ಖತರ್ನಾಕ್ ಇರಾನಿ ಗ್ಯಾಂಗ್ : 26 ಮಂದಿಯ ಬಂಧನ
*ವಿಮಾನದಲ್ಲಿ ಬಂದು ಹೋಗುತ್ತಿದ್ದ ಖದೀಮರು, * ಕದ್ದ ಮಾಲನ್ನಿಡಲು ಸೇಫ್ ಲಾಕರ್, * ಜೀವನ ಶೈಲಿ ನೋಡಿ ಪೊಲೀಸರೇ ಸುಸ್ತು…
ಬೆಂಗಳೂರು : ನಕಲಿ ಪೊಲೀಸರ ವೇಷದಲ್ಲಿ ಅಸಲಿ ಪೊಲೀಸರನ್ನು ಯಾಮಾರಿಸುತ್ತಿದ್ದ ಬೀದರ್ ನ `ಇರಾನಿ ಗಲ್ಲಿ ‘ ಗ್ಯಾಂಗ್ನ ಎಡೆಮುರಿ ಕಟ್ಟಿದ ಬೆಂಗಳೂರು ಪೊಲೀಸರು 26 ಮಂದಿಯನ್ನು ಬಂಧಿಸಿದ್ದಾರೆ.
ಬೀದರ್ನಗರ, ಇರಾನಿ ಗಲ್ಲಿ, ಹುಸೇನಿ ಕಾಲೊನಿಯಲ್ಲಿ ವಾಸವಿದ್ದ ಟಕಿ ಅಲಿ ಅಲಿಯಾಸ್ ಟಿಕಿ, ಗುಲಾಬ್ಅಲಿ ಅಲಿಯಾಸ್ ಗುಲಾಂ ಅಲಿ, ಮುಸ್ಲಿಂ ಅಲಿ, ರಾಜಾ ಹುಸೇನ್, ಗುಲಾಂ ಅಲಿ ಅಲಿಯಾಸ್ ಮಸ್ಹಸನ್, ಸಮೀರ್ ಅಲಿ, ಉಜ್ಜತ್ಅಲಿ, ಸಲ್ಮಾನ್ ಅಲಿ, ಪಾಪಲಿ, ಮುಜ್ಲುಂ ಹುಸೇನ್, ಹುಸೇನ್ ಅಲಿ, ಮುಜ್ಮಿಲ್ ಅಲಿಯಾಸ್ ನವಾಜ್, ಶರಾಫತ್ ಅಲಿ, ನಕ್ಕೀಂಅಲಿ, ಶಬ್ಬೀರ್ ಅಲಿ, ಜಾವೆದ್ ಅಲಿ, ಅಪ್ಪಣ್ಣ, ಆಸೀರ್ ಹುಸೇನ್, ಜಾಫರ್ ಅಲಿ, ಹೈದರ್ಅಲಿ, ಇಫರ್ಾನ್, ಔಲಾದ್ ಹುಸೇನ್, ಮೌಸಿಂ ಅಲಿ, ಗುಲಾಂ ಅಬ್ಬಾಸ್, ಮಕ್ಬೂಲ್ ಅಲಿ ಹಾಗೂ ಜವಾರ್ ಅಲಿ ಬಂಧಿತರು.
ಆರೋಪಿಗಳಿಂದ 65 ಲಕ್ಷ ರೂ. ಮೌಲ್ಯದ 2 ಕೆ.ಜಿ. 406 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದರು. ಆರೋಪಿಗಳ ಬಂಧನದಿಂದ ಈಶಾನ್ಯ, ಪೂರ್ವ, ಪಶ್ಚಿಮ ಹಾಗೂ ಆಗ್ನೇಯ ವಿಭಾಗಗಳಲ್ಲಿರುವ 31 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದಿದ್ದ 55 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರ ತನಿಖೆ ನಡೆಸಲು ಡಿಸಿಪಿಗಳು ಸೇರಿದಂತೆ 200 ಪೊಲೀಸರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಉತ್ತಮ ಕಾರ್ಯ ನಿರ್ವಹಿಸಿರುವ ತಂಡಕ್ಕೆ ಸೂಕ್ತ ಬಹುಮಾನ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.
