ಬೆಂಗಳೂರು:ಜೂ-18:(www.justkannada.in)ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತ ನೂರು ಕೋಟಿಗೂ ಅಧಿಕ ಮೊತ್ತದ ಆಸ್ತಿ ಸಂಪಾದಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮಾಜಿ ಸಬ್‌ ಇನ್‌ಸ್ಪೆಕ್ಟರ್ ಹಾಗೂ ಆತನ ಇಬ್ಬರು ಸೋದರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಡಾಲರ್ಸ್ ಕಾಲೋನಿಯ ಚಂದ್ರಶೇಖರ್ ಅಲಿಯಾಸ್ ಚಲ್ಲಘಟ್ಟ ಚಂದ್ರ, ಆತನ ತಮ್ಮಂದಿರಾದ ಮಂಜುನಾಥ ಅಲಿಯಾಸ್ ಬಾಕ್ಸರ್ ಹಾಗೂ ಅಶೋಕ್‌ ಕುಮಾರ್ ಎಂಬುವವರು ಬಂಧಿತರಾಗಿದ್ದಾರೆ. ಈ ಸೋದರರು ಅಪರಾಧ ಕೃತ್ಯಗಳಿಂದಲೇ 100 ಕೋಟಿಗೂ ಅಧಿಕ ಮೊತ್ತದ ಆಸ್ತಿ ಗಳಿಸಿರುವುದು ವಿಚಾರಣೆಯಿಂದ ಬಯಲಾಗಿದೆ.

ಹತ್ತು ವರ್ಷಗಳ ಹಿಂದೆ ತನ್ನ ವಿರುದ್ಧ ದಾಖಲಾಗಿದ್ದ ಡಕಾಯಿತಿ ಯತ್ನ ಪ್ರಕರಣದಲ್ಲಿ ವಿಚಾರಣೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಚಂದ್ರನನ್ನು ನ್ಯಾಯಾಲಯ ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು. ಹೀಗಾಗಿ, ಆತನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಂಜಯನಗರದಲ್ಲಿ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

1987ರಲ್ಲಿ ಎಎಸ್‌ಐ ಆಗಿ ದೆಹಲಿ ಸಿಐಎಸ್‍ಎಫ್‌ ಸೇರಿದ್ದ ಚಂದ್ರನಿಗೆ 4 ವರ್ಷಗಳಲ್ಲೇ ಎಸ್‌ಐ ಹುದ್ದೆಗೆ ಬಡ್ತಿ ಸಿಕ್ಕಿತ್ತು. ಅನಾರೋಗ್ಯದ ನೆಪದಲ್ಲಿ ಸುದೀರ್ಘ ರಜೆ ಪಡೆದು ವರ್ಷಕ್ಕೆ 2–3 ಬಾರಿ ಬೆಂಗಳೂರಿಗೆ ಬರುತ್ತಿದ್ದ ಈತ, ಸೋದರರು ಹಾಗೂ ಸ್ನೇಹಿತರನ್ನು ಸೇರಿಸಿಕೊಂಡು ಡಕಾಯಿತಿ ಗ್ಯಾಂಗ್ ಕಟ್ಟಿದ್ದ. ಆಗಿನಿಂದಲೂ ಹೆದ್ದಾರಿಗಳಲ್ಲಿ ವಾಹನ ತಡೆದು ಸುಲಿಗೆ ಮಾಡುತ್ತಿದ್ದ ಈತ, ದೋಚಿದ ಹಣ–ಒಡವೆಗಳೊಂದಿಗೆ ದೆಹಲಿಗೆ ಹಿಂದಿರುಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

14 ವರ್ಷಗಳ ಕಾಲ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಚಂದ್ರ, ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದಾಗೆಲ್ಲ ಸುಳ್ಳು ವೈದ್ಯಕೀಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸುತ್ತಿದ್ದ. ಈಬಗ್ಗೆ ಅನುಮಾನಗೊಂಡ ಅಧಿಕಾರಿಗಳು, ಇಲಾಖಾ ವಿಚಾರಣೆಗೆ ಆದೇಶಿಸಿದ್ದರು. ಆಗ ಆತ ಖೊಟ್ಟಿ ದಾಖಲೆ ಸಲ್ಲಿಸಿ ರಜೆ ಪಡೆಯುತ್ತಿದ್ದ ಸಂಗತಿ ಬಯಲಾಗಿತ್ತು. ಹೀಗಾಗಿ, 2011ರಲ್ಲಿ ಚಂದ್ರನನ್ನು ಸೇವೆಯಿಂದ ವಜಾಗೊಳಿಸಿದ್ದರು.

ಸರ್ಕಾರಿ ಕೆಲಸ ಕಳೆದುಕೊಂಡ ಬಳಿಕ ವೃತ್ತಿಪರ ಕ್ರಿಮಿನಲ್ ಆಗಿ ಪ್ರವರ್ಧಮಾನಕ್ಕೆ ಬಂದ ಚಂದ್ರ, ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಪ್ರಾರಂಭಿಸಿದ್ದ. ತನ್ನ ಡಕಾಯಿತಿ ಗ್ಯಾಂಗ್ ಬಳಸಿಕೊಂಡೇ, ಅಮಾಯಕರ ಮೇಲೆ ದಬ್ಬಾಳಿಕೆ ನಡೆಸಿ ಭೂಮಿ ಕಬಳಿಸುತ್ತಿದ್ದ. ಕೊಲೆ ಯತ್ನ, ಡಕಾಯಿತಿ ಹಾಗೂ ಸುಲಿಗೆ ಆರೋಪಗಳಡಿ ಆತನ ವಿರುದ್ಧ ಎಚ್‌ಎಎಲ್, ಎಲೆಕ್ಟ್ರಾನಿಕ್‌ಸಿಟಿ, ಚನ್ನಪಟ್ಟಣ ಗ್ರಾಮಾಂತರ ಠಾಣೆಗಳು ಹಾಗೂ ಸಿಸಿಬಿಯಲ್ಲಿ ಪ್ರಕರಣಗಳು ಆತನ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ಅಂತಿಮವಾಗಿ ಈಗ ಚಂದ್ರ ಹಾಗೂ ಆತನ ಸಹೋದರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
A former sub-inspector attached to Central Reserve Police Force and two of his brothers were arrested by the Central Crime Branch for their involvement in highway robberies and extortion. They had been on the run for 16 years.

former sub-inspector,Chandrashekhar alias Challaghatta Chandra,arrested,highway robberies