ನ್ಯೂಯಾರ್ಕ್, ಮಾರ್ಚ್ 15 (www.justkannada.in): ಆರೋಗ್ಯ ಆ್ಯಪ್‌ಗಳ ಜತೆ ಸಂಪರ್ಕದಲ್ಲಿ ಇರುವುದರಿಂದ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ ಎಂದು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ನೂತನ ಅಧ್ಯಯನ ತಿಳಿಸಿದೆ.

ಆರೋಗ್ಯ ಆ್ಯಪ್‌ಗಳ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಒಂದರ್ಥದಲ್ಲಿ ವೈದ್ಯರು ಮತ್ತು ನರ್ಸ್‌ಗಳ ಜತೆಯಲ್ಲಿ ಸಂವಾದ ನಡೆಸಿದಂತಾಗು ವುದರಿಂದ ರೋಗಿಗಳು ಅಥವಾ ಬಳಕೆದಾರರ ಮಾನಸಿಕ ವಿಶ್ವಾಸ ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಹಿರಿಯ ಅಧ್ಯಾಪಕರಾಗಿರುವ ಎಸ್‌. ಶ್ಯಾಮ್‌ಸುಂದರ್‌ ಅವರ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ. ಅಧ್ಯಯನಕ್ಕೆ ಆರೋಗ್ಯ ಆ್ಯಪ್‌ಗಳನ್ನು ಬಳಸುವ ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಹಾಗೆಯೇ ಆ್ಯಪ್‌ ಬಳಸದವರ ಮಾಹಿತಿಯನ್ನು ಪಡೆದು, ಎರಡೂ ಅಭಿಪ್ರಾಯಗಳನ್ನು ತುಲನೇ ಮಾಡಿ ಈ ಸಂಶೋಧನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಶ್ಯಾಮ್‌ಸುಂದರ್‌ ತಿಳಿಸಿದ್ದಾರೆ. ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆ, ಸಾಮಾನ್ಯ ರೋಗಗಳ ಕುರಿತು ಜನರು ಹೆಚ್ಚಾಗಿ ಆರೋಗ್ಯ ಆ್ಯಪ್‌ಗಳ ಜತೆ ಮಾಹಿತಿ ವಿನಿಮಯ ಮಾಡುತ್ತಾರೆ. ಈ ರೀತಿ ಸಂವಾದ ನಡೆಸುವುದರಿಂದ ಜನರು ಕಾಯಿಲೆಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ.

ಇದರಿಂದ ಆ್ಯಪ್‌ ಬಳಸುವವರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವುದಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ರೋಗಗಳು ಹರಡುವುದೂ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಆರೋಗ್ಯ ಆ್ಯಪ್‌ ಬಳಸುವವರ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರಲಿದೆ ಎಂದೂ ಅಧ್ಯಯನ ತಿಳಿಸಿದೆ.