jan-vedan-sammelan-rahulನವದೆಹಲಿ:ಜ-11:(www.justkannada.in)ಪ್ರಧಾನಿ ನರೇಂದ್ರ ಮೋದಿಯವರ ನೋಟ್ ಬ್ಯಾನ್ ನಿರ್ಧಾರ ಅಸಮರ್ಥ ನಿರ್ಧಾರವಾಗಿದ್ದು, 500 ಹಾಗೂ 100 ರೂ ನೋಟುಗಳನ್ನು ನಿಷೇಧ ಮಾಡುವ ಮೂಲಕ ದೇಶದ ಪ್ರತಿಯೊಂದು ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ ದೇಶದ ಬೆನ್ನೆಲುಬನ್ನೇ ಮುರಿದಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ನಡೆದ ಜನ್ ವೇದನಾ ಸಮ್ಮೇಳನದಲ್ಲಿ ಮಾತನಾಡಿದ ಅವರು, 2019ರಲ್ಲಿ ಕಾಂಗ್ರೆಸ್ ಸರ್ಕಾರ ದೇಶದ ಚುಕ್ಕಾಣಿ ಹಿಡಿಯಲಿದ್ದು, ಆಗ ದೇಶದಲ್ಲಿನ ಜನಸಾಮಾನ್ಯರಿಗೂ ಅಚ್ಛೇ ದಿನ್ ಗಳು ಬರಲಿವೆ ಎಂದು ತಿಳಿಸಿದ್ದಾರೆ.

ಕೇಂದ್ರ ಎನ್ ಡಿಎ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪ್ರಧಾನಿ ಮೋದಿ ಮಾಡುವ ಯೋಗಾಸನದಂತಾಗಿದೆ. ಮೋದಿಜಿ ಯೋಗವನ್ನು ಮಾಡುತ್ತಾರೆ ಆದರೆ ಅವರು ಪದ್ಮಾಸನ ಹಾಕುವುದಿಲ್ಲ. ಕ್ಲೀನ್ ಇಂಡಿಯಾ ಯೋಜನೆಗಾಗಿ ಪೊರಕೆ ಹಿಡಿದು ಪೋಸ್ ಕೊಡುವ ಪ್ರಧಾನಿ ಮೋದಿ ಅಲ್ಲಿ ಏನನ್ನೂ ಶುಚಿಗೊಳಿಸುವುದಿಲ್ಲ. ಕೇವಲ ಕ್ಯಾಮೆರಾಗಳಿಗೆ ಪೋಸ್ ಕೊಡವುದಷ್ಟೇ ಅವರ ಕೆಲಸ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಹೈಜಾಕ್ ಮಾಡಿ ಅದಕ್ಕೆ ಮರು ನಾಮಕರಣ ಮಾಡಿ ಪ್ರಧಾನಿ ಮೋದಿ ಜಾರಿಗೆ ತರುತ್ತಿದ್ದಾರೆ. ತಮ್ಮ ಸರ್ಕಾರದಲ್ಲಿನ ಹುಳುಕುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ನೋಟ್ ಬ್ಯಾನ್ ಮುಂದಿಟ್ಟುಕೊಂಡಿದ್ದಾರೆ. ಬಿಜೆಪಿ ಹೇಳಿದ್ದು ನಿಜ ಯಾಕೆಂದರೆ ನಾವು 7 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಸರ್ಕಾರ ಕೇವಲ ಎರಡುವರೆ ವರ್ಷಗಳಲ್ಲಿ ಮಾಡಿ ತೋರಿಸಿದೆ. ಅದೇನೆಂದರೆ ಆರ್ ಬಿಐ, ನ್ಯಾಯಾಂಗದಂತಹ ದೇಶದ ಪ್ರಮುಖ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಮತ್ತು ಆರ್ ಎಸ್ ಎಸ್ ಇಂದು ದುರ್ಬಲಗೊಳಿಸಿರುವುದು. ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ, ಸಂಘ-ಸಂಸ್ಥೆಗಳನ್ನು ಅಗೌರವವಾಗಿ ಕಾಣುವುದು. ಓರ್ವ ಸರ್ವಾಧಿಕಾರಿಯಂತೆ ವರ್ತಿಸುವುದು, ತಮ್ಮಷ್ಟಕ್ಕೆ ತಾವೇ ನಿರ್ಧಾರಗಳನ್ನು ತೆಗೆದುಕೊಲ್ಳುವುದೇ ಅವರ ಸಾಧನೆಯಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ತಾವು ಜಾರಿಗೆ ತಂದಿರುವ ನೋಟು ನಿಷೇಧದ ಸಾಧಕ-ಬಾಧಕಗಳ ಕುರಿತಂತೆ ತಮ್ಮನ್ನು ತಾವೇ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ. ದೇಶದಲ್ಲಿನ ಹಳ್ಳಿಯ ಜನತೆ, ಕಾರ್ಮಿಕ ವರ್ಗ, ರೈತಾಪಿ ವರ್ಗಗಳು ಯಾವರೀತಿಯಾಗಿ ಆರ್ಥಿಕ ಬಿಕ್ಕಟ್ಟಿನಿಂದ ಭವಣೆ ಪಡುತ್ತಿದ್ದಾರೆ ಎಂಬುದು ಅರಿವಾಗುತ್ತದೆ ಎಂದು ತಿಳಿಸಿದ್ದಾರೆ.

Demonetisation,Rahul Gandhi,Jan Vedna Sammelan,PM Narendra Modi