ಸಾಮಾನ್ಯವಾಗಿ ಯಾವುದೇ ಮುಖ್ಯಮಂತ್ರಿ ಬಜೆಟ್ ಪೂರ್ವ ದಿನಗಳಲ್ಲಿ, ಬಜೆಟ್ ಸಿದ್ಧತೆಗಾಗಿ ವಿವಿಧ ಕ್ಷೇತ್ರದ ಪರಿಣಿತರೊಂದಿಗೆ ಸಭೆ ನಡೆಸಿ, ಅವರ ಸಲಹೆ-ಸೂಚನೆ ಪಡೆಯುವುದು ವಾಡಿಕೆ. ಅಂತೆಯೇ, ಬಜೆಟ್ ಗೂ ಮುನ್ನ ಬೆಂಗಳೂರಿನಲ್ಲಿರುವ ಪತ್ರಿಕಾ ಸಂಪಾದಕರು ಹಾಗೂ ಪತ್ರಕರ್ತರಿಗೆ ಔತಣಕೂಟ ಆಯೋಜಿಸುವುದು ಕೂಡ ಹೊಸದಲ್ಲ. ಇದು ಅನೂಚಾನವಾಗಿ ನಡೆದುಕೊಂಡ ಬರದಿದ್ದರೂ, ಆಗೊಮ್ಮೆ ಈಗೊಮ್ಮೆ ಅರ್ಥ ಸಚಿವರು ಔತಣಕೂಟ ನೀಡುತ್ತಾ ಬಂದಿದ್ದಾರೆ. ಅಂತೆಯೇ, ಈ ಬಾರಿಯೂ ಹಣಕಾಸು ಖಾತೆಯನ್ನು ತಮ್ಮಲ್ಲಿಯೇ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಹಿಂದಿನ ದಿನ ಔತಣಕೂಟ ಆಯೋಜಿಸಿದ್ದರು. ಅದಕ್ಕೆ ಪತ್ರಕರ್ತರೂ ಹೋಗಿ ಬಂದರು.
ಇದ್ಯಾವುದೂ ವಿಶೇಷವಲ್ಲ. ಆದರೆ, ಈ ಬಾರಿ, ಸಿಎಂ ಕರೆದ ಔತಣಕೂಟಕ್ಕೆ ಪತ್ರಕರ್ತರು ಹೋಗುವುದು ಎಷ್ಟು ಸರಿ ಎಷ್ಟು ತಪ್ಪು ಎಂದು ಕೆಲವು ಹಿರಿಯ ಪತ್ರಕರ್ತರು ಒಂದು ಆರೋಗ್ಯ ಪೂರ್ಣ ಚರ್ಚೆಗಿಳಿದರು. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ.

