Home » Media Masala »
ಮಟ್ಟು ಸರ್, ನಿಮಗೊಂದು ಬಹಿರಂಗ ಪತ್ರ.
ನಮಸ್ಕಾರಗಳು. ನನ್ನ ಪರಿಚಯ ನಿಮಗೆ ಇಲ್ಲ ಎಂದು ಕಾಣುತ್ತೆ. ಆದರೆ, ನಿಮ್ಮ ಪರಿಚಯ ನನಗೆ 10 ವರ್ಷದ್ದು. ನಿಮ್ಮ ಅಂಕಣಗಳನ್ನು ಓದುತ್ತಾ ಬೆಳೆದವನು ನಾನು. ವಿವೇಕಾನಂದರ ಬಗ್ಗೆ ನೀವು ಬರೆದ ಲೇಖನ ಓದಿದ ಬಳಿಕ, ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಅಷ್ಟರಲ್ಲಿಯೇ ವಿವೇಕಾನಂದರ ಪರ ಎಂದು ಭ್ರಮಿಸಿರುವ, ಭಾವಿಸಿಕೊಂಡಿರುವ ಬಲಪಂಥೀಯ ಮೂಲಭೂತವಾದಿಗಳು ನಿಮ್ಮ ವಿರುದ್ಧ ಕತ್ತಿ ಬೀಸಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ, ತಾವು ಮಟ್ಟು ಪರ(ವಿವೇಕನಂದ ಪರ ಅಲ್ಲ) ಎಂದು ಭ್ರಮಿಸಿರುವ ಎಡಪಂಥೀಯ ಹಾಗೂ ಪ್ರಗತಿಪರ ಮೂಲಭೂತವಾದಿಗಳು ಕೂಡ ತಮ್ಮ ಕತ್ತಿಗೆ ಸಾಣೆ ಹಿಡಿಯಲಾರಂಭಿಸಿದರು.
ಈ ಎರಡೂ ವರ್ಗದ ಮೂಲಭೂತವಾದಿಗಳು ಶಿವಮೊಗ್ಗ ಮತ್ತು ಬೆಂಗಳೂರಿನ ಬೀದಿಗಳಲ್ಲಿ, ನಿಮ್ಮ ಕಚೇರಿ ಎದುರು, ಬ್ಲಾಗ್ಗಳಲ್ಲಿ ಕತ್ತಿ ಬೀಸಾಡುವಾಗ ಮಧ್ಯೆ ಪ್ರವೇಶಿಸಲು ಭಯವಾಯಿತು. ಯಾರದ್ದಾದರೂ ಕತ್ತಿ ನನ್ನನ್ನೇ ತಿವಿದುಬಿಡಬಹುದು ಎಂದು ಸುಮ್ಮನಾದೆ. ಈಟಿ, ಭರ್ಜಿ , ಕತ್ತಿ ಗುರಾಣಿಗಳ ಅಬ್ಬರ ಕಡಿಮೆಯಾಗಿದೆ. ಹಾಗಾಗಿ ಇದು ಸೂಕ್ತ ಸಮಯ ಎಂದು ನನಗನಿಸಿದ್ದ ಕೆಲ ಸಂಗತಿಗಳನ್ನು ಹೇಳಲು ಪ್ರಯತ್ನಿಸುವೆ.
