ ನಿಧಿಗಳಲ್ಲಿ ಭಾರೀ ಅಂದರೆ ೪೮೬ ಕೋಟಿ ರೂನಷ್ಟು ಕೊರತೆಯಾಗಿದೆ.

ಅಕ್ರಮಗಳ ಮೂಲಕ ಬ್ಯಾಂಕು ದಿವಾಳಿ ಅಂಚಿಗೆ ತಲುಪಿದ್ದು, ಕಾಲಮಿತಿಯಲ್ಲಿ ಪುನಶ್ಚೇತನಕ್ಕೆ ಬ್ಯಾಂಕಿನ ಮುಖ್ಯ ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿ ಯಾವುದೇ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಬ್ಯಾಂಕಿನಲ್ಲಿ ೫೦ ಕೋಟಿ ರೂ ಗಿಂತ ಹೆಚ್ಚು ಅಕ್ರಮ ನಡೆದಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಹಕಾರ ಇಲಾಖೆಯ ಕಾರ್ಯದರ್ಶಿಗಳಿಗೆ ನಿಬಂಧಕರು ಸಮಗ್ರ ವರದಿ ಸಲ್ಲಿಸಿದ್ದರು.

ನಕಲಿ ಬಂಗಾರದ ಮೇಲೆ ಸಾಲ ನೀಡಿ ೬೨.೭೮ ಕೋಟಿ ರೂ ಅಕ್ರಮ ಎಸಗಲಾಗಿದೆ. ಬ್ಯಾಂಕು ದಿವಾಳಿಯಾಗಿದೆ. ಬ್ಯಾಂಕಿನ ಮಾನ್ಯತೆ ರದ್ದಿಗೆ ಶಿಫಾರಸ್ಸು ಮಾಡುವುದಾಗಿ ನಬಾರ್ಡ್‌ ನ ಸಿಜಿಎಂ ಜೂನ್ ೨೧ ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.

ಇಷ್ಟೆಲ್ಲಾ ಅಕ್ರಮಗಳನ್ನು ನಡೆಸಿದ ಬ್ಯಾಂಕಿನ ಆಡಳಿತ ಮಂಡಳಿಯನ್ನು ರದ್ದುಗೊಳಿಸಲಾಗಿತ್ತು. ಜತೆಗೆ ಆಡಳಿತ ಮಂಡಳಿ ನಿರ್ದೇಶಕರನ್ನೂ ಅನರ್ಹಗೊಳಿಸಲಾಗಿತ್ತು. ಈ ಎರಡೂ ಕ್ರಮಗಳಿಗೆ ರಾಜ್ಯ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಆಡಳಿತ ಮಂಡಳಿ ಮತ್ತು ನಿರ್ದೇಶಕರು ಮುಂದುವರೆದಿದ್ದಾರೆ.

ಬ್ಯಾಂಕಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಿಐಡಿ ವಿಚಾರಣೆ ನಡೆದು 18  ಆರೋಪಿಗಳಲ್ಲಿ 7 ಜನರನ್ನು ಖುಲಾಸೆಗೊಳಿಸಲಾಗಿದೆ. 11 ಜನರ ವಿರುದ್ಧ ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಉಳಿದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. 4 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬ್ಯಾಂಕಿನ ಅಧ್ಯಕ್ಷರು ಮತ್ತು ಇತರೆ ಸಿಬ್ಬಂದಿಗಳ ಆಸ್ತಿಗಳನ್ನು ಜಪ್ತು ಮಾಡಲಾಗಿದೆ ಎಂದು ಕಾರ್ಯದರ್ಶಿ ಅವರಿಗೆ ವರದಿ ಸಲ್ಲಿಕೆಯಾಗಿದೆ.

ಈ ವರದಿಯನ್ನು ಪರಿಶೀಲಿಸಿರುವ ಕಾರ್ಯದರ್ಶಿ ಅವರು, ನಬಾರ್ಡ್ ಸುತ್ತೋಲೆ ಸಂಖ್ಯೆ: ೦೯.ಡಿಓಎಸ್ ೦೧/೨೦೧೨ರ ಕಂಡಿಕೆ ೬.೨ರಂತೆ ೭.೫೦ ಕೋಟಿ ರೂ ಮೀರಿದ ಬ್ಯಾಂಕಿಂಗ್ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆರ್ಥಿಕ ಅಪರಾಧಗಳೆಂದು ಪರಿಗಣಿಸಿ ಸಿಬಿಐಗೆ ವಹಿಸಬಹುದು ಎಂದು ತಿಳಿಸಿದೆ. ಆದರೆ ಇಲ್ಲಿ ೬೨.೭೮ ಕೋಟಿ ರೂ ಆರ್ಥಿಕ ದುರುಪಯೋಗವಾಗಿದ್ದು, ಇದು ಸಿಬಿಐಗೆ ಅರ್ಹ ಪ್ರಕರಣ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ.

ಆದರೆ ಯಾವುದೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕಾದಲ್ಲಿ ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕು. ಹೀಗಾಗಿ ತಾವೇ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರನ್ನು ಕಾರ್ಯದರ್ಶಿಗಳು ಕೋರಿದ್ದಾರೆ. ಇದೀಗ ಚಂಡು ಮುಖ್ಯಮಂತ್ರಿ ಅವರ ಅಂಗಳ ತಲುಪಿದೆ.

Key words: Investigations -Shimoga DCC Bank’s- irregularities –CBI-appropriate- decision-CM Siddaramaiah