ಅಪ್ಪನ ಹುಟ್ಟುಹಬ್ಬಕ್ಕೆ ‘ಶತಕ’ದ ಗಿಫ್ಟ್ ನೀಡಿದ ಸಮಿತ್ ದ್ರಾವಿಡ್ !

0
631

ಬೆಂಗಳೂರು, ಜನವರಿ 12 (www.justkannada.in): ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ತಂದೆಯ ಹುಟ್ಟುಹಬ್ಬಕ್ಕೆ ‘ಶತಕ’ದ ಗಿಫ್ಟ್ ನೀಡಿದ್ದಾರೆ!

‘ವಾಲ್ ಖ್ಯಾತಿ’ಯ ರಾಹುಲ್ ದ್ರಾವಿಡ್ ಹಾಗೂ ಮಾಜಿ ಕ್ರಿಕೆಟಿಗ, ಲೆಗ್ ಸ್ಪಿನ್ನರ್ ಸುನಿಲ್ ಜೋಶಿ ಅವರ ಪುತ್ರರು ತಮ್ಮ ಅಪ್ಪಂದಿರಂತೆ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿದ್ದು, ಕೆಎಸ್‌’ಸಿಎ ಆಯೋಜಿಸಿರುವ ಬಿಟಿಆರ್ ಕಪ್ ಅಂಡರ್-14 ಟೂರ್ನಿಯಲ್ಲಿ ಶತಕ ಸಿಡಿಸಿದ್ದಾರೆ.

ಮಲ್ಯ ಅದಿತಿ ಇಂಟರ್‌’ನ್ಯಾಷನಲ್ ಸ್ಕೂಲ್ ಪರ ಆಡಿದ ಸಮಿತ್ ದ್ರಾವಿಡ್ 150 ರನ್ ಪೇರಿಸಿದರೆ, ಆರ್ಯನ್ ಜೋಶಿ 154 ರನ್ ಬಾರಿಸಿದರು. ಇವರಿಬ್ಬರ ಸ್ಫೋಟಕ ಆಟದ ನೆರವಿನಿಂದ ಅದಿತಿ ಶಾಲೆ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 500 ರನ್ ಕೂಡಿಹಾಕಿತ್ತು. ಅಲ್ಲದೇ ಎದುರಾಳಿ ವಿವೇಕಾನಂದ ಶಾಲೆಯನ್ನು ಕೇವಲ 88 ರನ್‌’ಗಳಿಗೆ ಕಟ್ಟಿಹಾಕಿ 412 ರನ್‌’ಗಳ ಭರ್ಜರಿ ಗೆಲುವು ಸಾಧಿಸಿತು.

ಟೀಂ ಇಂಡಿಯಾದ ಮಾಜಿ ಆಟಗಾರರ ಪುತ್ರರ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿದರೆ, ಮುಂದೊಂದು ದಿನ ಕರ್ನಾಟಕದ ಮತ್ತಿಬ್ಬರು ಪ್ರತಿಭೆಗಳು ಭಾರತ ಸೇರಿಕೊಳ್ಳುವತ್ತ ಹೆಜ್ಜೆಹಾಕುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.