Home » Uncategorized »
ನ್ಯಾಯ ದೊರಕಿಸಿ ಕೊಡಿ ; ಪತಿ ವಿರುದ್ಧ ಪತ್ನಿ ದೂರು…!
ಮಂಡ್ಯ: ನಂಗೆ ಮದ್ವೆ ಆಗಿ 13 ವರ್ಷ ಆಗಿದೆ. ಒಬ್ಳು ಮಗ್ಳು ಇದ್ದಾಳೆ. ಈಗಿರ್ವಾಗ ನನ್ ಗಂಡ ಇನ್ನೊಂದ್ ಮದ್ವೆ ಮಾಡ್ಕಂಡನ್ವೆ. ಪೋಲಿಸ್ನೋರ್ಗೆ ದೂರ್ ಕೊಟ್ರು ತಕಂಡಿಲ್ಲ. ತನ್ಕೆ ಮಾಡ್ತೀವಿ ಹೋಗಿ ಅಂತ ನಮ್ಮನ್ನ ಕಳಸವ್ರೆ. ನಂಗೆ ನ್ಯಾಯ ಬೇಕು…
ಇದು ಹಾಸನ ಜಿಲ್ಲೆ ಅರಕಲಗೂಡು ತಾಲೂಕು ನೆಹರುನಗರದ ನಿವಾಸಿ ಭಾಗ್ಯ ಅವಲತ್ತುಕೊಂಡ ಪರಿ. ಆಕೆಯ ಸಮಸ್ಯೆಯನ್ನು ಆಕೆಯಿಂದಲೇ ಕೇಳಿ….
ನೆಹರು ನಗರದಲ್ಲಿ ನಾನು, ನನ್ನ ಗಂಡ ತಮ್ಮಯ್ಯ ಹಾಗೂ ಮಗಳು ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದೆವು. ಸಣ್ಣ ಪುಟ್ಟ ವಿಚಾರಗಳಿಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ, ಈ ನಡುವೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಬಿ.ಬಿ. ಕಾವಲು ಗ್ರಾಮದಲ್ಲಿ ಜ.29ರಂದು ಮತ್ತೊಂದು ಯುವತಿಯನ್ನು ನನ್ನ ಪತಿ ಮದುವೆ ಮಾಡಿಕೊಂಡಿದ್ದಾರೆ.
ಈ ವಿಷಯ ತಿಳಿದು ಬಿ.ಬಿ. ಕಾವಲು ಗ್ರಾಮಕ್ಕೆ ಹೋದ ನನಗೆ, ಪತಿ ತಮ್ಮಯ್ಯ ಹಾಗೂ ಇತರರು ಪ್ರಾಣ ಬೆದರಿಕೆ ಹಾಕಿ ಕೆಲವು ಪತ್ರಗಳಿಗೆ ನನ್ನಿಂದ ಸಹಿ ಹಾಕಿಕೊಂಡರು. ಇದಕ್ಕೆಲ್ಲಾ ನನ್ನ ಗಂಡ, ಅತ್ತೆ, ಭಾವ ಮತ್ತು ಅತ್ತಿಗೆಯರು ಕಾರಣ. ಘಟನೆ ಬಳಿಕ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ದೂರು ಹೋದ ತಮ್ಮಿಂದ ಪೊಲೀಸರು ದೂರು ಸ್ವೀಕರಿಸಲಿಲ್ಲ. ಪರಿಶೀಲಿಸಿ ಕ್ರಮ ವಹಿಸುತ್ತೇವೆ ಎಂದಷ್ಟೇ ಹೇಳಿದರು ಎಂದು ಅವರು ಆರೋಪಿಸಿದ್ದಾರೆ.
ಮಾದಿಗ ಮೀಸಲು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಮಾನವೀಯ ಮೌಲ್ಯಗಳು ಕುಸಿದಿವೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಭಾಗ್ಯಳ ಪತಿ ತಮ್ಮಯ್ಯ ಮೊದಲ ಪತ್ನಿ ಬದುಕಿರುವಾಗಲೇ ಮತ್ತೊಂದು ಮದುವೆ ಆಗಿರುವ ಪ್ರಕರಣ ಸಾಕ್ಷಿ ಎಂದು ದೂರಿದರು.
ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ಹಾಗೂ ಸಿಪಿಐ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠರು ಕ್ರಮ ಜರುಗಿಸಬೇಕು ಎಂದರು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಮಿತಿ ಸದಸ್ಯ ಟಿ.ಆರ್. ವಿಜಯಕುಮಾರ್, ಭಾಗ್ಯಳ ಅತ್ತೆ ಗಿಡ್ಡಮ್ಮ ಹಾಜರಿದ್ದರು.
——————–




0 Comments
You can be the first one to leave a comment.