ವಿವೇಕಾನಂದರ ಕುರಿತು ನೀವು ಬರೆದಿರುವ ಬಹಳಷ್ಟು ಸಂಗತಿಗಳು ಹೊಸದೇನಲ್ಲ. ವಿವೇಕಾನಂದರ ಕುರಿತು ಹೆಚ್ಚು ಓದಿಕೊಂಡಿರುವವರಿಗೆ ಎಲ್ಲವೂ ಗೊತ್ತಿರುವ ಸಂಗತಿಗಳೇ ಆಗಿವೆ. 14ನೇ ವಯಸ್ಸಿನಲ್ಲಿಯೇ ನರೇಂದ್ರನಿಗೆ ಉದರವಾಯು ರೋಗ ತಗಲಿ, ಆತ ಅಸ್ಥಿ ತುಂಬಿದ ಚರ್ಮದ ಮೂಟೆಯಂತಾಗಿ ಬಿಟ್ಟಿದ್ದ. ಇದೇ ಕಾರಣಕ್ಕಾಗಿ ಆತನ ತಂದೆ ಊರನ್ನೇ ಬದಲಿಸಿದ. ಬಾಣಸಿಗತನ ಕುಶಲಕಲೆಯಲ್ಲಿ ವಿವೇಕಾನಂದ ಅತಿ ನಿಪುಣ. ಜತೆಯಲ್ಲಿ ಆತ ಹೊಟ್ಟೆಬಾಕನೂ ಆಗಿದ್ದ. ಶಾಲೆಯಲ್ಲಿ ತುಂಟನಾಗಿದ್ದ. ರೋಗಪೀಡಿತನಾಗಿಯೇ ಸತ್ತ ಎಂಬುದು ಗೊತ್ತಿರುವ ವಿಷಯಗಳೇ. ಓದಿನಲ್ಲಿ ಹಿಂದಿದ್ದ ಎಂದು ಬರೆದಿದ್ದೀರಿ. ನಮಗೆಲ್ಲರಿಗೂ ಆತ ಗಣಿತದಲ್ಲಿ ಹಿಂದಿದ್ದ ಎಂಬುದಷ್ಟೇ ಗೊತ್ತಿತ್ತು. ಇಂಟರ್ಮೀಡಿಯೇಟ್, ಪದವಿಯಲ್ಲಿ ಇಂಗ್ಲಿಷ್ನಲ್ಲಿ ಡಲ್ ಆಗಿದ್ದ ಎಂಬುದು ಗೊತ್ತಿರಲಿಲ್ಲ. ಈ ವಿಷಯ ನಿಜಕ್ಕೂ ನನ್ನಂಥ ಡಲ್ ವಿದ್ಯಾರ್ಥಿಗೆ ಸಂತೋಷವಾಯಿತು. ಮಾಂಸ ತಿನ್ನುತ್ತಿದ್ದ, ಪಾರ್ಟಿಗಳಿಗೆ ಹೋಗುತ್ತಿದ್ದ ಎಂಬುದು ನಾವು ಓದಿರುವ ಸಂಗತಿಯೇ. ಈಶ್ವರ ಚಂದ್ರ ವಿದ್ಯಾಸಾಗರ ಅವರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಬಿಟ್ಟ ಎಂದು ಕೇಳಿದ್ದೆವು. ಒಳ್ಳೆಯ ಶಿಕ್ಷಕನಾಗಿಲ್ಲದ ಕಾರಣಕ್ಕೆ ನೌಕರಿ ಬಿಟ್ಟ ಎಂದು ನೀವು ಬರೆದಿದ್ದೀರಿ. ಹೀಗೆ ಗೊತ್ತಿಲ್ಲದ ಸಂಗತಿಗಳ ಬಗ್ಗೆಯೂ ಬರೆದಿದ್ದೀರಿ. ಇವುಗಳಲ್ಲಿ ಅವರ ವ್ಯಕ್ತಿತ್ವಕ್ಕೆ ಊನವಾಗುವಂತಹದ್ದು ಏನೂ ಇಲ್ಲ.
ನೀವು ಬರೆಯದೇ ಇರುವ ಇನ್ನೂ ಕೆಲವು ವಿಷಯಗಳಿವೆ. ವಿವೇಕಾನಂದ ಕುಡಿತ ಶುರು ಮಾಡಿದ್ದಲ್ಲದೇ, ವೇಶ್ಯೆಯರ ಜತೆ ಮಲಗಿದ್ದರಂತೆ. ಅದೊಮ್ಮೊ ಯಾರೋ ಕೇಳಿದಾಗ-`ಸಂಕಟದಿಂದ ಬಳಲುತ್ತಿರುವ ಮನುಷ್ಯನಿಗೆ ಕುಡಿತ ಒಂದಿಷ್ಟು ಸಮಾಧಾನ ತಂದುಕೊಟ್ಟರೆ, ಕುಡಿಯುವುದರಲ್ಲಿ ತಪ್ಪೇನಿದೆ ?’ ಎಂದಿದ್ದರಂತೆ.
