ಬೆಂಗಳೂರು, ಫೆಬ್ರವರಿ 11 (www.justkannada.in): ರಂಗಕರ್ಮಿ ಚಿಕ್ಕಸುರೇಶ್‌ (53) ನಿಧನರಾಗಿದ್ದಾರೆ.

ಕನ್ನಡ ರಂಗಭೂಮಿಯಲ್ಲಿ ಬಾಲ್ಯದಿಂದಲೂ ಸಕ್ರಿಯರಾಗಿದ್ದ ಚಿಕ್ಕ ಸುರೇಶ್, ಚಿರಸ್ಮರಣೆ, ಸಂಕ್ರಾಂತಿ, ಉಳ್ಳವರು ನೆರಳು ಮತ್ತು ಕಿಂಗ್‌ಲಿಯರ್‌ ಸೇರಿದಂತೆ ನೂರಕ್ಕೂ ಹೆಚ್ಚು ರಂಗರೂಪಕಗಳನ್ನು ರೂಪಿಸಲು ಅವರು ಶ್ರಮಿಸಿದ್ದರು. ನಾಡಿನಾದ್ಯಂತ ಸಂಚರಿಸಿ ಹತ್ತಾರು ಬೀದಿನಾಟಕಗಳ ನೂರಾರು ಪ್ರದರ್ಶನಗಳನ್ನು ನೀಡಿದ್ದರು.

ಕುರುಬನ ರಾಣಿ, ನಂದಿ, ತಾಯಿಯ ಕರುಳು, ಒಗ್ಗರಣೆ ಸಿನಿಮಾಗಳಲ್ಲಿ ನಟಿಸಿದ್ದ ಸುರೇಶ್‌ ಸಿನಿರಂಗದಲ್ಲೂ ಹೆಜ್ಜೆಗುರುತು ಮೂಡಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಿನ ಹೆಸರಾಂತ ಮತ್ತು ಎಲೆಮರಿ ಕಾಯಿಯಂತಿದ್ದ ಲೇಖಕ–ಲೇಖಕಿಯರ ಕುರಿತು ಇವರು ತಯಾರಿಸಿರುವ ಸಾಕ್ಷ್ಯಚಿತ್ರಗಳು ರಾಜ್ಯದ ಸಾಂಸ್ಕೃತಿಕ ನೆನಪುಗಳ ಕಣಜ ಸೇರಿವೆ.