ನವದೆಹಲಿ:ಮಾ-17: ಮಾರ್ಚ್ 11 ರಂದು ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದ 12 ಸಿಆರ್​ಪಿಎಫ್ ಯೋಧರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ನೆರವು ನೀಡಿದ್ದು, 1.08 ಕೋಟಿ ರೂ. ಸಹಾಯ ಮಾಡಿದ್ದಾರೆ.

ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಪ್ರತೀ ಯೋಧನ ಕುಟುಂಬಕ್ಕೆ 9 ಲಕ್ಷ ರೂ.ನಂತೆ ಒಟ್ಟು 1.08 ಕೋಟಿ ರೂ. ನೆರವು ನೀಡಿದ್ದು, ಯೋಧರ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಅಕ್ಷಯ್ ಕುಮಾರ್ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಮಾರ್ಚ್ 11ರ ದಾಳಿಯಲ್ಲಿ ಇನ್ಸ್​ಪೆಕ್ಟರ್ ಜಗಜೀತ್ ಸಿಂಗ್, ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್​ಗಳಾದ ಎಚ್.ಬಿ.ಭಟ್ ಮತ್ತು ನರೇಂದ್ರ ಕುಮಾರ್ ಸಿಂಗ್, ಹೆಡ್ ಕಾನ್ಸ್​ಟೇಬಲ್​ಗಳಾದ ಜನದೀಶ್ ಪ್ರಸಾದ್ ವಿಶ್ನೋಯಿ ಮತ್ತು ಪಿ.ಆರ್. ಮಿಂಡೆ, ಕಾನ್ಸ್​ಟೇಬಲ್​ಗಳಾದ ಮಂಗೇಶ್ ಪಾಲ್ ಪಾಂಡೆ, ರಾಮ್ಾಲ್ ಸಿಂಗ್ ಯಾದವ್, ಗೋರಕ್​ನಾಥ್, ನಂದ ಕುಮಾರ್ ಪಾರ್ಥ, ಸತೀಶ್ ಕುಮಾರ್ ವರ್ಮಾ, ಕೆ.ಶಂಕರ್ ಮತ್ತು ಸುರೇಶ್ ಕುಮಾರ್ ಹುತಾತ್ಮರಾಗಿದ್ದರು.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದು, ನಕ್ಸಲ್ ದಾಳಿಯಲ್ಲಿ 12 ಯೋಧರು ಮೃತಪಟ್ಟಿರುವ ಬಗ್ಗೆ ತಿಳಿದ ಅಕ್ಷಯ್ ಕುಮಾರ್, ಕೇಂದ್ರ ಗೃಹ ಸಚಿವಾಲಯವನ್ನು ಸಂರ್ಪಸಿ ಯೋಧರ ಕುಟುಂಬಸ್ಥರ ಬ್ಯಾಂಕ್ ಖಾತೆ ನೀಡುವಂತೆ ಕೋರಿದ್ದಾರೆ. ಅಕ್ಷಯ್ ಕುಮಾರ್ ಅವರ ಮನವಿಯನ್ನು ಪುರಸ್ಕರಿಸಿದ ಸಚಿವಾಲಯ ಅವರಿಗೆ ಬ್ಯಾಂಕ್ ಖಾತೆ ವಿವರ ನೀಡಿತ್ತು. ಆ ನಂತರ ಅಕ್ಷಯ್ ಕುಮಾರ್ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಅಕ್ಷಯ್ ಕುಮಾರ್ ಅವರ ಕಾರ್ಯ ಅವರ ದೇಶಭಕ್ತಿ ಮತ್ತು ದೇಶಕ್ಕಾಗಿ ಮಿಡಿಯುವ ಅವರ ಗುಣವನ್ನು ತೋರುತ್ತದೆ ಎಂದು ಸಿಆರ್​ಪಿಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅಕ್ಷಯ್ ಕುಮಾರ್ ಅವರನ್ನು ಶ್ಲಾಘಿಸಿದ್ದಾರೆ.

Akshay Kumar,donates Rs 1.08 crore,Sukma CRPF martyrs families