ಎಲ್ಬಿ ಸಾವನ್ನು ಸಲ್ಲೇಖನ ವ್ರತಕ್ಕೆ ಹೊಲಿಸುವುದು ಎಷ್ಟು ಸರಿ…?
ಡಾ. ಎಲ್. ಬಸವರಾಜು ನಿಧನದ ಹಿನ್ನೆಲೆಯಲ್ಲಿ ಈ ವಾರದ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ನೋಡುತ್ತಿದ್ದೆ. ಬಸವರಾಜು ಅವರು ಸಲ್ಲೇಖನ ವ್ರತ ಕೈಗೊಂಡು, ಜೈನ ಪದ್ಧತಿ ಅನುಸಾರ ಸಾವನ್ನು ಬರಮಾಡಿಕೊಂಡರು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಸಂಗತಿಯನ್ನು ಪ್ರಜಾವಾಣಿ ಸಾಪ್ತಾಹಿಕದಲ್ಲಿ ಕವಿಯೊಬ್ಬರು ಹೇಳಲೋ-ಬೇಡವೋ ಎಂಬ ದಾಟಿಯಲ್ಲಿ ಬಸವರಾಜು ಸಾವಿಗೆ ಸಲ್ಲೇಖನ ವ್ರತವನ್ನು ಜೋಡಿಸಲು ಯತ್ನಿಸಿದ್ದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು ಕೆಲ ದಿನಗಳ ಹಿಂದೆ ಮಾತಿಗೆ ಸಿಕ್ಕಿ, ಎಲ್ಬಿ ಅವರು ಮಹಾನ್ ಜಾತ್ಯತೀತವಾದಿ ಎಂದು ಗುಣಗಾನ ಮಾಡಲಾರಂಭಿಸಿದರು. ಇದೆಲ್ಲದರ ಬೆನ್ನಲ್ಲಿಯೇ ಮತ್ತೆ ದಿನೇಶ್ ಅಮಿನ್ಮಟ್ಟು ಅವರು ಚಿತ್ರಿಸಿದ ವಿವೇಕಾನಂದರ ಲೇಖನ, ಲೇಖನದ ಹಿಂದಿನ ಆಶಯ ನೆನಪಾಯಿತು.
ಮಹಾನ್ ವ್ಯಕ್ತಿಗಳು ಸತ್ತ ಬಳಿಕ, ಅವರನ್ನು ದೈವತ್ವಕ್ಕೆ ಏರಿಸುವ ಮಂದಿ ಎಲ್ಲ ಕಾಲದಲ್ಲಿಯೂ ಇರುತ್ತಾರೆ. ಮಟ್ಟು ಹೇಳಿದಂತೆ ವಿವೇಕಾನಂದರು ಆ ರೀತಿ ಚಿತ್ರಿತವಾಗಿರಬಹುದೇನೋ. ಗೊತ್ತಿಲ್ಲ. ಆದರೆ, ಎಲ್ಬಿ ಬದುಕಿದ್ದಾಗ ಅವರ ಬಗ್ಗೆ ಕೇಳಿದ ಸಂಗತಿಗಳು, ಸತ್ತ ಬಳಿಕ ಅವರನ್ನು ದೈವತ್ವಕ್ಕೆ ಏರಿಸುವ ಮೆಟ್ಟಿಲುಗಳಾಗಿದ್ದವು. ನಿಜ, ಎಲ್ಬಿ ಅವರು ನಾಡಿನ ಬಹುದೊಡ್ಡ ಸಂಶೋಧಕ. ಹರಿತ ವಿಶ್ಲೇಷಣೆ, ಖಚಿತ ಅಭಿಪ್ರಾಯ, ಸ್ಪಷ್ಟ ನಿಲುವು, ಪ್ರಗತಿಪರ ಧೋರಣೆಯಿಂದ ಸಾಹಿತ್ಯ ವಲಯದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಇದರ ಹೊರತಾಗಿಯೂ ಅವರೇಕೆ ತಮ್ಮ ಮಗನ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಲಿಲ್ಲ ಎಂಬುದು ನೆನಪಾದರೆ, ಎಲ್ಬಿ ಕೂಡ ಮಧ್ಯಮ ವರ್ಗದ ಶ್ರೀ ಸಾಮಾನ್ಯ(ಟಿಪಿಕಲ್) ಅಪ್ಪನಂತೆಯೇ ಇದ್ದರು ಎಂಬುದು ಮನವರಿಕೆಯಾಗುತ್ತದೆ !
* ಎರಡನೇ ಸಂಗತಿ- ಅವರು ಸಲ್ಲೇಖನ ವ್ರತ ಕೈಗೊಂಡಿರಬಹುದೇ ?
ಎಲ್ಬಿ ಅವರ ಸಾಕುಮಗಳು, ನಮ್ಮಪ್ಪ ಕಡೆ ದಿನಗಳಲ್ಲಿ ಊಟ ಬಿಟ್ಟರು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಸೂತಕದ ಮನೆಯಲ್ಲಿ, ದುಖಃದ ನಡುವೆ ಹೊಮ್ಮುವ ಇಂತಹ ಮಾತುಗಳು, ಭಾವೋದ್ವೇಗ, ದುಖಃ ಮತ್ತು ನೆನಪುಗಳ ಕನವರಿಕೆಯ ಮಿಶ್ರಣವಾಗಿ, ಒಂದಿಷ್ಟು ಅತಿರೇಕದ ನೆಲೆಯಲ್ಲಿ ನಿಂತಿರುತ್ತವೆ. ಅದನ್ನು ಬೇರೆ ರೀತಿ ಅರ್ಥೈಸಿಕೊಳ್ಳಲು ಹೋಗಬಾರದಷ್ಟೆ.
ಒಂದು ಕ್ಷಣ ಎಲ್ಬಿ ಅವರನ್ನು ಮರೆತು ಬಿಡಿ. ನಾನಾ ರೀತಿಯ ದೈಹಿಕ ತೊಂದರೆ, ಅಸಮರ್ಥತೆಗೆ ತುತ್ತಾಗಿ, ತಿಂಗಳುಗಟ್ಟಲೇ ಅಸ್ವಸ್ಥರಾಗಿ ಹಾಸಿಗೆ ಹಿಡಿಯುವ 92 ವರ್ಷದ ವೃದ್ಧರು ಚೇತರಿಸಿಕೊಳ್ಳುವುದು ಕಷ್ಟ. ಏಕೆಂದರೆ ದೇಹದ ಅನೇಕ ಅಂಗಾಂಗಗಳು ಕೆಲಸ ಮಾಡಲು ಶಕ್ತವಾಗಿರುವುದಿಲ್ಲ. ಅಂತಹ ವ್ಯಕ್ತಿಗಳಿಗೆ ಅನ್ನ- ನೀರು ಕೊಟ್ಟರೂ, ಅದನ್ನು ಜೀಣರ್ಿಸಿಕೊಳ್ಳಲು ದೇಹಕ್ಕೆ ಆಗುವುದಿಲ್ಲ. ಬಹುತೇಕರು ಇದೇ ಕಾರಣಕ್ಕೆ ಕೊನೆಯುಸಿರು ಎಳೆಯುತ್ತಾರೆ. ಇಂತಹ ವೃದ್ಧರು ಅನ್ನ- ನೀರು ಬಿಟ್ಟರು ಎನ್ನುವುದಕ್ಕಿಂತ, ದೇಹ ಸಹಕರಿಸಲಿಲ್ಲ ಎಂದೇ ಅರ್ಥ. ಎಲ್ವಿ ಅವರ ಸಾವು ಕೂಡ ಈ ತೆರನದ್ದೆ ಆಗಿರಬಹುದು. ಬಲ್ಲವರಾರು ? ಈ ರೀತಿ ಆಗುವುದು ತಪ್ಪಲ್ಲ. ಮಾಗಿದ ಆದರೆ ಆರೋಗ್ಯ ತಪ್ಪಿದ ದೇಹ ಮಣ್ಣಿಗೆ ಮರಳುವುದೇ ಹೀಗೆ. ಅದಕ್ಕೆ ಇದು ವಿವೇಕಾನಂದರ ದೇಹ, ಎಲ್ಬಿ ಅವರ ದೇಹ ಎಂಬ ಬೇಧಭಾವ ಇರುವುದಿಲ್ಲ. ಇಷ್ಟಕ್ಕೂ ಕೆಲವರು ಹೇಳುವ ಪ್ರಕಾರ, ಎಲ್ಬಿ ಅವರು ಜೈನ ಧರ್ಮದ ಬಗ್ಗೆ ಕಡೆಗಾಲದಲ್ಲಿ ಪ್ರೀತಿ ಹೊಂದಿ ಸಲ್ಲೇಖನ ವ್ರತ ಕೈಗೊಂಡಿದ್ದರೆ, ಅವರ ಸಾವಿನ ನಂತರದ ಕರ್ಮಗಳೇಕೆ ಅಪ್ಪಟ ವೀರಶೈವ ಧರ್ಮದ ಪ್ರಕಾರ, ಅದೂ ವೀರಶೈವ ರುದ್ರಭೂಮಿಯಲ್ಲಿಯೇ ನಡೆಯಬೇಕಿತ್ತು ?
