ಅವಲಕ್ಕಿ ಪೊಂಗಲ್ ಮಾಡೋದು ಹೀಗೆ…

0
1279

ಅಗತ್ಯವಿರುವ ಸಾಮಾಗ್ರಿಗಳು
*ಅವಲಕ್ಕಿ: ಎರಡು ಕಪ್ (ಇದರಲ್ಲಿ ಕಲ್ಲುಗಳಿಲ್ಲವೆಂದು ಖಚಿತಪಡಿಸಿಕೊಳ್ಳಿ)-ದಪ್ಪ ಅವಲಕ್ಕಿ ಉತ್ತಮ. ಈಗ ದೊರಕುತ್ತಿರುವ ಪೇಪರ್ ಅವಲಕ್ಕಿ ಅಷ್ಟು ಸೂಕ್ತವಲ್ಲ, ಪೊಂಗಲ್ ಸರಿಯಾಗಿ ಆಗುವುದೂ ಇಲ್ಲ.
*ಹೆಸರು ಬೇಳೆ: ಒಂದು ಕಪ್ (ತೊಳೆದು ಒಣಗಿಸಿಟ್ಟಿದ್ದು)
*ಕಾಯಿತುರಿ: ಒಂದು ಕಪ್
*ಬೆಲ್ಲ: ಒಂದು ಕಪ್ (ಚಿಕ್ಕದಾಗಿ ತುರಿದದ್ದು) – ಕೆಂಪು ಅಥವಾ ಕಪ್ಪುಬೆಲ್ಲ ಉತ್ತಮ. ಬಿಳಿಬೆಲ್ಲ ಕೊಂಚ ಹುಳಿಯಾಗಿರುತ್ತದೆ.
*ಏಲಕ್ಕಿ: ಎರಡರಿಂದ ಮೂರು
*ತುಪ್ಪ: ಒಂದು ಕಪ್
*ಒಣದ್ರಾಕ್ಷಿ: ಅರ್ಧ ಕಪ್
*ಗೋಡಂಬಿ: ಅರ್ಧ ಕಪ್

ತಯಾರಿಸುವ ವಿಧಾನ :
1) ಒಂದು ಬಾಣಲೆ ಅಥವಾ ಚಿಕ್ಕ ಪಾತ್ರೆಯಲ್ಲಿ ಹೆಸರುಬೇಳೆ ಹಾಕಿ ಚಿಕ್ಕ ಉರಿಯಲ್ಲಿ ಕೊಂಚವೇ ಕೆಂಪಗಾಗುವವರೆಗೆ ಹುರಿಯಿರಿ. ಚಿಕ್ಕ ಕಾಳುಗಳಾದರೆ ಮೂರರಿಂದ ನಾಲ್ಕು ನಿಮಿಷ ಸಾಕು. ದೊಡ್ಡಕಾಳುಗಳಾದರೆ ಸುಮಾರು ಐದರಿಂದ ಹತ್ತು ನಿಮಿಷ ಬೇಕಾಗಬಹುದು.

2) ಪ್ರೆಶರ್ ಕುಕ್ಕರ್ ಒಳಗೆ ಹೆಸರು ಬೇಳೆ ಮುಳುಗುವಷ್ಟು ನೀರು ಹಾಕಿ ಬಿಸಿಮಾಡಿ. ಇದಕ್ಕೆ ಹುರಿದ ಹೆಸರು ಬೇಳೆ ಹಾಕಿ ಎರಡು ಸೀಟಿ ಬರುವವರೆಗೆ ಬಿಸಿಮಾಡಿ. ಬಳಿಕ ತಕ್ಷಣ ಮುಚ್ಚಳದ ಮೇಲೆ ತಣ್ಣೀರು ಸುರಿದು ಸೀಟಿ ತೆಗೆದು ಮುಚ್ಚಳ ತೆರೆಯಿರಿ. (ಇಲ್ಲದಿದ್ದರೆ ಹೆಸರು ಬೇಳೆ ಪೂರ್ಣವಾಗಿ ಕರಗಿ ನೀರಾಗುತ್ತದೆ)

3) ಈ ಸಮಯದಲ್ಲಿ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ನೀರು ಬಸಿದು ಒಂದು ಅಗಲವಾದ ಪಾತ್ರೆಯ ಮೇಲೆ ಹರಡಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ.

4) ಕುಕ್ಕರ್‌ನ ಕೆಲಸವಾದ ಬಳಿಕ ಇನ್ನೊಂದು ಪಾತ್ರೆಯಲ್ಲಿ ಕೊಂಚ ನೀರು ಹಾಕಿ ಕುದಿಸಿ. ನೀರು ಕುದಿ ಬಂದ ಬಳಿಕ ಬೆಲ್ಲದ ತುಂಡುಗಳನ್ನು ಹಾಕಿ. ನೀರು ಈ ಬೆಲ್ಲ ಮುಳುಗುವಷ್ಟಿದ್ದರೆ ಸಾಕು. ಬೆಲ್ಲಾ ಪೂರ್ಣವಾಗಿ ಕರಗುವವರೆಗೆ ಅಲ್ಲಾಡಿಸುತ್ತಿರಿ. 5) ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಕೊಂಚವೇ (ಅಂದರೆ ಸುಮಾರು ಎರಡು ದೊಡ್ಡ ಚಮಚ) ತುಪ್ಪ ಬಿಸಿಮಾಡಿ. ತುಪ್ಪ ಕರಗಿ ಕೊಂಚ ಬಿಸಿಯಾಗುತ್ತಿದ್ದಂತೆಯೇ ಮೊದಲು ಗೋಡಂಬಿ ಹಾಕಿ ಕೊಂಚ ಕೆಂಪಗಾದ ಬಳಿಕವೇ ಒಣದ್ರಾಕ್ಷಿ ಹಾಕಿ. ಒಣದ್ರಾಕ್ಷಿ ಹುರಿದ ತಕ್ಷಣ ಒಲೆಯಿಂದ ಪಾತ್ರೆಯನ್ನು ಇಳಿಸಿಬಿಡಿ (ಒಣದ್ರಾಕ್ಷಿಯನ್ನು ಎಣ್ಣೆಗೆ ಹಾಕಿದ ತಕ್ಷಣವೇ ಹುರಿದು ಬಿಡುವುದರಿಂದ ಮೊದಲೇ ಹಾಕಿದರೆ ಸುಟ್ಟು ಕರಕಲಾಗುತ್ತದೆ)

6) ಅವಲಕ್ಕಿ ನೆನೆಸಿಟ್ಟು ಹದಿನೈದು ನಿಮಿಷಗಳಾಗಿದ್ದರೆ ಇದನ್ನು ಬೆಲ್ಲದ ನೀರು ಇರುವ ಪಾತ್ರೆಗೆ ಸುರಿಯಿರಿ. ಬಳಿಕ ಬೆಂದ ಹೆಸರು ಬೇಳೆಯನ್ನು ಹಾಕಿ ತಿರುವಿ. ಇದಕ್ಕೆ ಉಳಿದ ತುಪ್ಪ ಮತ್ತು ಕಾಯಿತುರಿ ಸೇರಿಸಿ ಮಿಶ್ರಣ ಮಾಡಿ. ಸುಮಾರು ಒಂದು ನಿಮಿಷದ ಬಳಿಕ ಬಳಿಕ ಹುರಿದ ಗೋಡಂಬಿ ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರೆಸಿಪಿ ರೆಡಿ!