ಇನ್ನೂ ಒಂದು ಮಾತಿದೆ. ಅವರು ಚಿಕ್ಕ ವಯಸ್ಸಿಗೆ ಸಾಯಲು, ಹತ್ತಾರು ರೋಗಗಳ ಜತೆಯಲ್ಲಿ ವೀರ್ಯ ಸಂಗ್ರಹವೂ(ಸ್ಖಲನವಾಗದೇ ಉಳಿಸಿಕೊಂಡ) ಕಾರಣವಂತೆ. ವಿವೇಕಾನಂದರ ಬಗ್ಗೆ ಇಂತಹ ಪುರಾವೆ ಇಲ್ಲದ ಮಾತುಗಳನ್ನೂ ಕೇಳಿದ್ದೇವೆ. ಇದೆಲ್ಲದರ ಹೊರತಾಗಿಯೂ ಅವರನ್ನು ಒಪ್ಪಿದ್ದೇವೆ. ಸೋ, ನೀವು ಹೇಳಿದ ಕೆಲ ವಿಷಯಗಳ ಬಗ್ಗೆ ಆಕ್ಷೇಪವಿಲ್ಲ. ಆದರೆ, ಅದನ್ನು ನೀವು ಅನಾವರಣ ಮಾಡಿದ ರೀತಿ ಇದೆಯಲ್ಲ, ಅದು ಬೇಡವಾಗಿತ್ತೇನೋ ಅನಿಸಿತು.
ವಿವೇಕಾನಂದರನ್ನು ಆರಾಧಿಸುತ್ತಿರುವ ಪ್ರಾಮಾಣಿಕ ಮನಸ್ಸುಗಳಿಗೆ, ಅಂಧಾಭಿಮಾನಿಗಳಿಗೆ, ಮೂಲಭೂತವಾದಿಗಳಿಗೂ ಈ ಎಲ್ಲ ಸಂಗತಿಯನ್ನು ರುಚಿಸುವಂತೆಯೇ ನೀವು ಹೇಳಬಹುದಿತ್ತು. ನೀವು ಈ ಹಿಂದೆಲ್ಲಾ ಅನೇಕ ಕಹಿ ಸತ್ಯಗಳನ್ನು, ಸಂಬಂಧಿಸಿದವರಿಗೆ ರುಚಿಸುವಂತೆ, ಚಿಕಿತ್ಸಕ ದೃಷ್ಟಿಯಲ್ಲಿಯೇ ಹೇಳಿದ್ದೀರಿ. ಆದರೆ ಅದೇಕೋ ವಿವೇಕಾನಂದರ ಬಗ್ಗೆ ಬರೆಯುವಾಗ, ನಿಮ್ಮೊಳಗೊಬ್ಬ `ಉಗ್ರ’ ಪ್ರಗತಿಪರ ಲೇಖಕ ಕಾಣಿಸಿಕೊಂಡ ಬಿಟ್ಟ. ಹಾಗಾಗಿ ಭಾಷೆ ಕಟುವಾಯಿತು. ಅಕ್ಷರಗಳ ನಡುವೆ ಅಸಹನೆಯೂ ಸುಳಿಯಿತು. ಒಂದು ಕ್ಷಣ ಬಲಪಂಥೀಯರನ್ನು ವಿರೋಧಿಸುವ ವ್ಯಕ್ತಿಯಾಗಿಬಿಟ್ಟಿರಿ !