bangalore-cm-budget-meida-journalist-dinner-star-hotel

ಪತ್ರಕರ್ತರು ಸಿಎಂ ಸೇರಿದಂತೆ ಯಾವುದೇ ವಿಐಪಿ ನೀಡುವ ಕೊಡಗೆಗಳನ್ನು ಸ್ವೀಕರಿಸಬೇಕೆ ? ಬೇಡವೇ ಎಂಬುದರ ಬಗ್ಗೆ ಮೊದಲಿನಿಂದಲೂ ತಕರಾರು ರೂಪದ ಒಂದು ಪ್ರಶ್ನೆ ಇದ್ದೇ ಇದೆ. ಕೆಲವು ಪತ್ರಿಕಾ ಸಂಸ್ಥೆಗಳಲ್ಲಿ ಇಷ್ಟು ಮೌಲ್ಯದ ಕೊಡುಗೆಯನ್ನಷ್ಟೇ ಪತ್ರಿಕಾ ಸಿಬ್ಬಂದಿ ಸ್ವೀಕರಿಸಬಹುದು ಎಂಬ ನಿಯಮವೇ ಇದೆ. ಆದರೆ, ಔತಣ ಕೂಟದಲ್ಲಿ ಭಾಗವಹಿಸಬೇಕೆ ಎಂಬುದರ ಕುರಿತು, ಅಂಥಾ ನಿಯಮ ಇದ್ದಂತಿಲ್ಲ. ಏಕೆಂದರೆ, ಒಂದೊಳ್ಳೆಯ ಊಟ ನೀಡಿಸುವುದು, ಕಾಫಿ ಕುಡಿಸುವುದು ನಮ್ಮ ಸಂಸ್ಕೃತಿಯ ಭಾಗ. ಖುಷಿ, ಸಂಭ್ರಮ, ಸಂತಸ, ಯಶಸ್ಸಿನ ಕ್ಷಣಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳಲು, ಊಟ ಹಾಕಿಸುವ ಪರಿಪಾಠ ಬೆಳೆದು ಬಂದಿದೆ. ವೃತ್ತಿಪರ ಭಾಷೆಯಲ್ಲಿ ಹೇಳಬೇಕೆಂದರೆ- ಇದೊಂದು ಸಾರ್ವಜನಿಕ ಸಂಬಂಧಿ (ಪಿಆರ್) ಚಟುವಟಿಕೆ. ಪತ್ರಕರ್ತನಿಗೂ ಪಿಆರ್ ಎಂಬುದು ಅಗತ್ಯವಾಗಿ ಬೇಕಾದ ಒಂದು ಗುಣ.
ಪತ್ರಕರ್ತ ವಿಐಪಿಗಳೊಂದಗೆ ಸಂಪರ್ಕ ಹೊಂದಿರಬೇಕು, ಸಂಬಂಧವನ್ನಲ್ಲ ಎಂದು ಹಳೆಯ ಪತ್ರಕರ್ತರು ಮಾರ್ಗದರ್ಶನ ನೀಡುತ್ತಿರುತ್ತಾರೆ. ಹಾಗಾಗಿ, ಪತ್ರಕರ್ತರು ಯಾರಾದರೂ ಪರಿಚಿತ ವಿಐಪಿಗಳು ಔತಣಕೂಟ ಆಯೋಜಿಸಿದರೆ, ತೀರಾ ಅದನ್ನು ಮಡಿವಂತಿಕೆಯಿಂದ ನೋಡುವದಿಲ್ಲ. ಊಟಕ್ಕೆ ಹೋಗುತ್ತಾರೆ. ಊಟಕ್ಕಿಂತ ಹೆಚ್ಚಾಗಿ, ಆಹ್ವಾನಿಸಿರುವ ವಿಐಪಿಯಿಂದ ಏನಾದರೂ ಸುದ್ದಿ ಸಿಗುತ್ತದೆಯೇ, ಔತಣಕೂಟದಲ್ಲಿ ಅಲ್ಲದಿದ್ದರೂ, ಮುಂದೊಂದು ದಿನ ಸಿಕ್ಕರೂ ಸಿಗಬಹುದು ಎಂಬ ಆಲೋಚನೆಯೂ ಅವರನ್ನು ಹೋಗುವಂತೆ ಮಾಡುತ್ತೆ. ಕೆಲವು ಪತ್ರಕರ್ತರು ಔತಣಕೂಟಕ್ಕೆ ಬಂದರೂ, ಊಟ ಮಾಡುವುದಿಲ್ಲ. ವಿಐಪಿ ನೀಡುವ ಒಂದು ಊಟ ಮಾಡುವುದರಿಂದ, ನಾವೆಲ್ಲರೂ ಮುಲಾಜಿಗೆ, ದಾಕ್ಷಿಣ್ಯಕ್ಕೆ ಒಳಗಾಗುತ್ತೇ ಎಂಬ ಭಯ ಅವರಿಗೆ ಇರುವುದಿಲ್ಲ. ಔತಣಕೂಟಕ್ಕೆ ಹೋಗಿಯೂ, ನಾನು ನನ್ನತನವನ್ನು ಉಳಿಸಿಕೊಳ್ಳುವ ವಿಶ್ವಾಸ ಅವರಿಗೆ ಇರುತ್ತೆ. ಹೀಗಿರುವಾಗ, ಸಿಎಂ ನೀಡಿದ ಔತಣಕೂಟ ಇಸ್ಯೂ ಆಗಿದ್ದೇಕೆ ?

