Home » Featured »

ಕಳಂಕಿತರ ಸಮರ್ಥನೆ ಬೇಡ: BSY ಪೂಜಾರಿ ಹಿತನುಡಿ

 

Mangalore ;  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಶಿಗೆ ಹೊರಡುವ ಸಮಯದಲ್ಲಿ ಬಿಜೆಪಿಯಲ್ಲಿ ಆರೋಪ ಹೊತ್ತ ಶಾಸಕರಿಗೆ ಮಾರ್ಗದರ್ಶನ ಮಾಡುವುದು ಒಳ್ಳೆಯದು. ಬದಲಾಗಿ ತಪ್ಪನ್ನು ಸಮರ್ಥನೆ ಮಾಡುವಂತಹ ಹೇಳಿಕೆಗಳನ್ನು ನೀಡಿದರೆ ಕಾಶಿ ವಿಶ್ವನಾಥ ದೇವರು ಅನುಗ್ರಹ ಮಾಡಲಿಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಲೇವಡಿ ಮಾಡಿದರು.

ನೀಲಿಚಿತ್ರ ಮನೆಯಲ್ಲಿ ನೋಡುವುದು ಸಹಜವಲ್ಲವೇ..? ಅದರಲ್ಲಿ ತಪ್ಪೇನಿದೆ ಎಂಬಂತಹ ಮಾತುಗಳನ್ನಾಡಿ ಯಡಿಯೂರಪ್ಪ ಅವರು ಕಳಂಕಿತ ಶಾಸಕರನ್ನು ಸಮರ್ಥಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು ವಿಧಾನ ಸಭೆಯಲ್ಲಿ ಮಾಡಿದ ತಪ್ಪು ಕೆಲಸವನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವುದರಿಂದ ನಾವು ಮುಂದಿನ ಜನಾಂಗಕ್ಕೆ ತಪ್ಪು ಸಂದೇಶ ಕೊಟ್ಟಂತಾಗುವುದಿಲ್ಲವೇ ಎಂದು ಪ್ರಶ್ನಿಸಿದ ಪೂಜಾರಿ, ಬಿಜೆಪಿಯಲ್ಲಿ ಇಂದು ಮೌಲ್ಯಗಳೇ ಇಲ್ಲವಾಗಿದೆ. ಯಡಿಯೂರಪ್ಪನವರು ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಉದ್ಧಟತನ ಬಿಟ್ಟು ಪಕ್ಷದ ರಾಜಕಾರಣಿಗಳಿಗೆ ಸದ್ಭುದ್ಧಿ ಕೊಡುವಂತೆ ಕಾಶಿಯಲ್ಲಿ ಪ್ರಾರ್ಥಿಸಲಿ ಎಂದು ಹೇಳಿದರು.

  • ಮಡೆಸ್ನಾನಕ್ಕೆ ಪ್ರತಿಯಾಗಿ ಉರುಳುಸೇವೆ ;

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕ ಉರುಳು ಸೇವೆ ನಡೆಯಿತು. ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಸ್ವತಃ ಉರುಳು ಸೇವೆ ಮಾಡಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಟಿಯ ಸಂದರ್ಭದಲ್ಲಿ ನಡೆಯುವ ಮಡೆ ಮಡೆ ಸ್ನಾನಕ್ಕೆ ಪ್ರತಿಯಾಗಿ ಆಯೋಜಿಸಲಾಗಿದ್ದ ಉರುಳು ಸೇವೆಯ ಬಗ್ಗೆ ಮಾತನಾಡಿದ ಜನಾರ್ದನ ಪೂಜಾರಿ, ದೇವರಿಗೆ ಭಕ್ತಿಯಿಂದ ಸೇವೆ ಮಾಡಬೇಕಾದರೆ ಸ್ವಚ್ಛತೆ ಮುಖ್ಯ. ಎಂಜಲೆಲೆಯಲ್ಲಿ ಉರುಳುವುದರಿಂದ ರೋಗ ಗುಣವಾಗುತ್ತದೆ ಎಂದು ವೈಜ್ಞಾನಿಕವಾಗಿ ನಿರಾಧಾರ. ಆದ್ದರಿಂದ ಕುದ್ರೊಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪ್ರಾಕಾರವನ್ನು ಡೆಟ್ಟಾಲ್ ಮತ್ತು ಫಿನಾಯಿಲ್ನಿಂದ ಶುಚಿಗೊಳಿಸಿ ಭಕ್ತರ ಉರುಳು ಸೇವೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಶಿವರಾತ್ರಿಯ ಮುನ್ನಾದಿನ ತ್ರಯೋದಶಿಯಂದು ಬೆಳಗ್ಗೆ ಮಹಿಳೆಯರೂ ಸೇರಿದಂತೆ ಸುಮಾರು 100 ಜನ ಭಕ್ತರು ಉರುಳು ಸೇವೆಯಲ್ಲಿ ಭಾಗವಹಿಸಿದರು. ಒದ್ದೆ ಬಟ್ಟೆ, ಮಡಿಯಂತಹ ಯಾವುದೇ ನಿಯಮಗಳನ್ನು ಭಕ್ತರ ಮೇಲೆ ಹೇರದೇ ಮುಕ್ತ ಮನಸ್ಸಿನಿಂದ ಉರುಳು ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು. ಉರುಳುಸೇವೆಯ ಬೆನ್ನಲ್ಲೇ ಮಹಿಳೆಯರು ಬೆಳ್ಳಿಯ ರಥವೆಳೆದರು. ಮೂರು ಸುತ್ತು ರಥ ಎಳೆದ ಬಳಿಕ ದೇವರಿಗೆ ಪೂಜೆ ಅರ್ಪಿಸಲಾಯಿತು.

 


 

Tags

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment