ಮಡಿಕೇರಿ ಸಮೀಪ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

0
25791

ಮಡಿಕೇರಿ:ಫೆ-11: ಕೇರಳ ರಾಜ್ಯದ ಕಣ್ಣೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ ಸೆಪ್ಟೆಂಬರ್‌ ವೇಳೆಗೆ ವಿಮಾನಗಳ ಹಾರಾಟ ಆರಂಭಗೊಳ್ಳಲಿದೆ.

ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 90 ಕಿ.ಮೀ ದೂರದಲ್ಲೇ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿರುವ ಕಾರಣ ಜಿಲ್ಲೆಯಲ್ಲೂ ನಿರೀಕ್ಷೆಗಳು ಗರಿಗೆದರಿವೆ.

ಜಿಲ್ಲೆಯ ಗಡಿಗ್ರಾಮ ಮಾಕುಟ್ಟ ಸಮೀಪದ ಮಟ್ಟನ್ನೂರಿನ ಮೂಕಪರಂಬುವಿನ ಬೃಹತ್‌ ಬೆಟ್ಟದ 1,263 ಎಕರೆಯಲ್ಲಿ ₹ 1,892 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನಿಲ್ದಾಣದ ವಿಸ್ತರಣೆಗಾಗಿ ಈಗಲೇ ಹೆಚ್ಚುವರಿಯಾಗಿ 700 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೇರಳದ ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೊಡಗು ಸಮೀಪವೇ ನಿರ್ಮಾಣ ಆಗುತ್ತಿರುವ ಕಾರಣ ಜಿಲ್ಲೆಯ ಪ್ರವಾಸೋದ್ಯಮ, ಪುಷ್ಪೋದ್ಯಮ, ಹಣ್ಣು, ತರಕಾರಿ ಮಾರುಕಟ್ಟೆಗೆ ಬೇಡಿಕೆ ನಿರೀಕ್ಷಿಸಲಾಗಿದೆ.

‘2013ರ ನವೆಂಬರ್‌ನಲ್ಲಿ ಪ್ರಾರಂಭವಾದ ಯೋಜನೆ ಅಂತಿಮ ಹಂತ ತಲುಪಿದೆ. 3 ಕಿ.ಮೀ ರನ್‌ವೇ ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ಫೆಬ್ರುವರಿಯಲ್ಲಿ ಪರೀಕ್ಷಾರ್ಥವಾಗಿ ರನ್‌ ವೇಯಲ್ಲಿ ವಿಮಾನ ಇಳಿಸಲಾಗಿತ್ತು; ಇದು ಯಶಸ್ವಿಯಾಗಿದೆ. ಅತ್ಯಾಧುನಿಕ ಸೌಲಭ್ಯ ಒಳಗೊಂಡಿರುವ ಟರ್ಮಿನಲ್‌ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

₹20 ಕೋಟಿ ವೆಚ್ಚದಲ್ಲಿ ವಿದೇಶಿ ನಿರ್ಮಿತ ನಾಲ್ಕು ಅಗ್ನಿ ಶಾಮಕ ವಾಹನಗಳನ್ನು ಖರೀದಿಸಲಾಗಿದೆ. ರನ್‌ವೇಯನ್ನು ಮತ್ತೊಂದು ಕಿ.ಮೀ ವಿಸ್ತರಿಸುವ ಆಲೋಚನೆಯಿದ್ದು 4 ಕಿ.ಮೀಗೆ ವಿಸ್ತರಣೆಯಾದರೆ ದೇಶದ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಕಣ್ಣೂರು ಸಹ ಒಂದಾಗಲಿದೆ. ಸರ್ಕಾರ, ಖಾಸಗಿ ಸಹಭಾಗಿತ್ವದ ಯೋಜನೆಯಿದು’ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ವಿ.ತುಳಸಿದಾಸ್‌ ತಿಳಿಸಿದರು.

ಕೊಡಗಿಗೆ ಏನು ಲಾಭ?: ‘ಕಾಫಿ, ಕಾಳು ಮೆಣಸು, ಕಿತ್ತಳೆ ಹಾಗೂ ಆಂಥೋರಿಯಂ ಕೃಷಿಗೆ ಜಿಲ್ಲೆ ಪ್ರಸಿದ್ಧಿ. ಜಿಲ್ಲೆಗೆ ರೈಲ್ವೆ ಸಂಪರ್ಕವೂ ಇಲ್ಲದೇ ವಾಣಿಜ್ಯ ಬೆಳೆಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗುತ್ತಿಲ್ಲ. ಇದುವರೆಗೂ ಬೆಳೆಗಾರರು ಕಾಫಿ ಹಾಗೂ ಕಾಳು ಮೆಣಸಿನ ಪುಡಿಯನ್ನು ದೇಶ, ವಿದೇಶಕ್ಕೆ ಸಾಗಣೆ ಮಾಡಲು ಮುಂಬೈ, ಬೆಂಗಳೂರು ವಿಮಾನ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.

ಕಿತ್ತಳೆ ಹಾಗೂ ಆಂಥೋರಿಯಂಗೆ ಗಲ್ಫ್‌ ರಾಷ್ಟ್ರಗಳಲ್ಲಿ ಬೇಡಿಕೆಯಿದ್ದರೂ ರಫ್ತಿಗೆ ಅವಕಾಶ ಇರಲಿಲ್ಲ. ಕಣ್ಣೂರು ವಿಮಾನ ನಿಲ್ದಾಣ ಪ್ರಾರಂಭವಾದರೆ ಜಿಲ್ಲೆಯಲ್ಲಿನ ಆಂಥೋರಿಯಂ ಕೃಷಿಗೆ ಬೇಡಿಕೆ ಬರಲಿದೆ. ಕೊಡಗು ಪ್ರವಾಸೋದ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ’ ಎಂದು ಆಶಿಸುತ್ತಾರೆ ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮಿಗಳ ಸಂಘದ ಪದಾಧಿಕಾರಿಗಳು.

ಕೊಡಗು ಜಿಲ್ಲೆಯ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಕೇಶವ್‌ ಕಾಮತ್ ಅವರು ಕೇರಳದ ಉತ್ತರ ಮಲಬಾರ್‌ ಛೆೇಂಬರ್‌ ಆಫ್‌ ಕಾಮರ್ಸ್‌ ಪದಾಧಿಕಾರಿಗಳೊಂದಿಗೆ ಪ್ರವಾಸೋದ್ಯಮ ಬೆಳವಣಿಗೆ ಕುರಿತು ಚರ್ಚಿಸಿದರು.

ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಅನುಕೂಲ
‘ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಭಾಗದ ಜನರಿಗೆ ಕಣ್ಣೂರು ವಿಮಾನ ನಿಲ್ದಾಣದಿಂದ ಹೆಚ್ಚು ಅನುಕೂಲವಾಗಲಿದೆ. ಸೆಪ್ಟೆಂಬರ್‌ನಿಂದಲೇ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಆರಂಭವಾಗಲಿದೆ. ವಿದೇಶ ಪ್ರಯಾಣಕ್ಕೆ ಸೀಮಿತಗೊಳಿಸದೆ ‘ಆರ್ಥಿಕ ವಹಿವಾಟು ಕೇಂದ್ರ’ವಾಗಿಸಲು ಪ್ರಯತ್ನಿಸಲಾಗುತ್ತಿದೆ.

ಗಲ್ಫ್‌ನಲ್ಲಿ ರಾಸಾಯನಿಕ ಮುಕ್ತ ತರಕಾರಿ, ಹಣ್ಣುಗಳಿಗೆ ಭಾರಿ ಬೇಡಿಕೆಯಿದ್ದು ಸಾಧ್ಯವಾದಷ್ಟು ಮಟ್ಟಿಗೆ ಸರಕು ಸಾಗಣೆಗೆ ಒತ್ತು ನೀಡಲಾಗುವುದು’ ಎಂದು ಕೆಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ವಿ.ತುಳಸಿದಾಸ್‌ ಹೇಳಿದರು.

‘ಈ ಬಾರಿ ಬಜೆಟ್‌ನಲ್ಲಿ ಮೈಸೂರು– ಮಡಿಕೇರಿ–ತಲಚೇರಿಯ ರೈಲು ಮಾರ್ಗದ ಸಮೀಕ್ಷೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಇದು ಸಹ ಪ್ರವಾಸೋದ್ಯಮ ಹಾಗೂ ಸರಕು ಸಾಗಣೆಗೆ ಪೂರಕವಾಗಲಿದೆ. ಜತೆಗೆ, ಕೊಡಗು– ವಿರಾಜಪೇಟೆ– ಕಣ್ಣೂರು ರಸ್ತೆ ಅಭಿವೃದ್ಧಿಗೆ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಅವರು ವಿವರಿಸಿದರು.
ಕೃಪೆ: ಪ್ರಜಾವಾಣಿ
International airport,Madikeri