ಬೆಂಗಳೂರು:ಏ-20:(www.justkannada.in)ದೇಶದಲ್ಲಿನ ವಿವಿಐಪಿ ಸಂಸ್ಕೃತಿಗೆ ಕಡುವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಸರ್ಕಾರಿ ವಾಹನಗಳ ಮೇಲೆ ಕೆಂಪುಗೂಟ ಬಳಕೆ ನಿಷೇಧ ಕ್ರಮದಿಂದಾಗಿ ಕೆಲ ದಿನಗಳಲ್ಲೇ ಗಣ್ಯ ವ್ಯಕ್ತಿಗಳ ಪ್ರತಿಷ್ಠೆಯ ಪ್ರತೀಕವಾಗಿದ್ದ ಕೆಂಪು ದೀಪಗಳು ಇತಿಹಾಸದ ಪುಟ ಸೇರಲಿವೆ. ಮೇ 1ರಿಂದ ರಾಷ್ಟ್ರಾದ್ಯಂತ ಈ ಕ್ರಮ ಜಾರಿಗೆ ಬರಲಿದ್ದು, ವಾಹನಗಳ ಮೇಲಿನ ಕೆಂಪು ದೀಪ ಕಣ್ಮರೆಯಾಗಲಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು, ಲೋಕಸಭೆ ಸ್ಪೀಕರ್‌, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಯಾವುದೇ ಅತಿ ಗಣ್ಯ ವ್ಯಕ್ತಿಗಳ (ವಿವಿಐಪಿ)ಗಳ ವಾಹನಗಳ ಮೇಲೆ ಮೇ 1ರಿಂದ ಕೆಂಪು ದೀಪ (ಬೀಕನ್‌ ಲೈಟ್‌) ಕಾಣುವುದಿಲ್ಲ. ಅಷ್ಟೇ ಅಲ್ಲ, ಉನ್ನತ ಅಧಿಕಾರಿಗಳು, ಸಚಿವರು ಮತ್ತು ಜಡ್ಜ್ಗಳು ಕೂಡ ತಮ್ಮ ವಾಹನಗಳ ಮೇಲೆ ಬೀಕನ್‌ ದೀಪಗಳನ್ನು ಬಳಸುವುದಕ್ಕೆ ನಿಷೇಧ ಹೇರಲಾಗಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಬೀಕನ್‌ ಲೈಟ್‌ನ ಕಾರುಗಳನ್ನು ಹೊಂದುವ ಬಗ್ಗೆ ಅಥವಾ ಈ ಬಗ್ಗೆ ಅನುಮತಿ ನೀಡಲು ಅಧಿಕಾರವೇ ಇರುವುದಿಲ್ಲ.ಈ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1989ಕ್ಕೆ ಶೀಘ್ರವೇ ತಿದ್ದುಪಡಿ ತರಲಾಗುತ್ತದೆ.

ತುರ್ತುಸ್ಥಿತಿ ಮತ್ತು ಪರಿಹಾರ ಮತ್ತು ರಕ್ಷಣಾ ಸೇವೆಗಳು, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ವಾಹನಗಳು ನೀಲಿ ದೀಪಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕ್ರಮಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲ ಮಂತ್ರಿಗಳು ಗಣ್ಯರು ಕೆಂಪು ದೀಪ ಬಳಸದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಉತ್ತಮವಾದದ್ದು ಎಂದು ಕೆಲವರು ಹೇಳಿದ್ದರೆ ಇನ್ನು ಕೆಲ ಮಂತ್ರಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಕೇಂದ್ರ ಸರ್ಕಾರದ ನಿಯಮ ರಾಜ್ಯಗಳಿಗೆ ಅನ್ವಯವಾಗುವುದುಲ್ಲ ಎಂದು ಹೇಳಿದ್ದಾರೆ. ಇನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು, ಕೇಂದ್ರ ಸರ್ಕಾರ ಯಾವ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದೆ ಎಂದು ಗೊತ್ತಿಲ್ಲ. ಕೆಲವರು ಕೆಂಪು ದೀಪ ಅಗತ್ಯವೆಂದು ಹೇಳುತ್ತಾರೆ ಇನ್ನು ಕೆಲವರು ಅಗತ್ಯವಿಲ್ಲ ಎನ್ನುತ್ತಾರೆ ಒಟ್ಟಾರೆ ಇದರ ಬಗ್ಗೆ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳೂ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಾನು ನಾಲ್ಕು ಬಾರಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ನನ್ನ ಕಾರಿನ ಮೇಲೆ ಕೆಂಪು ದೀಪ ಅಗತ್ಯವೆನಿಸಲೇ ಇಲ್ಲ. ಎಂದಿಗೂ ಬಳಸಿಯೂ ಇಲ್ಲ. ಹಾಗಾಗಿ ಕೆಂಪು ದೀಪ ಅಗತ್ಯವೆನಿಸುವುದಿಲ್ಲ ಎಂದು ಹೇಳಿದ್ದಾರೆ.

From May 1, no red beacon,away with the VIP culture in India
From the first of May, official vehicles of dignitaries across the country, including the President, PM and Chief Justice will not flaunt red beacons