ಈ ಯಾವ ಸಂಗತಿಗಳು ಎಲ್ಬಿ ಅವರ ಬಗ್ಗೆ ನಮ್ಮ ಗೌರವವನ್ನು ಕಡಿಮೆ ಮಾಡುವುದಿಲ್ಲ. ಅಭಿಮಾನಿಗಳು ಹೇಗೆ ಒಂದು ವ್ಯಕ್ತಿತ್ವಕ್ಕೆ ದೈವತ್ವ ನೀಡುತ್ತಾರೆ ಎಂಬ ಸಂಗತಿ ನೆನಪಾದಾಗ, ಇದೆಲ್ಲವೂ ಕಣ್ಮುಂದೆ ಹಾದು ಹೋಗಿತು !
ಕಡೆ ಮಾತು- ಸತ್ತವರ ಬಗ್ಗೆ ಒಳ್ಳೆಯ ಮಾತನಾಡಬೇಕು ಎಂಬುದು ಸಮಾಜದ ನಂಬಿಕೆ. ಅದನ್ನೇಕೆ ಘಾಷಿಗೊಳಿಸುವಿರಿ ಎಂದು ಕೇಳಿದರೆ, ಅದಕ್ಕೆ ನಾನು ಹೊಣೆಯಲ್ಲ. ಹಲ ದಶಕಗಳ ಹಿಂದೆಯೇ ಹುತಾತ್ಮರಾದ ಮಹಾತ್ಮಾ ಗಾಂಧಿ, ನೆಹರು, ವಿವೇಕಾನಂದರನ್ನೇ ನಾವು ಬಿಟ್ಟಿಲ್ಲ !
- ಜೀವನ್




4 Comments
It is not good article. since 30 years, I know LB. ple don’t assassinate his powerful personality.
R hugar
not agree with hugar. there is nothing wrong with article. One should accept LB, with his weakness. No man is perfect. good one. keep it up just kannada.
ಒಳ್ಳೆ ಅಭಿರುಚಿಯ ಲೇಖನವಲ್ಲ. ನನಗೆ ಗೊತ್ತಿರುವ ಪ್ರಕಾರ ಎಲ್ಬಿ ನಿಜಕ್ಕೂ ಜಾತ್ಯತೀತವಾದಿಗಳು ಮತ್ತು ಅವರ ದಲಿತ, ಶೋಷಿತ ಕಾಳಜಿ ಪ್ರಶ್ನಾತೀತ. ಎಂದೋ ಯಾವತ್ತೋ ನಡೆದ ಘಟನೆಯನ್ನು ಈಗ ಪ್ರಸ್ತಾಪಿಸಿರುವುದು ಸರಿಯಲ್ಲ. ಸಲ್ಲೇಖನ ವ್ರತ ಮಾಡುತ್ತೇನೆಂದು ಎಲ್ಬಿ ಎಲ್ಲಿಯೂ ಹೇಳಿಲ್ಲ. ಆ ರೀತಿ ಪತ್ರಕರ್ತರು ವ್ಯಾಖ್ಯಾನಿಸಿದರೆ,ಅದು ಎಲ್ಬಿ ವ್ಯಕ್ತಿತ್ವದ ತಪ್ಪಲ್ಲ. ಪತ್ರಕರ್ತ ಮಾಡಿದ ತಪ್ಪನ್ನು ಮುಂದಿಟ್ಟುಕೊಂಡು, ಎಲ್ಬಿ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತೆ ಬರೆಯುವುದು ಎಷ್ಟರ ಮಟ್ಟಿಗೆ ಸರಿ ?
- ಶಿವಕುಮಾರ್, ಉಪನ್ಯಾಸಕ, ಕೋಲಾರ
nothing wrong with article. Let us accept Lb, with all his strengths and weakens.
- rajeeva