* ಕೃತ್ಯ ಹೇಗೆ:
ಒಂಟಿಯಾಗಿ ಓಡಾಡುವ ಮಹಿಳೆಯರು ಹಾಗೂ ವೃದ್ದೆಯರನ್ನು ಗಮನಿಸುತ್ತಿದ್ದರು. ನಂತರ ಠಾಕು-ಟೀಕಾಗಿ ಬಟ್ಟೆ ಧರಿಸಿ ಮಹಿಳೆಯರನ್ನು ತಡೆಯುತ್ತಿದ್ದರು. ಪೊಲೀಸ್ ಗತ್ತಿನಲ್ಲೇ ಮಾತನಾಡಿಸುತ್ತಿದ್ದ ಅವರು, `ನಾವು ಪೊಲೀಸರು, ಸಿಬಿಐ ಹಾಗೂ ಸಿಐಡಿ ಅಧಿಕಾರಿಗಳೆಂದು ಪರಿಚಯ ಮಾಡಿಕೊಂಡು ಪಕ್ಕದ ರಸ್ತೆಯಲ್ಲಿ ಗಲಾಟೆ ನಡೆಯುತ್ತಿದೆ. ಆಭರಣ ಬ್ಯಾಗ್ನಲ್ಲಿ ಇಟ್ಟುಕೊಳ್ಳುವಂತೆ’ ಹೇಳುತ್ತಿದ್ದರು. ಅವರೇ ಕವರ್ ಕೊಟ್ಟು ಆಭರಣಗಳನ್ನು ಬಿಚ್ಚಿಸಿಕೊಂಡು ನಂತರ ಗಮನ ಬೇರೆ ಕಡೆ ಸೆಳದು ಮತ್ತೊಂದು ಕವರ್ ನೀಡುತ್ತಿದ್ದರು. ಮಹಿಳೆಯರು ಮನೆಗೆ ಹೋಗಿ ನೋಡಿಕೊಂಡಾಗ ಆ ಕವರ್ನಲ್ಲಿ ಕಲ್ಲುಗಳಿರುತ್ತಿದ್ದವು. ಮಹಿಳೆಯರನ್ನು ವಂಚಿಸುವ ಮೊದಲು ಅವರದೇ ತಂಡದ ಸದಸ್ಯರು ಆಭರಣ ಧರಿಸಿ ಅವರ ಮುಂದೆ ಹಾದು ಹೋಗುತ್ತಿದ್ದರು. ಆಗ ಅವರ ಮಾರ್ಗದರ್ಶನದಂತೆ ಆಭರಣ ಕಳಚಿ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದರು. ಇದನ್ನು ನಂಬಿ ಮಹಿಳೆಯರು ವಂಚನೆಗೊಳಗಾಗುತ್ತಿದ್ದರು.
* ವಿಮಾನದಲ್ಲೇ ಪ್ರಯಾಣ
ಇರಾನಿ ಗಲ್ಲಿ ಕಿಲಾಡಿಗಳು, ಕನ್ನಡ, ಹಿಂದಿ, ತೆಲುಗು, ಇಂಗ್ಲಿಷ್ ಮಾತನಾಡುವ ಚಾಣಾಕ್ಷರು. ವಿಮಾನದಲ್ಲಿ ಬೆಂಗಳೂರಿಗೆ ಬಂದು ತಮ್ಮ ಕಸುಬು ಮುಗಿಸಿ ಹೋಗುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಮೂರ್ನಾಲ್ಕು ಕಡೆ ಒಂದೇ ದಿನ ಆಭರಣಗಳನ್ನು ಲಪಟಾಯಿಸಿ ಪರಾರಿಯಾಗುತ್ತಿದ್ದರು. ಇದರಿಂದಾಗಿ ಆರೋಪಿಗಳ ಸುಳಿವು ಸಿಗುತ್ತಿರಲಿಲ್ಲ. ಈ ಖದೀಮರ ಮನೆ ಹವಾನಿಯಂತ್ರಿತ ಸೌಲಭ್ಯ ಹೊಂದಿದ್ದು, ಇಟಾಲಿಯನ್ ಶೈಲಿಯಲ್ಲಿ ಅಡುಗೆ ಕೋಣೆಯನ್ನು ವಿನ್ಯಾಸ ಮಾಡಲಾಗಿದೆ. ಕದ್ದ ಮಾಲಿನಿಂದ ಬಂದ ಹಣ, ಆಭರಣಗಳನ್ನು ಸುರಕ್ಷಿತವಾಗಿಡಲು ಮನೆಗಳಲ್ಲಿ ಸೇಫ್ ಲಾಕರ್ ಮಾಡಿಕೊಂಡಿದ್ದರು. ಇವರ ಜೀವನ ಶೈಲಿ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.




0 Comments
You can be the first one to leave a comment.