ಒಂದು ಹಂತದಲ್ಲಿ ನೀವು ವಿವೇಕಾನಂದರ ದೌರ್ಬಲ್ಯ-ಸಾಮಥ್ರ್ಯಗಳನ್ನು, ಇನ್ಯಾರಿಗೋ ತಿವಿಯಲು ಶಸ್ತ್ರವನ್ನಾಗಿ ಮಾಡಿಕೊಂಡಿರಿ ಎಂಬ ಅನುಮಾನವೂ ಕಾಡಿತು. ಆದರೆ, ಎರಡು ದಿನಗಳ ಬಳಿಕ ಪ್ರಕಟವಾದ ನಿಮ್ಮ ಸಮರ್ಥನಾ ಬರಹ ನಿಜಕ್ಕೂ ಸಮಾಧಾನ ತಂತು. ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಹೇಳುವುದನ್ನು ಮೃದುವಾಗಿ ಹೇಳಬಹುದಿತ್ತು ಎಂದು ಒಪ್ಪಿಕೊಂಡಿದ್ದೀರಿ. ಮೊದಲನೇ ದಿವಸವೇ ಇದನ್ನು ಮಾಡಿದ್ದರೆ, ನಿಮ್ಮ ಬರಹ ಲಂಕೇಶ್ ಅವರ `ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ…’ ಲೇಖನಕ್ಕೆ ಸರಿಸಾಟಿಯಾಗುತ್ತಿತ್ತು ! ಮೋಕ್ಷ ಹುಡುಕುತ್ತಾ ಜನರ ಪ್ರೀತಿಯ ಬಳಿ ಹೋದ ಬುದ್ದನನ್ನು ಲಂಕೇಶ್ ಸಾಮಾನ್ಯ ಮನುಷ್ಯರಂತೆಯೇ ಚಿತ್ರಿಸುತ್ತಾ, ಆತ ಅಸಾಮಾನ್ಯ ಜ್ಞಾನಿಯಾದ ಬಗೆಯನ್ನು ಮನೋಜ್ಞವಾಗಿ ಹೇಳಿದ್ದರು. ವಿವೇಕಾನಂದರ ಬರಹದ ಮೂಲಕ, ನೀವು ವಿವೇಕ ಹೇಳಬೇಕಿತ್ತು. ಬದಲಿಗೆ ಸಿಟ್ಟಿಗೆ ನಿಂತಿರಿ. ನನ್ನ ಪ್ರಕಾರ ನೀವು ಸ್ವಲ್ಪ ಎಡವಿದಿರೇನೋ… ? ರಾಮಕೃಷ ಆಶ್ರಮದವರಿಗೆ, ಬಲಪಂಥೀಯರಿಗೆ ರುಚಿಸುವಂತೆ ಏಕೆ ಹೇಳಬೇಕಿತ್ತು ಎಂದು ನಿಮ್ಮ ಬೆಂಬಲಕ್ಕೆ ನಿಂತಿರುವ ಪ್ರಗತಿಪರ ಮಿತ್ರರು ಪ್ರಶ್ನಿಸಬಹುದು.
ವಾಸ್ತವವಾಗಿ ಇಂತಹ ಪ್ರಶ್ನೆಗೆ ಉತ್ತರವಾಗಲಿ ಎಂದೇ ಈ ಬಹಿರಂಗ ಪತ್ರ ಬರೆಯುತ್ತಿರುವುದು.