ಸಾಮಾಜಿಕ ಜಾಲತಾಣದಲ್ಲಿ ಈಗ ಯಾರು ಏನನ್ನೂ ಬೇಕಾದರೂ ಅಭಿವ್ಯಕ್ತಿಸಲು ಅವಕಾಶವಿರುವುದು ಹಾಗೂ ಅದಕ್ಕೆ ಪ್ರತಿಕ್ರಿಯಿಸಲು ನೂರಾರು ಜನರಿಗೆ ಅವಕಾಶವಿರುವುದು, ಅದೊಂದು ಇಸ್ಯೂ ಆಗಲು ಕಾರಣವಾಯಿತು. ಮೊದಲು ಈ ಬಗ್ಗೆ ಸೀಮಿತ ವಲಯದಲ್ಲಿ ಚರ್ಚೆ ನಡೆಯುತ್ತಿದ್ದಾದರೂ, ಅದಕ್ಕೆ ಇಷ್ಟೊಂದು ವ್ಯಾಪಕ ಪ್ರಮಾಣದ ಜಾಗ ಸಿಗುತ್ತಿರಲಿಲ್ಲ.
ಎರಡನೇ ಬಹುಮುಖ್ಯ ಕಾರಣ: ನಮ್ಮ ಪತ್ರಕರ್ತರ ಎಲ್ಲ ಚರ್ಚೆಗಳು ಅತಿಯಾದ ಅಂಚಿಗೆ ಬಂದು ನಿಂತಿರುವುದು. ಇಂಥದ್ದನ್ನೆಲ್ಲಾ ಸರಿ ಇಲ್ಲವೇ ತಪ್ಪು ಎಂಬ ಎರಡೇ ಸಾಧ್ಯತೆಯ ದೃಷ್ಟಿಯಲ್ಲಿ ಚರ್ಚಿಸುವುದೇ ತಪ್ಪು. ನಿಜ,ಇಂಥಾ ಔತಣಕೂಟಗಳಿಗಾಗಿ ಕಾದು ಕುಳಿತು, ಸಿಎಂ ಅವರಿಗೆ ಸ್ವಂತಕ್ಕೆ ಏನಾದರೂ ಮಾಡಿಸಿಕೊಳ್ಳಬೇಕೆಂಬ ಪತ್ರಕರ್ತರು ಇರುವುದು ಸುಳ್ಳಲ್ಲ.ಆದರೆ, ಅವರಿದ್ದಾರೆ ಎಂಬ ಏಕೈಕ ಕಾರಣಕ್ಕೆ, ಔತಣಕೂಟವೇ ಬೇಡ, ಅದಕ್ಕೆ ಹೋದವರಿಗೆ ನಾಚಿಕೆಯಾಗಬೇಕು ಎಂದು ಹೇಳುವುದು ಅಷ್ಟೊಂದು ಸರಿಕಾಣದು. ಒಬ್ಬ ಪ್ರತಿಭಾವಂತ ಪ್ರೊಫೆಷನಲ್ ಪತ್ರಕರ್ತ, ಸಿಎಂ ಔತಣಕೂಟದಲ್ಲಿ ಭಾಗಿಯಾಗಿಯೂ, ಒಂದೊಳ್ಳೆಯ ಸ್ಟೋರಿ ಬರೆಯಬಹುದು. ಮುಖ್ಯವಾಗಿ ಪತ್ರಕರ್ತನಿಗೆ ಸುದ್ದಿ ಬೇಕಷ್ಟೆ. ಅದಕ್ಕಾಗಿ ಹೋದರೆ ತಪ್ಪೇನೂ ಇಲ್ಲ.

-ಸಂ

key words : bangalore-cm-budget-meida-journalist-dinner-star-hotel