ನೋ ಎಕ್ಸ್ ಪೆರಿಮೆಂಟ್ಸ್ ಪ್ಲೀಸ್ ; darshan
ಸಾಮಾನ್ಯವಾಗಿ ಯಾವುದೇ ಒಬ್ಬ ನಟ ತನ್ನ ಚಿತ್ರ ಅತ್ಯುತ್ತಮವಾಗಿ ಜನಮನ್ನಣೆಗಳಿಸಿದರೆ ಆತ ತನ್ನ ಮುಂದಿನ ಚಿತ್ರದಲ್ಲಿ ಅಭಿಮಾನಿಗಳಿಗೆ ಏನನ್ನಾದರೂ ಹೊಸತು ನೀಡಬೇಕು ಎಂಬ ಬಯಕೆ ಮೂಡುತ್ತದೆ. ಆದರೆ ಏಕೋಏನೋ ನಟ ದರ್ಶನ್ ( darshan ) ತಮ್ಮ ಸಾರಥಿ ಹಾಗೂ ಚಿಂಗಾರಿ ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರೂ, ಹೊಸತನಕ್ಕೆ ಮಿಡಿಯುವ ಮನಸ್ಸು ಮಾಡುತ್ತಿಲ್ಲ. ಹಾಗೆಂದು ದರ್ಶನ್ ಹೊಸ ಪ್ರಯೋಗಗಳಿಗೆ ಒಗ್ಗುವುದಿಲ್ಲ ಎಂದೇನೂ ಅಲ್ಲ. ದರ್ಶನ್ ಕೂಡ ಹಿಂದೆ ನನ್ನ ಪ್ರೀತಿಯ ರಾಮು ಸೇರಿದಂತೆ ಅನೇಕ ಹೊಸ ಪ್ರಯೋಗಗಳನ್ನು ಮಾಡಿ, ಕೈಸುಟ್ಟುಕೊಂಡಿದ್ದಾರೆ. ಅದರ ಫಲವೇನು ಎಂಬಂತೆ ಇದೀಗ ಸಿದ್ಧಸೂತ್ರಗಳಿಗೆ ಕಟ್ಟುಬಿದ್ದು, ಜನರಿಗೆ ಇಷ್ಟವಾಗುವ ಮಾಸ್ ಕಥೆಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಚಿಂಗಾರಿ ಚಿತ್ರದ ಭರ್ಜರಿ ಓಪನಿಂಗ್ ನಂತರ ಮಾಧ್ಯಮದ ಎದುರು ಕಾಣಿಸಿಕೊಂಡ darshan ಚಿಂಗಾರಿ ಇಂಗ್ಲಿಷ್ನ ಟೇಕನ್ ಚಿತ್ರದ ಪಡಿಯಚ್ಚು ಆದರೆ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ ಎಂದು ನೇರವಾಗಿ ಹೇಳಿಕೊಂಡರು.
ದರ್ಶನ್ ಅವರ ಬಹುನಿರೀಕ್ಷಿತ `ಸಂಗೊಳ್ಳಿ ರಾಯಣ್ಣ’ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ಆನಂತರ ವಿರಾಟ್ ತೆರೆಕಾಣಲಿದೆ. ಜೊತೆಗೆ ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ `ಬುಲ್ ಬುಲ್ ‘ಗೆ ಸಿದ್ಧತೆ ನಡೆದಿದೆ. ಹುಟ್ಟುಹಬ್ಬದ ದಿನ ಚಿತ್ರದ ಮುಹೂರ್ತ ನಡೆದಿದೆ. ಆದರೆ ಆ ಚಿತ್ರ ಕೂಡ ಲವ್ ಸ್ಟೋರಿಯಂತೆ ಅದು ತೆಲುಗಿನ ಡಾರ್ಲಿಂಗ್ ಚಿತ್ರದ ರಿಮೇಕ್. ಸದ್ಯ ಯಾವುದೇ ಹೊಸ ಪ್ರಯೋಗಗಳಿಗೆ ಹೋಗುವುದಿಲ್ಲ. ಈಗ ಏನು ಯಶಸ್ಸು ಸಿಗುತ್ತಿದೆಯೋ ಅದೇ ವಸ್ತುಗಳನ್ನು ಆಯ್ದುಕೊಂಡು ಸಿನಿಮಾ ಮಾಡುತ್ತೇನೆ ಎಂದರು ದರ್ಶನ್.
ತಮ್ಮ ಚಿಂಗಾರಿ 190 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವುದಕ್ಕೆ ಖುಷಿ ವ್ಯಕ್ತಪಡಿಸಿದ ಅವರು ಈಗಿರುವುದನ್ನೇ ಮೇಂಟೇನ್ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳುತ್ತ ಮಾತಿಗೆ ವಿರಾಮ ಹಾಕಿದರು. ಸಿಸಿಎಲ್ ಫೈನಲ್ ಪಂದ್ಯದಲ್ಲಿ ಸೋತುಬಂದಿದ್ದ ಅವರು ಮ್ಯಾಚ್ ಬಗ್ಗೆ ಮಾತ್ರ ತುಟಿ ಬಿಚ್ಚಲಿಲ್ಲ.




0 Comments
You can be the first one to leave a comment.