ಮಟ್ಟು ಸರ್, ನಿಮಗಿದು ಗೊತ್ತೋ, ಗೊತ್ತಿಲ್ಲವೋ ತಿಳಿಯದು. ನಿಮ್ಮ ಪ್ರತಿ ಸೋಮವಾರದ ಅಂಕಣ ಬರಹವನ್ನು ಓದಿ, ತಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವ ಹಾಗೂ ತಿದ್ದಿಕೊಳ್ಳುವ ಅಸಂಖ್ಯಾತ ಓದುಗರು ಇದ್ದಾರೆ. ನಾ ತಿಳಿದಂತೆ ಪಿ. ಲಂಕೇಶ್ ಅವರ ಟೀಕೆ-ಟಿಪ್ಪಣಿ ಬಳಿಕ, ಇಷ್ಟೊಂದು ವ್ಯಾಪಕತೆ ಪಡೆದ ಇನ್ನೊಂದು ಅಂಕಣ ಬರಹ ಇನ್ನೊಂದಿಲ್ಲ. ಹಾಗೆ ನೋಡಿದರೆ ಲಂಕೇಶ್ ಅಂಕಣವನ್ನು ಬಲಪಂಥೀಯರು ಓದುತ್ತಿರಲಿಲ್ಲ. ಲಂಕೇಶ್ ಕೂಡ ಅವರ ಬಗ್ಗೆ ಸದಾ ವಿಷಕಾರುತ್ತಿದ್ದರು. ಆದರೆ, ನಿಮ್ಮ ಅಂಕಣ ಬರಹವನ್ನು ಎಡ-ಬಲದ ಬೇಧ-ಭಾವವಿಲ್ಲದೇ ಎಲ್ಲರೂ ಓದುತ್ತಾರೆ ಮತ್ತು ಅದನ್ನು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಕಾರಣಗಳು ಹಲವು. ಮೊದಲನೆಯದು-ನಿಮ್ಮ ಬರಹಗಳ ಹಿಂದೆ ವ್ಯಾಪಕ ಓದು, ಅಧ್ಯಯನ ಇರುತ್ತೆ. ಹಾಗಾಗಿ ನೀವು ಬರೆದಿದ್ದೆಲ್ಲವೂ ಸತ್ಯವೇ ಆಗಿರುತ್ತದೆ.
ಎರಡನೆಯದು- ನಿಮ್ಮ ಬರಹಕ್ಕೆ ಸಿದ್ಧಾಂತಗಳ ಸೋಂಕಿಲ್ಲ,ತೀರಾ ಭಾರವೂ ಇಲ್ಲ. ಯಾವುದೇ ವಿಚಾರಧಾರೆಯನ್ನು, ಅಭಿಪ್ರಾಯವನ್ನು, ವ್ಯಕ್ತಿತ್ವವನ್ನು ಓದುಗರ ಮೇಲೆ ಹೇರುವುದಿಲ್ಲ. ಬದಲಿಗೆ ಅದು ಹೇಗಿದೆ ? ಹೇಗಿರಬೇಕಿತ್ತು ? ಏನಾಗಿದೆ ಎಂಬುದನ್ನು, ಅದರ ಶತೃ-ಮಿತ್ರರು ಒಪ್ಪುವಂತೆ ಹೇಳುತ್ತೀರಿ.
ಹಾಗಾಗಿಯೇ ನೀವು ಆಡ್ವಾಣಿ ಅವರಿಂದ ಹಿಡಿದು ಕುಮಾರಸ್ವಾಮಿವರೆಗೆ ಎಲ್ಲರಿಗೂ ಬುದ್ಧಿವಾದ ಹೇಳಬಲ್ಲಿರಿ. ಬಿಜೆಪಿಯ ಆಡ್ವಾಣಿ ಈ ದೇಶದ ಪ್ರಧಾನಿಯಾಗಬೇಕಿತ್ತು ಎಂದು ಬರೆದಾಗ, ಎಡಪಂಥೀಯರೂ ನಿಮ್ಮ ಅಭಿಪ್ರಾಯಕ್ಕೆ ತಲೆದೂಗಿದರು. ಕರ್ಮಠ ಕಾಮ್ರೇಡ್ ಪ್ರಕಾಶ್ ಕಾರಟ್ ದಂಪತಿಗಳ ವೈಚಾರಿಕ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಬರೆದಾಗ ಕೇಶವಕೃಪದ ಗರ್ಭಗುಡಿ ಮಂದಿಯೂ ತಲೆದೂಗಿದರು. ಒಬ್ಬ ಪತ್ರಕರ್ತ ಎಲ್ಲದರ ಬಗ್ಗೆಯೂ, ಎಲ್ಲರ ಬಗ್ಗೆಯೂ ಸಿಹಿ-ಕಹಿಯಾಗಿ ಬರೆದು ಸೈ ಅನಿಸಿಕೊಳ್ಳಬೇಕು ಎಂಬುದಕ್ಕೆ ನೀವೇ ದೊಡ್ಡ ಉದಾಹರಣೆ.
