ಬೆಂಗಳೂರು:ಏ-21: ಬಡ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಪ್ರಕಟಿಸಿರುವ ‘ಅನಿಲ ಭಾಗ್ಯ’ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷ ಆರಂಭವಾಗಿದೆ.

ಕೇಂದ್ರ ಸರ್ಕಾರ ಬಡ ಕುಟುಂಬಗಳಿಗೆ ಆರಂಭಿಸಿರುವ ‘ಉಜ್ವಲ’ (ಉಚಿತ ಅನಿಲ ಸಂಪರ್ಕ) ಯೋಜನೆ ವ್ಯಾಪ್ತಿಗೆ ಸೇರದವರಿಗೆ ರಾಜ್ಯ ಸರ್ಕಾರ ‘ಅನಿಲ ಭಾಗ್ಯ’ ಯೋಜನೆ ಘೋಷಿಸಿದೆ. ಇದಕ್ಕೆ ತಕರಾರು ಎತ್ತಿರುವ ಕೇಂದ್ರ, ‘ಅನಿಲ ಭಾಗ್ಯ’ಕ್ಕೆ ಬದಲು ‘ಉಜ್ವಲ’ ಎಂದೇ ಹೆಸರಿಡುವಂತೆ ಸೂಚಿಸಿದೆ.

ಆದರೆ, ಈ ಸೂಚನೆ ತಿರಸ್ಕರಿಸಿರುವ ರಾಜ್ಯ ಸರ್ಕಾರ, ‘ಅನಿಲ ಭಾಗ್ಯ’ ಎಂಬ ಹೆಸರನ್ನೇ ಮುಂದುವರಿಸಲು ನಿರ್ಧರಿಸಿದೆ. ಬುಧವಾರ ಈ ಸಂಬಂಧ ಆದೇಶ ಹೊರಡಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

‘ಉಜ್ವಲ’ ಯೋಜನೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಆದರೆ, ಕರ್ನಾಟಕದಲ್ಲಿ ಫಲಾನುಭವಿಗಳ ಪಟ್ಟಿ ತಯಾರಾಗಿ ಆರು ತಿಂಗಳಾದರೂ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಬಿಡುವಿಲ್ಲ ಎಂಬ ಕಾರಣಕ್ಕೆ ಚಾಲನೆಯೇ ಸಿಕ್ಕಿಲ್ಲ ಎಂದು ಸರ್ಕಾರ ಆರೋಪಿಸಿದೆ.

‘ಉಜ್ವಲ’ ಯೋಜನೆಯ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರ ₹ 1,600 ಸಹಾಯಧನ ನೀಡುತ್ತದೆ. ಇದಕ್ಕೆ ರಾಜ್ಯ ಸರ್ಕಾರ ₹ 1,000 ಸೇರಿಸಿ ಗ್ಯಾಸ್‌ ಸ್ಟೌ ಉಚಿತವಾಗಿ ಕೊಡಲು ನಿರ್ಧರಿಸಿದೆ.

‘ಉಜ್ವಲ’ ಪಟ್ಟಿಯಲ್ಲಿ ಇಲ್ಲದವರು ₹ 1,600 ವಿಶೇಷ ದರ ಪಾವತಿಸಿ ಸಂಪರ್ಕ ಪಡೆದುಕೊಳ್ಳಬಹುದು ಎಂದೂ ಕೇಂದ್ರ ಪ್ರಕಟಿಸಿದೆ. ರಾಜ್ಯ ಸರ್ಕಾರ ಇದರ ಲಾಭ ಪಡೆದುಕೊಂಡು ವಿಶೇಷ ದರದಲ್ಲಿ ಸಂಪರ್ಕ ಖರೀದಿಸಿ ‘ಅನಿಲ ಭಾಗ್ಯ’ದ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿತ್ತು.

