ಚಿತ್ರೋದ್ಯಮ ಬಂದ್ 23ಕ್ಕೆ
ಬೆಂಗಳೂರು : ಕೇಂದ್ರ ಸರಕಾರದ ಸೇವಾ ತೆರಿಗೆ ನೀತಿ ವಿರೋಧಿಸಿ, ದೇಶಾದ್ಯಂತ ಎಲ್ಲ ಭಾಷೆಯ ಚಲನಚಿತ್ರೋದ್ಯಮಗಳು ಫೆ.23ರಂದು `ಸಾಂಕೇತಿಕವಾಗಿ ಒಂದು ದಿನದ ಬಂದ್’ ಆಚರಿಸಲು ತೀರ್ಮಾನಿಸಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೆಂಬಲ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಚಲನಚಿತ್ರ ಚಿತ್ರೀಕರಣ ಹಾಗೂ ಪ್ರದರ್ಶನ ಸೇರಿದಂತೆ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಂದ್ ಆಚರಣೆಗೆ ಎಲ್ಲ ಸಿನಿಮಾ ಕಲಾವಿದರು, ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಕಾರ್ಮಿಕರು ಸಹಕರಿಸಬೇಕೆಂದು ಮಂಡಳಿ ಕೋರಿದೆ.
ಕನ್ನಡ ಚಲನಚಿತ್ರೋದ್ಯಮವು ಹಲವಾರು ಕಾರಣಗಳಿಂದ ಕುಂಠಿತಗೊಂಡಿದ್ದು, ಈಗಾಗಲೇ ಸರಕಾರಕ್ಕೆ ಮನರಂಜನಾ ತೆರಿಗೆ ಸೇರಿದಂತೆ, ಹಲವಾರು ರೀತಿಯ ತೆರಿಗೆಗಳನ್ನು ಪಾವತಿ ಮಾಡುತ್ತಿದೆ. ಇವುಗಳನ್ನು ಭರಿಸುವುದೇ ದುಸ್ತರವಾಗಿರುವಾಗ ಕೇಂದ್ರ ಸರಕಾರ ಸೇವಾ ತೆರಿಗೆಯನ್ನು ವಿಧಿಸಿ ಚಿತ್ರರಂಗಕ್ಕೆ ಮತ್ತಷ್ಟು ಹೊರೆ ಮಾಡಿದೆ ಎಂದು ಮಂಡಳಿ ಖಂಡಿಸಿದೆ.
ಭಾರತೀಯ ಚಲನಚಿತ್ರ ಒಕ್ಕೂಟ (ಎಫ್ಎಫ್ಐ), ಫೆ.21ರಂದು ಹೊಸದಿಲ್ಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಿದ್ದು, ಅಲ್ಲಿ ಸೇವಾ ತೆರಿಗೆ ಕುರಿತು ಚರ್ಚಿಸಿ, ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಇನ್ನಿತರ ಅಧಿಕಾರಿಗಳನ್ನು ಭೇಟಿ ಮಾಡಿ, ಈ ತೆರಿಗೆಯಿಂದ ಉದ್ಯಮಕ್ಕೆ ಆಗುವ ಅನಾನುಕೂಲಗಳನ್ನು ತಿಳಿಸುವ ಮನವಿ ಪತ್ರವನ್ನು ಸಲ್ಲಿಸಲು ತೀರ್ಮಾನಿಸಿದೆ.




0 Comments
You can be the first one to leave a comment.