ಚಾರಿಟಬಲ್ ಟ್ರಸ್ಟ್ ಗೆ ಶೂ ಕೊಡುಗೆ ; ಹೃದಯ ಶ್ರೀಮಂತಿಕೆ ಮೆರೆದ ಮಿಲ್ಕಾ ಸಿಂಗ್
ಮುಂಬೈ : ಹಾರುವ ಸಿಖ್ ಎಂದೇ ಖ್ಯಾತಿ ಹೊಂದಿರುವ ದಂತಕಥೆಯ ಮಿಲ್ಕಾ ಸಿಂಗ್ , ಒಲಂಪಿಕ್ ಸ್ಪರ್ಧೆಯಲ್ಲಿ ಉಪಯೋಗಿಸಿದ್ದ ಶೂ ಗಳನ್ನು ಸ್ವಯಂ ಸೇವಾ ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ. ಇವುಗಳನ್ನು ಹರಾಜು ಮಾಡುವ ಮೂಲಕ ಸಂಸ್ಥೆ ಹಣ ಸಂಗ್ರಹಿಸಲಿದೆ.
ಭಾರತದ ದಂತಕಥೆಯಾಗಿರುವ ಹಾರುವ ಸಿಖ್ ಮಿಲ್ಕಾ ಸಿಂಗ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 1960 ರ ರೋಮ್ ಒಲಂಪಿಕ್ಸ್ ನಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ವೇಳೆ ಸಿಂಗ್ ಬಳಿಸಿದ್ದ ಶೂ ಗಳನ್ನು ಸ್ವಯಂಸೇವಾ ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ. ಆ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಹಿಂದಿ ಚಿತ್ರರಂಗದ ನಟ ರಾಹುಲ್ ಬೋಸ್ ನಡೆಸುತ್ತಿರುವ ಚಾರಿಟಬಲ್ ಟ್ರಸ್ಟ್ ಗೆ ಈ ಕೊಡುಗೆ ನೀಡಿದ್ದಾರೆ.
* ಕೃತಜ್ಞತೆ ಸಲ್ಲಿಸಿದ ರಾಹುಲ್ :
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ರಾಹುಲ್ ಬೋಸ್ ಚಾರಿಟಬಲ್ ಟ್ರಸ್ಟ್ ಶ್ರಮಿಸುತ್ತಿದೆ. ಈ ಸಲುವಾಗಿಯೇ ರಾಹುಲ್ ಬೋಸ್ ನಡೆಸುತ್ತಿರುವ ಸಂಸ್ಥೆಗೆ ಮಿಲ್ಕಾ ಸಿಂಗ್ ಈ ಕೊಡುಗೆ ನೀಡಿದ್ದಾರೆ. ಈ ಶೂಗಳನ್ನು ಹರಾಜು ಮಾಡುವ ಮೂಲಕ ಟ್ರಸ್ಟ್ ಹಣ ಸಂಗ್ರಹಿಸಿ ಅದನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಮಿಲ್ಕಾ ಸಿಂಗ್ ಅವರ ಈ ಉದಾರ ಗುಣಕ್ಕೆ ರಾಹುಲ್ ಕೃತಜ್ಞತೆ ಸಲ್ಲಿಸಿದ್ದಾರೆ.





0 Comments
You can be the first one to leave a comment.