ಮದುವೆಗೆ ಹುಡುಗಿ ಸಿಗದೇ ಬೇಸರ: ರೋಬೊಟ್ ಸೃಷ್ಟಿಸಿ ಅದನ್ನೇ ಮದುವೆಯಾದ ಚೀನಾ ಇಂಜಿನಿಯರ್!

0
1293

ಬೀಜಿಂಗ್, ಏಪ್ರಿಲ್ 15 (www.justkannada.in): ವಿವಾಹವಾಗಲು ಹೆಣ್ಣು ಸಿಗದೇ ಇದ್ದ ಹಿನ್ನೆಲೆಯಲ್ಲಿ ಹತಾಶೆಗೊಳಗಾದ ಚೀನಾದ 31 ವರ್ಷದ ಇಂಜಿನಿಯರ್ ತಾನೇ ಸೃಷ್ಟಿಸಿದ ರೋಬೋಟ್ ನ್ನು ವಿವಾಹವಾಗಿದ್ದಾರೆ!

ಯೆಸ್. ಇದು ಸತ್ಯ. ಕೃತಕ ಬುದ್ಧಿಮತ್ತೆ ತಜ್ಞ ಝೆಂಗ್ ಜಿಯಾಜಿಯಾ ರೋಬೋಟ್ ನ್ನು ವಿವಾಹವಾಗಿರುವ ಇಂಜಿನಿಯರ್. ಝೆಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ವಿವಾಹವಾಗಲು ಹೆಣ್ಣು ಸಿಗದೇ ಬೇಸತ್ತು ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಯಿಂಗ್ ಯಿಂಗ್ ಎಂಬ ರೋಬೋಟ್ ಅನ್ನು ಸರಳ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ.

ಕೃತಕ ಬುದ್ಧಿಮತ್ತೆ ಚಾಲಿತ ಯಿಂಗ್-ಯಿಂಗ್, ಚೀನಾದ ಅಕ್ಷರಗಳು ಹಾಗೂ ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಸರಳವಾಗಿ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದೆಯಂತೆ. ವಿವಾಹ ಕಾರ್ಯಕ್ರಮದಲ್ಲಿ ರೋಬೋಟ್ ನ್ನು ಚೀನಾದ ಸಾಂಪ್ರದಾಯಿಕ ವಧುವಿನಂತೆಯೇ ಸಿಂಗರಿಸಲಾಗಿತ್ತು. ಈಗ ರೋಬೋಟ್ ನ್ನು ಪತ್ನಿಯನ್ನಾಗಿ ಅಪ್ ಗ್ರೇಡ್ ಮಾಡಲು ಝೆಂಗ್ ಯೋಜನೆ ರೂಪಿಸಿದ್ದಾರೆ.

ಚೀನಾದಲ್ಲಿ 2030 ರ ವೇಳೆಗೆ ಸುಮಾರು 30 ಮಿಲಿಯನ್ ಚೀನಾದ ಪುರುಷರು ವಿವಾಹವಾಗದೇ ಏಕಾಂಗಿಯಾಗಿ ಉಳಿಯಲಿದ್ದಾರೆ ಎಂದು ಇತ್ತೀಚೆಗಷ್ಟೇ ಸಂಶೋಧಕರು ಎಚ್ಚರಿಸಿದ್ದರು. 2020 ರ ವೇಳೆಗೆ ಚೀನಾದಲ್ಲಿ ವಿವಾಹವಾಗದೇ ಉಳಿಯುವ 35-59 ವರ್ಷ ವಯಸ್ಸಿನ ಪುರುಷರ ಸಂಖ್ಯೆ 15 ಮಿಲಿಯನ್ ದಾಟಲಿದ್ದು 2050 ರ ವೇಳೆಗೆ 30 ಮಿಲಿಯನ್ ನಷ್ಟಾಗಲಿದೆ.