ಬ್ಲೂಜೆಪಿ ಪ್ರಕರಣದಲ್ಲಿ ಯಾಮಾರಿದರೆ ಪಾಲೇಮಾರ್….?
ಮಂಗಳೂರು : ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವಂತೆ ನನಗೆ ಯಾರೂ ಒತ್ತಡ ಹಾಕಿರಲಿಲ್ಲ. ಸ್ವತಃ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ಆದ್ದರಿಂದ ಪಾಲಿಕೆ ಸದಸ್ಯರು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಶಾಸಕ ಜೆ.ಕೃಷ್ಣ ಪಾಲೆಮಾರ್ ಸಂತೈಸಿದ್ದಾರೆ.
ಸದನದಲ್ಲಿನ ಸೆಕ್ಸ್ ಮೊಬೈಲ್ ಪ್ರಕರಣದಲ್ಲಿ ನಾನು ಭಾಗಿಯಲ್ಲ. ಆದರೂ ಸಹ ಮಾಧ್ಯಮಗಳಲ್ಲಿ `ಮೂವರು ಸಚಿವರು’ ಎಂದು ಬಿಂಬಿಸಲಾಗುತ್ತಿದೆ. ಘಟನೆ ನಡೆದುದು ಮನಸ್ಸಿಗೆ ಬಹಳ ನೋವಾಗಿದೆ. ಇಬ್ಬರು ವೀಡಿಯೊ ವೀಕ್ಷಿಸುತ್ತಿದ್ದರೂ ಮೂವರು ಎಂಬಂತೆ ಒಂದೇ ತಕ್ಕಡಿಯಲ್ಲಿ ತೂಗುತ್ತಿರುವುದು ಇನ್ನಷ್ಟು ನೋವಿಗೆ ಕಾರಣವಾಗಿದೆ ಎಂದು ಪಾಲೇಮಾರ್ ದುಖಃ ತೋಡಿಕೊಂಡಿದ್ದಾರೆ.
ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂಬ ಏಕೈಕ ಉದ್ದೇಶದಿಂದ ರಾಜೀನಾಮೆ ಕೊಟ್ಟಿದ್ದೇನೆ. ಈ ಕಾರಣಕ್ಕೆ ನನ್ನ ಹೆಸರು ಕೇಳಿ ಬಂದ ತಕ್ಷಣ ರಾಜೀನಾಮೆಗೆ ನಿರ್ಧರಿಸಿದ್ದೆ. ಒಂದು ವೇಳೆ ರಾಜೀನಾಮೆ ಕೊಡದೇ ಇದ್ದರೂ ಕೆಲವರು ದೊಡ್ಡ ರಾದ್ಧಾಂತ ಮಾಡುತ್ತಿದ್ದರು. ಈಗ ಸಚಿವ ಸ್ಥಾನ ಬಿಟ್ಟುಕೊಟ್ಟು ತನಿಖೆಗೆ ಸಹಕಾರ ನೀಡುತ್ತಿದ್ದರೂ ಅಪಪ್ರಚಾರ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
* ಸವದಿಗೆ ಯಾವ ಕಾರಣವಿತ್ತೋ..?
ಮೊಬೈಲ್ ವೀಕ್ಷಿಸಿದ, ವೀಡಿಯೊ ಕ್ಲಿಪ್ಪಿಂಗ್ ಫಾರ್ವಡ್ ಮಾಡಿದ ಬಗ್ಗೆ ಯಾವ ದಾಖಲೆಯೂ ಇಲ್ಲ. ಆ ರೀತಿ ನಾನು ಮಾಡಲೂ ಇಲ್ಲ. ಆದರೆ, ಯಾವ ಕಾರಣಕ್ಕೆ ಲಕ್ಷ್ಮಣ ಸವದಿ ನನ್ನ ಹೆಸರು ಪ್ರಸ್ತಾಪ ಮಾಡಿದರು ಎಂಬುದು ನನಗೆ ಗೊತ್ತಿಲ್ಲ. ಅದು ಕೂಡಾ ತನಿಖೆ ಆಗಲಿದೆ. ತನಿಖೆ ಬಳಿಕ ಸತ್ಯ ಬೆಳಕಿಗೆ ಬರಲಿದೆ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಲಿಕೆ ಸದಸ್ಯರು ಸೇರಿದಂತೆ ನನ್ನ ಪರವಾಗಿ ಯಾರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ನಾನೇ ರಾಜೀನಾಮೆ ಸಲ್ಲಿಸಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರಿಗೆ ನೋವಾಗುವುದು ಸಹಜ. ಎಲ್ಲದಕ್ಕೂ ತನಿಖೆಯೇ ಉತ್ತರ ನೀಡಲಿದೆ. ಆದ್ದರಿಂದ ಎಲ್ಲರೂ ಸಂಯಮದಿಂದ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.




0 Comments
You can be the first one to leave a comment.