ದಂಡುಪಾಳ್ಯಕ್ಕೆ ನಶೆ ಏರಿಸಿದ ನಿಶಾ
ಅದು ದಂಡುಪಾಳ್ಯ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಕಾರ್ಯಕ್ರಮ 7 ಗಂಟೆಗೆ ನಿಗದಿಯಾಗಿತ್ತಾದರೂ, 8 ಗಂಟೆಯಾದರೂ ಆರಂಭವಾಗುವ ಲಕ್ಷಣಗಳು ಕಾಣುತ್ತಿರಲಿಲ್ಲ. ಚಿತ್ರ ತಂಡದ ಎಲ್ಲ ಪ್ರಮುಖರು ಅಲ್ಲಿದ್ದರಾದರೂ ಎಲ್ಲರೂ ಯಾರೋ ಪ್ರಮುಖ ವ್ಯಕ್ತಿಗೆ ಕಾಯುತ್ತಿದ್ದಂತೆ ಇತ್ತು. ಅಷ್ಟರಲ್ಲೇ ಬ್ಲಾಕ್ ಮಿನಿ ಧರಿಸಿ ಹೈಹೀಲ್ಡ್ ಶೂಹಾಕಿಕೊಂಡ ತಾರೆ ನಿಶಾ ಕೊಠಾರಿಯಾ ಹೆಜ್ಜೆ ಸಪ್ಪಳ ಕೇಳುತ್ತಿದ್ದಂತೆಯೇ ಇಡೀ ಚಿತ್ರ ತಂಡ ಅಲರ್ಟ್ ಆಯಿತು. ಏಕ್ದಮ್ ನಶೆ ಏರಿದಂತೆ ಕಾರ್ಯಕ್ರಮ ಶುರುವಾಗಿದ್ದು, ಮುಗಿದಿದ್ದು ಗೊತ್ತೇ ಆಗಲಿಲ್ಲ. ಕ್ಯಾಮರಾ ಬೆಳಕಿನಲ್ಲಿ ನಿಶ ಕಂಗೊಳಿಸುತ್ತಿದ್ದಳು.
ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವಾದ್ದರಿಂದ ಮೊದಲಿಗೆ ಮೈಕ್ಹಿಡಿದ ಸಂಗೀತ ನಿರ್ದೇಶಕ ಅರ್ಜುನ್ ಜಿನ್ಯ ಸಾಮಾನ್ಯವಾಗಿ ಈ ರೀತಿಯ ಚಿತ್ರಗಳಿಗೆ ಹಾಡುಗಳು ಇರುವುದಿಲ್ಲ. ಆದರೆ ಇದೊಂದು ವಿಶೇಷ ಪ್ರಯತ್ನ. ಇಲ್ಲಿ ಮೆಲೋಡಿ ಸಾಂಗ್ಗಳು ಇವೆ. ಕನ್ನಡದವರೂ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ತೋರಿಸುತ್ತಿದ್ದೇವೆ. ಈ ಚಿತ್ರಕ್ಕೆ ಖಂಡಿತ ನ್ಯಾಷನಲ್ ಅವಾರ್ಡ್ ಸಿಗುತ್ತೆ ಅಂತ ತಾವೆ ಸರ್ಟಿಫಿಕೇಟ್ ಕೊಟ್ಟುಕೊಂಡರು.
ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾ ಗಾಂಧಿ ನಂದು ಒಂತರಾ ಸ್ಪೆಷಲ್ ಪಾತ್ರ ತುಂಬ ಚಾಲೆಂಜಿಂಗ್ ಆಗಿತ್ತು. ಹುಡುಗರ ಜತೆ ಸೇರಿ ಸ್ಲ್ಯಾಂಗ್ ಭಾಷೆಯಲ್ಲಿ ಮಾತನಾಡುವುದು ಕಲಿತೆ. ಚಿತ್ರದಲ್ಲಿ ಪೂಜಾ ಗಾಂಧಿಯ ಇನ್ನೊಂದು ಮುಖವನ್ನು ನೋಡಲಿದ್ದೀರಿ. ಸಾಮಾನ್ಯವಾಗಿ ಇಂತಹ ಪಾತ್ರಗಳಿಗೆ ನುರಿತ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಆದರೆ ನನಗೆ ಈ ಕಳ್ಳಿ ಪಾತ್ರ ಸಿಕ್ಕಿರುವುದು ಜೀವನದಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಅಂದ್ರು.
