ಹುಬ್ಬಳ್ಳಿ: ದೇಶದಲ್ಲಿರುವ ಎಲ್ಲ ಕಲಾ ಕಾಲೇಜುಗಳು ಪಿ.ಯು.ಸಿ ನಂತರವಷ್ಟೇ ಪ್ರವೇಶ ನೀಡಬೇಕು ಎಂಬ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯು.ಜಿ.ಸಿ) ನಿಯಮ ಉಲ್ಲಂಘಿಸಿ, ರಾಜ್ಯದ ಬಹುತೇಕ ಕಲಾ ಕಾಲೇಜುಗಳು ಎಸ್ಸೆಸ್ಸೆಲ್ಸಿ ನಂತರ ಕಲಾ ಮೂಲ (ಫೌಂಡೇಷನ್‌ ಕೋರ್ಸ್‌) ತರಗತಿಗಳಿಗೆ ಇಂದಿಗೂ ಪ್ರವೇಶ ನೀಡುತ್ತಿವೆ.

ಪಿ.ಯು.ಸಿ ನಂತರವಷ್ಟೇ ನಾಲ್ಕು ವರ್ಷಗಳ ಬ್ಯಾಚಲರ್‌ ಆಫ್‌ ವಿಜ್ಯುವಲ್‌ ಆರ್ಟ್ಸ್‌ (ಬಿವಿಎ) ಮತ್ತು ಬ್ಯಾಚಲರ್‌ ಆಫ್‌ ಫೈನ್ ಆರ್ಟ್‌ (ಬಿ.ಎಫ್‌.ಎ) ಪದವಿ ನೀಡುವಂತೆ ಮೇ 24ರಂದು ಯು.ಜಿ.ಸಿ ಕಾರ್ಯದರ್ಶಿ ಪ್ರೊ. ಜಸ್ಪಾಲ್‌ ಎಸ್‌. ಸಂಧು ಸುತ್ತೋಲೆ ಹೊರಡಿಸಿದ್ದಾರೆ. ಇಷ್ಟಾಗಿಯೂ ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಸರ್ಕಾರಿ ಕಾಲೇಜು (ಕಾವಾ), ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರದ ಚಿತ್ರಕಲಾ ವಿಭಾಗದಿಂದ ಎಸ್ಸೆಸ್ಸೆಲ್ಸಿ ನಂತರದ ಬ್ಯಾಚಲರ್ ಆಫ್ ಫೈನ್ ಆರ್ಟ್‌ ವ್ಯಾಸಂಗಕ್ಕೆ ಮತ್ತೆ (ಐದು ವರ್ಷದ ಶಿಕ್ಷಣದ ಬೋಧನೆಗಾಗಿ) ಅರ್ಜಿ ಆಹ್ವಾನಿಸಲಾಗಿದೆ.

ಸಮಸ್ಯೆ ಏನು?: ‘ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷಗಳ ದೃಶ್ಯಕಲಾ ಕೋರ್ಸ್‌ ಹಾಗೂ ಆ ನಂತರ ಮೂರು ವರ್ಷಗಳ ಬಿ.ವಿ.ಎ, ಬಿ.ಎಫ್‌.ಎ ಕೋರ್ಸ್‌ಗಳನ್ನು ರಾಜ್ಯದ ಬಹುತೇಕ ಕಾಲೇಜುಗಳು ನಡೆಸಿಕೊಂಡು ಬರುತ್ತಿವೆ. ಈ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಯು.ಜಿ.ಸಿಯ ನೆಟ್‌ ಪರೀಕ್ಷೆ ಬರೆಯಲು, ಬೇರೆ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಅಥವಾ ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ನೀಡುವುದಿಲ್ಲ.

‘ಎಸ್ಸೆಸ್ಸೆಲ್ಸಿ ನಂತರದ ಈ ಕೋರ್ಸ್ ಅನ್ನು ಪಿ.ಯು.ಸಿಗೆ ತತ್ಸಮಾನ ಎಂದು ಪರಿಗಣಿಸಿದ್ದರಿಂದ, ಯು.ಜಿ.ಸಿ ನಿಯಮಾವಳಿಗಳ ಪ್ರಕಾರ ಇವರನ್ನು ಪದವೀಧರರು ಎಂದೂ ಪರಿಗಣಿಸುವುದಿಲ್ಲ. ಹಲವು ಚಿತ್ರಕಲಾ ಕಾಲೇಜುಗಳಿಗೆ ಈ ವಿಷಯ ಗೊತ್ತಿಲ್ಲ’ ಎನ್ನುತ್ತಾರೆ ಈ ಕುರಿತು ಯುಜಿಸಿಗೆ ಪತ್ರ ಬರೆದು ಗಮನ ಸೆಳೆದಿರುವ ಹುಬ್ಬಳ್ಳಿಯ ಚಿತ್ರಕಲಾ ಉಪನ್ಯಾಸಕ ಚಂದ್ರಕಾಂತ ಜಟ್ಟೆಣ್ಣವರ.

ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿಯೂ ಐದು ವರ್ಷಗಳ ಕಲಾ ಶಿಕ್ಷಣ ನೀಡುವ ಪದ್ಧತಿ ಇಲ್ಲ. ಈ ಬಗ್ಗೆ ಅರಿವಿರದೇ ಕೋರ್ಸ್ ಪೂರ್ಣ ಗೊಳಿಸಿದ ಚಿತ್ರಕಲಾ ವಿದ್ಯಾರ್ಥಿಗಳಿಗೆ ವಿವಿಧ ವಿಶ್ವವಿದ್ಯಾಲಯ, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರಾಗುವ ಅವಕಾಶಗಳು ಸಿಗುವುದಿಲ್ಲ ಎಂದು ಅವರು ತಿಳಿಸಿದರು.
ಕೃಪೆ:ಪ್ರಜಾವಾಣಿ
Entrance to the course, after SSLC, painting colleges,Rule violation