ವೀರಶೈವ ಸಮಾಜ ಒಡೆಯಲು ನಮ್ಮವರಿಂದಲೇ ಸಂಚು : BSY
ಬೆಂಗಳೂರು ; ಪಕ್ಷದ ಹಿರಿಯ ಮುಖಂಡರೇ ವೀರಶೈವ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yadiyurappa ) ಸಿಎಂ ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ಈಶ್ವರಪ್ಪ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಸಮಾಜ ಒಡೆಯಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಭ್ರಮನಿರಸನ ಆಗುವುದು ನಿಶ್ಚಿತ. ವೀರಶೈವ ಸಮಾಜ ಒಡೆಯುವುದು ಅಷ್ಟು ಸುಲಭವಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡ್ಡಿ ಕಿಡಿಕಾರಿದರು.
ವೀರಶೈವ ಸಮಾಜ ಒಗ್ಗಟ್ಟಿನಲ್ಲಿದೆ. ಈ ಸಮಾಜ ಒಡೆಯಲು ಬಿಜೆಪಿಯ (BJP ) ಮುಖಂಡರೇ ನಡೆಸಿರುವ ಪ್ರಯತ್ನಗಳ ಕುರಿತು ಹಲವು ಮಠಾಧೀಶರು ತಮ್ಮ ಗಮನಕ್ಕೆ ತಂದಿದ್ದಾರೆ. ಈ ರೀತಿ ಪ್ರಯತ್ನಗಳನ್ನು ಮಾಡುವವರು ಪಕ್ಷದಿಂದಲೇ ಹೊರಹೋಗುತ್ತಾರೆ ಎಂದು ಎಚ್ಚರಿಸಿದ ಅವರು, 40 ವರ್ಷ ಪಕ್ಷ ಕಟ್ಟಿ ಬೆಳೆಸಿರುವ ತಾವು ಎಂದೂ ಬಿಜೆಪಿ ತೊರೆಯುವ ಆಲೋಚನೆ ಮಾಡಿಲ್ಲ ಎಂದರು.
`ಬಿಜೆಪಿಯಲ್ಲಿರುವ ಶಾಸಕರೆಲ್ಲರೂ ನನ್ನ ಬೆಂಬಲಿಗರು. ಎಲ್ಲರ ಬೆಂಬಲ ನನಗಿದೆ. ಇದೇ ತಿಂಗಳ 24ರಂದು ನಡೆಯಲಿರುವ ಚಿಂಥನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ಪಕ್ಷದಲ್ಲಿ ನಡೆದಿರುವ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಿದ್ದೇನೆ’ ಎಂದು ಹೇಳಿದರು.
* ಸಿಎಂ ವಿರುದ್ಧ ವ್ಯಂಗ್ಯ : `
ಅದೃಷ್ಟ ಬಲದಿಂದ ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದಾರೆಯೇ ಹೊರತು ನನ್ನಿಂದ ಅವರೇನು ಸಿಎಂ ಆಗಿಲ್ಲ’ ಎಂದು ವ್ಯಂಗ್ಯವಾಡಿದರು. ಯೋಗಾಯೋಗದಿಂದ ತಾವು ಸಿಎಂ ಆಗಿದ್ದೇನೆ ಎಂದು ಸದಾನಂದಗೌಡರು ತುಮಕೂರಿನಲ್ಲಿ ನೀಡಿದ ಹೇಳಿಕೆಗೆ ಯಡಿಯೂರಪ್ಪ ಈ ರೀತಿ ತಿರುಗೇಟು ನೀಡಿದರು.




0 Comments
You can be the first one to leave a comment.