ತಾಯಿ ಚಾಮುಂಡಿ ದರ್ಶನ ಪಡೆದ ಕಿಚ್ಚ ಸುದೀಪ್
ಮೈಸೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಗೆಲವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ, ನಟ ಸುದೀಪ್ ಮಂಗಳವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಹೀರೋಸ್ ವಿರುದ್ಧ ಕರ್ನಾಟಕ ತಂಡ ಜಯಸಾಧಿಸಿತ್ತು. ತೀವ್ರ್ರ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಎರಡು ತಂಡದವರು ಉತ್ಸಾಹದಿಂದಲೇ ಆಟವಾಡಿದರು. ಒಂದು ಹಂತದಲ್ಲಿ ತಂಡದ ನಾಯಕ ಸುದೀಪ್ ಕ್ಯಾಚ್ ಡ್ರಾಪ್ ಮಾಡುವ ಮೂಲಕ ಮುಜಗರಕ್ಕೆ ಒಳಗಾಗಿದ್ದರು. ಸುದೀಪ್ ನೀಡಿದ ಈ ಜೀವದಾನದಿಂದ ಮುಂಬೈತಂಡ ಗೆಲವು ಸಾಧಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದ್ರೆ ಅದೃಷ್ಠ ಕರ್ನಾಟಕದ ಹುಡುಗ್ರರ ಕೈಬಿಡಲಿಲ್ಲ. 13 ರನ್ನುಗಳ ಭರ್ಜರಿ ಗೆಲುವಿನ ಮೂಲಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ಹಂತ ತಲುಪಿತು. ಈ ಖುಷಿಯ ಹಿನ್ನೆಲೆಯಲ್ಲಿ ನಾಯಕನಟ ಸುದೀಪ್,ಸಹ ಆಟಗಾರ, ಬೌಲರ್ ಪ್ರದೀಪ್ ಹಾಗೂ ತಂಡ ಕೋಚ್ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು.
ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೈಸೂರಿಗೆ ಆಗಮಿಸಿದ ನಟ ಸುದೀಪ್, ಮೈಸೂರು ಪಾಲಿಕೆ ಉಪ ಮೇಯರ್ ರವಿಕುಮಾರ್ ಜತೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ 1 ಗಂಟೆಗೆ ಬೆಟ್ಟದಿಂದ ವಾಪಸ್ಸು ಬೆಂಗಳೂರಿಗೆ ಹಿಂದಿರುಗಿದರು.




0 Comments
You can be the first one to leave a comment.