ನಿಜವಾದ ಪತ್ರಕರ್ತ ಅನುಸರಿಸಬೇಕಾದ ಪತ್ರಿಕಾ ನೀತಿ ಇದು. ಡಿವಿಜಿ ಹೇಳಿದ್ದು ಇದನ್ನೇ. ಪತ್ರಕರ್ತ ಸಿದ್ಧಾಂತ ಬೋಧಿಸಬಾರದು. ಅವು ಹೇಗಿರಬೇಕು ಎಂದು ಹೇಳಬೇಕಷ್ಟೆ. ಡಿವಿಜಿ ರೂಪಿಸಿದ ಪತ್ರಿಕಾ ನೀತಿಯನ್ನು ಸದ್ಯ ಜಾರಿಯಲ್ಲಿ ಇಟ್ಟಿರುವವರು ನೀವು. ಹಾಗಾಗಿ ಕರ್ನಾಟಕದ ಎಲ್ಲ ಪತ್ರಕರ್ತರಿಗೂ, ಅಂಕಣ ಬರಹಗಾರರಿಗೂ ನೀವು ಬಹುದೊಡ್ಡ ಆದರ್ಶ. ಈ ಕಾರಣಗಳಿಂದಲೇ ಮಟ್ಟು ಸರ್, ಹಾಗೆ ಬರೆಯಬಾರದಿತ್ತು ಅನಿಸಿದ್ದು !
ಈ ವಾದವನ್ನು ನಿಮ್ಮ ಪರವಾಗಿ ಬಾವುಟ ಹಿಡಿದಿರುವ ಪ್ರಗತಿಪರ ಮಿತ್ರರರು ಒಪ್ಪುವುದಿಲ್ಲ ಎಂದು ಗೊತ್ತು. ಏಕೆಂದರೆ ಅವರೆಲ್ಲರೂ ಒಂದು ವಿಚಾರವನ್ನು ಒಪ್ಪಿಕೊಂಡಿರುವ ಕಾರ್ಯಕರ್ತರು !. ಇದು ಅವರೆಲ್ಲರ ಮಿತಿ. ಇನ್ನೂ ಕೆಲವರಿದ್ದಾರೆ, ಅವರಿಗೆ ಆರ್ಎಸ್ಎಸ್ ವಿರೋಧಿಸುವುದರ ಹಿಂದೆ ವೈಯಕ್ತಿಕ ಲಾಭವಿದೆ, ನಾವು ಪ್ರಗತಿಪರರು, ಜಾತ್ಯತೀತರು ಎಂದು ತೋರಿಸಿಕೊಳ್ಳುವ ಕಪಟತನವಿದೆ.
ವಿವೇಕಾನಂದರ ಕುರಿತು ನಿಮ್ಮ ಬರಹದ ಪರವಾಗಿ ಯಾರೆಲ್ಲಾ ಬ್ಲಾಗ್ಗಳಲ್ಲಿ, ಫೇಸ್ಬುಕ್ಗಳಲ್ಲಿ ಬರೆದಿದ್ದಾರೆ ಎಂಬುದನ್ನು ಸುಮ್ಮನೇ ಕಣ್ಣಾಡಿಸುತ್ತಿದ್ದೆ. ನನ್ನ ಪರಿಚಿತ ಹುಸಿ ಪ್ರಗತಿಪರ ಮಿತ್ರರೂ(ನಿಜದಲ್ಲಿ ಮಹಾನ್ ಜಾತಿವಾದಿಗಳು) ಹಾದು ಹೋದರು. ನಾನು ಬಲ್ಲಂತೆ ಅವರ್ಯಾರು ಇದುವರೆಗೂ ವಿವೇಕನಂದರನ್ನು ಓದಿಲ್ಲ. ಆದರೂ ನಿಮ್ಮ ಪರವಾಗಿ ಲೇಖನಿ ಹಿಡಿದು, ಬಲಪಂಥೀಯರನ್ನು ಕೊಳಕರು, ಹುಳುಕರು ಎಂದೆಲ್ಲಾ ಚೀರಾಡಿದ್ದಾರೆ. ಇವರಿಗೆಲ್ಲಾ ನಿಮ್ಮ ಬಗ್ಗೆ ಪ್ರೀತಿ ಎನ್ನುವುದಕ್ಕಿಂತ, ಆರ್ಎಸ್ಎಸ್ ಬಗ್ಗೆ ಸಿಟ್ಟಿದೆ. ಅಂತೆಯೇ ನಿಮ್ಮ ವಿರುದ್ಧ ಪ್ಲೇ ಕಾರ್ಡ್ ಹಿಡಿದ ಬಹಳಷ್ಟು ಮಂದಿಯೂ ವಿವೇಕಾನಂದರನ್ನು ಓದಿಲ್ಲ. ಇವರಿಗೆಲ್ಲಾ ನಿಮ್ಮ ವಿರುದ್ಧ ಎನ್ನುವುದಕ್ಕಿಂತ, ಪ್ರಜಾವಾಣಿ ಸಂಪಾದಕೀಯ ಧೋರಣೆ ವಿರುದ್ಧ ಸಿಟ್ಟಿದೆ. ಇಂತಹವರನ್ನು ಸರಿಪಡಿಸಲು ಆಗದು. ಈ ಎರಡೂ ವರ್ಗದಲ್ಲೂ ಒಂದಿಷ್ಟು ಮಂದಿ ಪ್ರಾಮಾಣಿಕರು ಇರಬಹುದು. ಹೆಚ್ಚಿನಂಶ ನಕಲಿ ಜನ, ಕೊಳಕು ಜನ ತುಂಬಿಕೊಂಡಿದ್ದಾರೆ. ಅಂತಹವರ ಬಗ್ಗೆ ಎಚ್ಚರಿಕೆ ಇರಲಿ.
ಯಾವುದೇ ವಿಷಯವನ್ನು ಅತಿರೇಕದಲ್ಲಿ ಸ್ವೀಕರಿಸಿ, ಎರಡು ಧ್ರುವದಲ್ಲಿ ನಿಂತು ಕಾದಾಡುವವರು ಇರುವಂತೆಯೇ, ಮಧ್ಯದಲ್ಲಿ ನಿಂತು ವಿಷಯವನ್ನು ಗ್ರಹಿಸುವವರರು ಇರುತ್ತಾರೆ. ಹಾಗೆ ನೋಡಿದರೆ ಇಂತಹವರ ಸಂಖ್ಯೆ ಹೆಚ್ಚಿರುತ್ತೆ. ವೈಯಕ್ತಿಕವಾಗಿ ನಾನು ಈ ವರ್ಗಕ್ಕೆ ಸೇರಿದವನು. ನಿಮ್ಮ ಅಭಿಮಾನಿಗಳು ಹೆಚ್ಚಿರುವುದು ಕೂಡ ಈ ವರ್ಗದಲ್ಲಿಯೇ.