‘ರಾಜ್ಯ ಸರ್ಕಾರ ವಿಶೇಷ ದರದಲ್ಲಿ ಖರೀದಿಸಿದರೂ ಅದಕ್ಕೆ ‘ಉಜ್ವಲ’ ಎಂದೇ ಹೆಸರಿಡಬೇಕು. ಬೇರೆ ಹೆಸರಿನಲ್ಲಿ ಯೋಜನೆ ಜಾರಿಗೆ ಅವಕಾಶ ಇಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ನಿರ್ದೇಶನ ನೀಡಿದೆ’ ಎಂದು ಆಹಾರ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಆಕ್ಷೇಪಕ್ಕೆ ತಿರುಗೇಟು ನೀಡಿರುವ ರಾಜ್ಯ ಸರ್ಕಾರ, ವಿಶೇಷ ದರ ಪಾವತಿಸಿ ‘ಉಜ್ವಲ’ ಎಂದು ಹೆಸರಿಟ್ಟು ಅದರ ಹೆಗ್ಗಳಿಕೆಯನ್ನು ಕೇಂದ್ರಕ್ಕೆ ಕೊಡುವ ಬದಲು, ಮಾರುಕಟ್ಟೆ ದರದಲ್ಲಿ (₹ 1920) ಖರೀದಿಸಿ ತನ್ನದೇ ಹೆಸರಿನಲ್ಲಿ ವಿತರಿಸಲು ನಿರ್ಧರಿಸಿದೆ. ಈ ಕುರಿತು ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದೂ ಅವರು ತಿಳಿಸಿದರು.

‘ರಾಜ್ಯದಲ್ಲಿ ಅಂದಾಜು 20 ಲಕ್ಷ ಅನಿಲರಹಿತ ಕುಟುಂಬಗಳಿವೆ. ಈ ಪೈಕಿ ಶೇ 50ರಷ್ಟು ಕುಟುಂಬಗಳು ‘ಉಜ್ವಲ’ ಯೋಜನೆ ವ್ಯಾಪ್ತಿಗೆ ಬರುತ್ತವೆ. ಉಳಿದ 10 ಲಕ್ಷ ಕುಟುಂಬಗಳಿಗೆ ‘ಅನಿಲಭಾಗ್ಯ’ದ ಲಾಭ ದೊರೆಯಲಿದೆ’ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದರು.

‘ಗ್ರಾಮಾಂತರ ಭಾಗದಲ್ಲಿ ಕೆಲವು ಕುಟುಂಬಗಳು ಅನಿಲ ಸಂಪರ್ಕ ಹೊಂದಿದ್ದರೂ ಬೆಳಕಿಗಾಗಿ ಸಬ್ಸಿಡಿ ಸೀಮೆಎಣ್ಣೆ ಬಳಸುತ್ತಿವೆ. ರಾಜ್ಯವನ್ನು ಸಂಪೂರ್ಣ ಸೀಮೆಎಣ್ಣೆ ಮುಕ್ತಗೊಳಿಸುವ ಉದ್ದೇಶದಿಂದ, ಇಂತಹ ಕುಟುಂಬಗಳಿಗೆ ‘ಪುನರ್‌ಬೆಳಕು’ ಯೋಜನೆಯಡಿ 1 ಲೀಟರ್‌ ಸೀಮೆಎಣ್ಣೆ ಬದಲು ರೀ ಚಾರ್ಜಬಲ್‌ ಮಾಡಬಹುದಾದ ₹ 300 ಮೌಲ್ಯದ 2 ಎಲ್‌ಇಡಿ ಬಲ್ಬ್‌ಗಳನ್ನು ನೀಡಲಾಗುವುದು’ ಎಂದೂ ಅವರು ತಿಳಿಸಿದರು.

‘ಉಜ್ವಲ’ ಯೋಜನೆಯಡಿ ವಿಧಿಸಿರುವ ಷರತ್ತು ಗಮನದಲ್ಲಿಟ್ಟು ‘ಅನಿಲ ಭಾಗ್ಯ’ ಮತ್ತು ‘ಪುನರ್‌ಬೆಳಕು’ ಯೋಜನೆ ಕಾರ್ಯಗತಗೊಳಿಸಲಾಗುವುದು
– ಹರ್ಷ ಗುಪ್ತ, ಕಾರ್ಯದರ್ಶಿ, ಆಹಾರ ಇಲಾಖೆ

ಕೃಪೆ:ಪ್ರಜಾವಾಣಿ
‘gas’ conflict,Bangalore, A poor family,Free gas connection