ಚಿತ್ರದ ಬಗ್ಗೆ ನಿಮರ್ಾಪಕ ಪ್ರಶಾಂತ್ ಮತ್ತು ಗಿರೀಶ್, ನಟರಾದ ರಘು ಮುಖರ್ಜಿ, ಕರಿಸುಬ್ಬು, ಶ್ರೀನಿವಾಸ ಮೂರ್ತಿ ಅವರುಗಳು ಮಾತನಾಡಿದರು. ಬೆಡಗಿ ನಿಶಾ ತನ್ನದು ಹೊಸದಾಗಿ ಮದುವೆಯಾದ ಮಹಿಳೆಯ ಪಾತ್ರ ಎಂದು ನಾಚಿ ನೀರಾದರು.
ಕೊನೆಯದಾಗಿ ಮಾತಿಗಿಳಿದ ಶ್ರೀನಿವಾಸ್ ರಾಜು, ಮೆಲೋಡಿ ಸಾಂಗ್ಸ್ ಇದೆ. ಚಿತ್ರದ ಹಿಂದಿನ ಚಾಲಕ ಶಕ್ತಿ ನಾರಾಯಣ ಬಾಬು ಅವರು. ಚಿತ್ರದಲ್ಲಿ ಯಾವುದೇ ಮೆಸೇಜ್ ಇಲ್ಲ. ಕ್ರಿಮಿನಲ್ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಪ್ರಮುಖ 35 ನಟ, ನಟಿಯರು ಚಿತ್ರದಲ್ಲಿ ನಟಿಸಿದ್ದಾರೆ. ಪೂಜಾ ಗಾಂಧಿ ಸ್ವತಃ ವಾಯ್ಸ್ ಡಬ್ ಮಾಡಿದ್ದಾರೆ ಎಂದರು. ನಟ ಯತಿರಾಜ್ ಸಿನಿಮಾದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೂ ಹೊಸ ಲೈಫ್ ಸಿಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು.
ಅಂದಹಾಗೆ ದಂಡುಪಾಳ್ಯ ಗ್ಯಾಂಗ್ಅನ್ನು ಹಿಡಿದ ಪೊಲೀಸ್ ಅಧಿಕಾರಿ ಚಲಪತಿ ತಾವು ಹಗಲು ರಾತ್ರಿ ಹರಿಸಿದ ಬೆವರನ್ನು ನೆನಪಿಸಿಕೊಂಡರು. ಜತೆಗೆ ಒಂದೇ ಗ್ಯಾಂಗ್ ವಿರುದ್ಧ 16 ಕೇಸ್ ದಾಖಲಿಸಲಾಗಿತ್ತು. ಇದೀಗ ಎಲ್ಲ ಕೇಸ್ಗಳಲ್ಲೂ ಎಲ್ಲಾ ಆರೋಪಿಗಳಿಗೂ ಗಲ್ಲುಶಿಕ್ಷೆಯಾಗಿದೆ. ಇದು ಗಿನ್ನಿಸ್ ರೆಕಾರ್ಡ್ ಗೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
* ದಂಡುಪಾಳ್ಯ 2
ದಂಡುಪಾಳ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿರುವಂತೆಯೇ, ದಂಡುಪಾಳ್ಯ 2 ನಿರ್ಮಾಣಕ್ಕೆ ಸಿದ್ಧತೆ ನಡೆದಿದೆಯೇ? ಹೌದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು. ದಂಡುಪಾಳ್ಯ ಚಿತ್ರ ನಿರ್ಮಾಣಕ್ಕೆ ಹೊರಟಾಗ ನಮಗೆ ಇಷ್ಟೊಂದು ಮಾಹಿತಿ ಸಿಗುತ್ತದೆ ಎಂದುಕೊಂಡಿರಲಿಲ್ಲ ಇದೀಗ ಕಲೆಹಾಕಿರುವ ಮಾಹಿತಿ ನೋಡದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಈ ಚಿತ್ರದಲ್ಲಿ ಕೇವಲ ಶೇಕಡ 2ರಷ್ಟು ಮಾಹಿತಿ ಮಾತ್ರ ಬಳಸಿದ್ದೇವೆ. ಇನ್ನುಳಿದ ಮಾಹಿತಿಯನ್ನು ಎರಡನೇ ಭಾಗದಲ್ಲಿ ತರುವ ಪ್ರಯತ್ನ ಈಗಾಗಲೇ ನಡೆದಿದೆ ಎಂದರು ರಾಜು.





0 Comments
You can be the first one to leave a comment.