ಹಾಗಾಗಿ ನೀವು ಯಾವುದೇ ಅತಿರೇಕಿಗಳ ಪರವಾಗಿ ಇಲ್ಲವೇ ವಿರುದ್ಧವಾಗಿ ನಿಲ್ಲಬೇಡಿ. ಅತಿರೇಕಿಗಳೆಂಬ ಉಭಯ ವರ್ಗದ ಅವಿವೇಕಿಗಳನ್ನು ಮರೆತು, ನಮಗಾಗಿ ಬರೆಯಿರಿ. ವಿವೇಕಾನಂದರು ಹಿಂದೂ ಧರ್ಮದ ಅನಿಷ್ಟಗಳನ್ನು, ಕೊಳಕುಗಳನ್ನು ಹೇಳುತ್ತಲೇ, ಆ ಧರ್ಮದ ವೀರ ಸನ್ಯಾಸಿಯಾಗಿ, ಹಿಂದೂ ಧರ್ಮದ ವೇದಾಂತವನ್ನೂ ಜಗತ್ತಿಗೆ ಸಾರಿದರು. ನಮಗೆ ಬೇಕಿರುವುದು ಇಂತಹ ವಿವೇಕಾನಂದ. ನೀವು ಕೂಡ ಅದೇ ವಿವೇಕಾನಂದರನ್ನೇ ಪ್ರತಿಪಾದಿಸಿದ್ದೀರಿ. ಆದರೆ ಈಗ ನಿಮ್ಮ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಹಿಂದೂ ಧರ್ಮದ ಶ್ರೇಷ್ಠತೆ ಸಾರಿದ ವಿವೇಕಾನಂದ ಮಾತ್ರ ಬೇಕು. ಅಂತೆಯೇ ನಿಮ್ಮ ಪರ ನಿಂತಿರುವ ಬಹಳಷ್ಟು ಮಂದಿಗೆ ಹಿಂದೂ ಧರ್ಮದ ಅನಿಷ್ಟ-ಕೊಳಕುಗಳನ್ನು ಹೇಳಿದ ವಿವೇಕಾನಂದ ಬೇಕು. ನಮಗೆ ಈ ಇಬ್ಬರೂ ಬೇಡ.
ಸರ್ ಇನ್ನೊಂದು ವಿಷಯ.
ಗಾಂಧೀಜಿ ಬಗ್ಗೆ ಕೆಲವರು ಲಘುವಾಗಿ, ಕೀಳಾಗಿ ಬರೆದ ಸಂದರ್ಭ. ಪ್ರಾಮಾಣಿಕ ಗಾಂಧಿವಾದಿಗಳು ಆ ಲೇಖನದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಆಗ ನನ್ನೊಂದಿಗೆ ಈ ವಿಷಯ ಕುರಿತು ಚರ್ಚಿಸಿದ ಗಾಂಧಿವಾದಿ ಹೇಳಿದ್ದು:
ಯಾವುದೇ ಮಹಾನ್ ವ್ಯಕ್ತಿತ್ವಗಳ ಖಾಸಗಿ ಬದುಕಿನ ದೌರ್ಬಲ್ಯಗಳ ಕುರಿತು ಆತನ ಸಮಕಾಲೀನ ಸಮಾಜ ಹೆಚ್ಚು ಚರ್ಚಿಸುತ್ತದೆ. ಆದರೆ ಆತನ ಜೀವಿತದ ಅವಧಿ ಬಳಿಕದ ಕಾಲಘಟ್ಟ, ವ್ಯಕ್ತಿಯ ಗುಣಗಳನ್ನಷ್ಟೇ ಗ್ರಹಿಸುತ್ತದೆ. ಗಾಂಧೀಜಿ ಒಳ್ಳೆ ಅಪ್ಪನಲ್ಲ, ಒಳ್ಳೆ ಗಂಡನಲ್ಲ ಎಂಬುದನ್ನು ಮುಖ್ಯವಾಗಿ ಚರ್ಚಿಸಬೇಕು ಏಕೆ ? ಪ್ರಮುಖವಾಗಿ ಚರ್ಚಿಸಲು, ಅವರನ್ನು ಅರಿಯಲು ಸಾಕಷ್ಟು ಸಂಗತಿಗಳು ಇವೆ. ನನಗೂ ಒಮ್ಮೊಮ್ಮೆ ಇದು, ಹೌದಲ್ಲವೇ ಅನಿಸುತ್ತದೆ.
- ಪೂರ್ಣಚಂದ್ರ
——————-




4 Comments
ಉತ್ತಮ ಪತ್ರ…….. ಅತ್ಯುತ್ತಮ ಸಲಹೆ ನೀಡಿದ್ದೀರಿ..
Is really good nice article. I apple to all my m’lore Intellectual friends, to read this article. common people does nt want to Identify with right or left. Life is more than that
-kallesh m’lore
nice article, but still have one doubt..? r u supproting da mattu article or opposing ..? not clear in ur writing..plz clarify me
your comment is very mature..loved it..and i know Mattu personally,he is really true to him and a committed one..